ಏರ್​ಪೋರ್ಟ್​​ಗೆ ಬಂದಿಳಿಯುತ್ತಿದ್ದಂತೆ ನೆಲದ ಮೇಲೆ ಮಂಡಿಯೂರಿ ಕುಳಿತುಬಿಟ್ಟರು ಇವರು...

UAE 12 may 20
Published on

ಲಖನೌ: ಕೊವಿಡ್​-19ರ ಪರಿಣಾಮವನ್ನು ಜಗತ್ತಿನ ಅನೇಕ ದೇಶಗಳು ಅನುಭವಿಸುತ್ತಿವೆ. ಒಂದೆಡೆ ಸೋಂಕಿನ ತಾಂಡವ..ಮತ್ತೊಂದೆಡೆ ಆರ್ಥಿಕತೆ ಕುಸಿತದ ದುಷ್ಪರಿಣಾಮ..

ಈ ನಡುವೆ ಅದೆಷ್ಟೋ ಮಂದಿ ಹೊರದೇಶಗಳಲ್ಲಿರುವ ಭಾರತೀಯರು ಮರಳಿ ತಾಯ್ನೆಲಕ್ಕೆ ಬಾರಲಾಗದೆ, ಇದ್ದ ದೇಶದಲ್ಲೂ ಇರಲಾಗದೆ ಪರಿತಪಿಸುತ್ತಿದ್ದಾರೆ. ಬಹುತೇಕ ದೇಶಗಳಲ್ಲಿ ಕರೊನಾ ಲಾಕ್​ಡೌನ್​ ಇರುವುದರಿಂದ ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಅವರಿಗೀಗ ನಮ್ಮ ಭಾರತ ದೇಶಕ್ಕೆ ಹೋದರೆ ಸಾಕು ಎಂಬ ಪರಿಸ್ಥಿತಿ.

ಹೀಗಿರುವಾಗ ಕೇಂದ್ರ ಸರ್ಕಾರ ಹೊರದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ತಾಯ್ನೆಲಕ್ಕೆ ವಿಶೇಷ ವಿಮಾನಗಳ ಮೂಲಕ ಕರೆತರುತ್ತಿದೆ. ಕಳೆದ ವಾರದಿಂದಲೂ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಅದೆಷ್ಟೋ ಭಾರತೀಯರನ್ನು ಏರ್​ ಇಂಡಿಯಾ ಹೊತ್ತು ತಂದಿದೆ.

ಹೀಗೆ ಬಂದವರೆಲ್ಲರ ಕಣ್ಣಲ್ಲೂ ಸಮಾಧಾನ. ಬಾಯಲ್ಲಿ ಭಾರತ ದೇಶದ ಬಗ್ಗೆ ಹೊಗಳಿಕೆ..ಇದ್ದ ದೇಶದಲ್ಲಿ ಅನುಭವಿಸಿದ ಕಷ್ಟಗಳ ವಿವರಣೆ...

ಇದೀಗ ಒಂದು ಫೋಟೋ ವೈರಲ್​ ಆಗಿದೆ. ಕೊವಿಡ್​-19ರ ಬಿಕ್ಕಟ್ಟಿನಿಂದ ಯುಎಇದಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವ ಭಾರತಕ್ಕೆ ಬಂದು ಏರ್​ಪೋರ್ಟ್​ಗೆ ಕಾಲಿಡುತ್ತಿದ್ದಂತೆ ನೆಲದ ಮೇಲೆ ಮಂಡಿಯೂರಿ ಕುಳಿತು ಭೂಮಿಗೆ ಹಣೆ ಹಚ್ಚಿ ನಮಸ್ಕರಿಸಿದ್ದಾರೆ.

ಇದು ಉತ್ತರ ಪ್ರದೇಶದ ಲಖನೌ ಏರ್​ಪೋರ್ಟ್​ನಲ್ಲಿ ಮೇ 10ರಂದು ನಡೆದಿದ್ದು. ಈ ವ್ಯಕ್ತಿ ಯುಎಇನಿಂದ ಲಖನೌಗೆ ಏರ್​ ಇಂಡಿಯಾ ಮೂಲಕ ಬಂದು ಇಳಿದರು. ಬಂದವರೇ ಏರ್​ಪೋರ್ಟ್​ನಲ್ಲೇ ತಾಯ್ನೆಲಕ್ಕೆ ಹಣೆ ಹಚ್ಚಿ ನಮಸ್ಕರಿಸಿದ್ದಾರೆ. ಇದೊಂದು ಫೋಟೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಇದು ತಾಯ್ನಾಡಿನ ಮಹತ್ವ..ಅದೆಷ್ಟೋ ಜನರಿಗೆ ಈಗದರ ಬೆಲೆ ಗೊತ್ತಾಗುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಫೋಟೋ ಕ್ಲಿಕ್ಕಿಸಿದ್ದ ಮನೀಶ್​ ಅಗ್ನಿಹೋತ್ರಿ ಎಂಬುವರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net