

ಹೊಸದಿಲ್ಲಿ: 71 ವರ್ಷದ ಆರ್ಯುವೇದ ವೈದ್ಯರೊಬ್ಬರಿಗೆ ವಂಚಕರ ಗ್ಯಾಂಗ್ವೊಂದು ವಿಡಿಯೋ ಕಾಲ್ ಮಾಡುವ ಮೂಲಕ ಪಂಗನಾಮ ಹಾಕಿದ್ದು, ವೈದ್ಯ ತನ್ನ ಫೋನ್ ಸ್ವಿಚ್ ಆಫ್ ಮಾಡುವ ಮಟ್ಟಕ್ಕೆ ಆತನಿಗೆ ಬ್ಯಾಕ್ ಟು ಬ್ಯಾಕ್ ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ಪೂರ್ವ ದೆಹಲಿಯ ಖಿಚ್ರಿಪುರ್ ಪ್ರದೇಶದಲ್ಲಿ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚಕರ ಹಾವಳಿ ಹೆಚ್ಚುತ್ತಿದ್ದು, ಅಪರಿಚಿತ ವ್ಯಕ್ತಿಗಳ ನಂಬರ್ನಿಂದ ದೂರವಾಣಿ, ವಿಡಿಯೋ ಕಾಲ್ಗಳು ಬರುತ್ತಿವೆ. ಈ ಕರೆಗಳನ್ನು ಸ್ವೀಕರಿಸಿದ ವ್ಯಕ್ತಿಗಳು ತಮ್ಮದೇನು ತಪ್ಪಿಲ್ಲದೇ ಹೋದರು ಕೇವಲ ಒಂದು ಬೆದರಿಕೆ, ಆಮಿಷಗಳಿಗೆ ಸಿಲುಕಿ ಕೋಟಿಗಟ್ಟಲೇ ಹಣವನ್ನು ಕಳೆದುಕೊಂಡು ಬೀದಿಪಾಲಾದ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇದೀಗ ಅದೇ ಸಾಲಿಗೆ ಆರ್ಯವೇದ ವೈದ್ಯರೊಬ್ಬರು ಸಿಲುಕಿದ್ದು, ಹಣ ಕಳೆದುಕೊಳ್ಳುವುದರ ಜತೆಗೆ ವಿಪರೀತ ಚಿತ್ರಹಿಂಸೆ ಅನುಭವಿಸಿದ್ದಾರೆ.
ಪೂರ್ವ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದು, ಎಫ್ಐಆರ್ ಪ್ರಕಾರ, ವೈದ್ಯರು ಕಳೆದ ವರ್ಷ ಜುಲೈ 13 ರಂದು ತನಗೆ ವೀಡಿಯೊ ಕರೆ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. "ಅಪರಿಚಿತ ಮಹಿಳೆಯೊಬ್ಬಳು ವಿಡಿಯೋ ಕರೆ ಮಾಡಿದ್ದು, ಯಾರೋ ಒಬ್ಬರಿಗೆ ವೈದ್ಯಕೀಯ ಸಹಾಯ ಬೇಕಿದೆ ಎಂದು ಹೇಳಿದಳು. ಮಾತು ಮುಂದುವರಿಸಿದಂತೆ ಕರೆ ದಿಢೀರ್ ಕಟ್ ಆಯಿತು. ನಾನು ಯಾರೋ ರೋಗಿಗೆ ನನ್ನ ಸಹಾಯ ಅಗತ್ಯವಿದೆ ಎಂದು ಭಾವಿಸಿದೆ" ಎಂದು ಎಫ್ಐಆರ್ನಲ್ಲಿ ಹೇಳಿದ್ದಾರೆ.
"ತಡರಾತ್ರಿ ಮತ್ತೆ ವೀಡಿಯೋ ಕರೆ ಬಂದಿದ್ದು, ನಿದ್ದೆಯಲ್ಲಿದ್ದ ಕಾರಣಕ್ಕೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಜುಲೈ 14ರಂದು ಮತ್ತೆ ಕಾಲ್ ಬಂದಿದ್ದು, ಅದನ್ನು ಎತ್ತಿದ ಕ್ಷಣದಲ್ಲಿ ಮಹಿಳೆಯೊಬ್ಬಳು ವಿವಸ್ತ್ರಗೊಂಡರು. ತಕ್ಷಣ ಕರೆಯನ್ನು ಕಟ್ ಮಾಡಿ ನನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದೆ. ಜುಲೈ 15 ರಂದು, ಫೋನ್ ಅನ್ನು ಆನ್ ಮಾಡಿದಾಗ, ದೆಹಲಿ ಪೊಲೀಸ್ ಸಿಬ್ಬಂದಿ ಎಂದು ತಮ್ಮನ್ನು ಪರಿಚಯಿಸಿಕೊಂಡ ಅನೇಕ ವ್ಯಕ್ತಿಗಳು ನಿರಂತರವಾಗಿ ಕಾಲ್ ಮಾಡಿ ಬೆದರಿಕೆಯಿಟ್ಟರು" ಎಂದು ತಿಳಿಸಿದ್ದಾರೆ.
"ಕರೆ ಮಾಡಿದ ಕಿಡಿಗೇಡಿಗಳು ನನ್ನ ವೀಡಿಯೊ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ಪದೇ ಪದೇ ಹೇಳುತ್ತಿದ್ದರು. ಇದರಿಂದ ನಾನು ಭಯಭೀತನಾಗಿದ್ದೆ. ಪ್ರಯಾಣ ವೆಚ್ಚ, ನ್ಯಾಯಾಲಯದ ವೆಚ್ಚದ ಹೆಸರಿನಲ್ಲಿ ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದಾರೆ. ಇದುವರೆಗೆ 8.59 ಲಕ್ಷ ರೂ.ಗಳನ್ನು ವಂಚಕರಿಗೆ ಕೊಟ್ಟಿದ್ದೇನೆ. ಅವರೆಲ್ಲರೂ ಹಣ ಕೊಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡುತ್ತಿದ್ದರು" ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ), 420 (ವಂಚನೆ), 506 (ಕ್ರಿಮಿನಲ್ ಬೆದರಿಕೆ), 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).