ಟ್ರಾಫಿಕ್​ ಕಿರಿಕ್​ಗೆ ಪರ್ಯಾಯ ಸೇತು

Ull_River Road
Published on

ಅನ್ಸಾರ್​ ಇನೋಳಿ ಉಳ್ಳಾಲ

ಪ್ರಮುಖ ಸೇತುವೆಯಲ್ಲಿ ಟ್ರಾಫಿಕ್​ ಕಿರಿಕ್​ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ... ಹೆದ್ದಾರಿ ಸಂಪರ್ಕವೇ ಇಲ್ಲದ ಜಾಗಕ್ಕೂ ಬಂದಿದೆ ಸೇತುವೆ ಭಾಗ್ಯ... ಹರೇಕಳ ಬಳಿಕ ಉಳ್ಳಾಲ ತಾಲೂಕಿಗೆ ಬಂದಿದೆ ಮತ್ತೊಂದು ಬೃಹತ್​ ಮೊತ್ತದ ಸೇತುವೆ..! ಉಳ್ಳಾಲ ನಗರಸಭಾ ವ್ಯಾಪ್ತಿಯ ಕೋಟೆಪುರದಿಂದ ಮಂಗಳೂರು ನಗರಪಾಲಿಕೆ ವ್ಯಾಪ್ತಿಯ ಬೋಳಾರಕ್ಕೆ ಸಂಪರ್ಕ ಸೇತುವೆ ಕಾಮಗಾರಿಗೆ ಶ್ರೀ ಚಾಲನೆ ಸಿಗಲಿದೆ.

ಉಳ್ಳಾಲ ಮತ್ತು ಬೋಳಾರ ಹೆಸರು ಕೇಳಿದ್ರೆ ಮೊದಲಿಗೆ ನೆನಪಿಗೆ ಬರುವುದು ನದಿ, ಸಮುದ್ರ, ಮೀನುಗಾರಿಕೆ. ಇದೀಗ ಇವೆರಡೂ ಪ್ರದೇಶಕ್ಕೆ ನೇರ ಸಂಪರ್ಕ ಆಗುವ ಕಾಲ ಸನ್ನಿಹಿತವಾಗಿದೆ. ಯಾರೊಬ್ಬರೂ ಬೇಡಿಕೆ ಸಲ್ಲಿಸದಿದ್ದರೂ ಸ್ಥಳಿಯ ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್​ ಅವರು ಉಳ್ಳಾಲದಿಂದ ಬೋಳಾರಕ್ಕೆ ಸೇತುವೆ ನಿಮಾರ್ಣಕ್ಕೆ ಈಗಾಗಲೇ 220 ಕೋಟಿ ರೂ. ಯೋಜನೆ ತಯಾರಿಸಿದ್ದು ಸರ್ಕಾರದಿಂದ ಅನುದಾನ ಮಂಜೂರಾಗಿದೆ.

ಸೇತುವೆಯಿಂದಾಗುವ ಪ್ರಯೋಜನ

ಉಳ್ಳಾಲದ ಕೋಟೆಪುರದಿಂದ ಸೇತುವೆ ನಿಮಾರ್ಣ ಆಗಲಿದ್ದು ಇದು ಬೋಳಾರ ಸಂಪರ್ಕಿಸಲಿದೆ. ಕೋಟೆಪುರ ಹಲವು ನದಿಗಳ ಸಂಗಮ ಸ್ಥಾನ ಎನಿಸಿದ್ದು ಇಲ್ಲಿಂದಲೇ ಸಮುದ್ರಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ. ಈ ಕಾರಣದಿಂದಾಗಿ ಹಿಂದೆಲ್ಲಾ ಕೋಟೆಪುರದಲ್ಲಿ ಬೃಹತ್​ ಹಡಗುಗಳು ನಿಮಾರ್ಣ ಆಗಿ ಸಮುದ್ರಕ್ಕೆ ತಲುಪಿಸಲಾಗುತ್ತಿತ್ತು. ಈ ಭಾಗದಲ್ಲಿ ಇಂದಿಗೂ ಹಲವು ಮೀನುಗಾರಿಕಾ ಕಾರ್ಖಾನೆಗಳಿವೆ.

ರಾಷ್ಟ್ರೀಯ ಹೆದ್ದಾರಿ ನಿಮಾರ್ಣ ಸಂದರ್ಭ ನದಿಗಳಿದ್ದರೆ ಸೇತುವೆ ನಿಮಾರ್ಣಕ್ಕೆ ಕೆಲವು ಕೋಟಿ ಅನುದಾನ ಇಡಲಾಗುತ್ತದೆ. ಆದರೆ ಸೇತುವೆ ನಿಮಾರ್ಣಕ್ಕೆ ಗುರುತಿಸಲಾಗಿರುವ ಕೋಟೆಪುರ ರಾಷ್ಟ್ರೀಯ ಹೆದ್ದಾರಿಯಿಂದಲೂ ದೂರವಿದೆ. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೂ ಗ್ರಾಮೀಣ ಭಾಗದಂತಿದೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವ ಅವಕಾಶ ಇಲ್ಲಿರುವ ಕಾರಣ ಸೇತುವೆ ನಿಮಾರ್ಣ ಸೂಕ್ತ ಎನಿಸಿದೆ.

ಸೇತುವೆ ಇಲ್ಲಿಂದ ನೇರವಾಗಿ ಬೋಳಾರಕ್ಕೆ ಸಂಪರ್ಕಿಸುವ ಕಾರಣ ಮೀನುಗಾರರು ಮೊದಲ ಫಲಾನುಭವಿಗಳಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆಯಾದರೆ ಮಂಗಳೂರಿನಿಂದ ಉಳ್ಳಾಲ, ಕಾಸರಗೋಡು ಅಥವಾ ಇತರ ಭಾಗಗಳಿಗೆ ಪ್ರಯಾಣಿಸುವವರಿಗೆ ಪರ್ಯಾಯ ರಸ್ತೆಯೂ ಆಗಲಿದೆ.

ಈ ಸೇತುವೆ ಮೂಲಕ ಉಳ್ಳಾಲ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಕನಸು ಶಾಸಕರದ್ದು. ಸೇತುವೆ ಅಡಿ ಭಾಗದಲ್ಲಿ ಅಲ್ಲಲ್ಲಿ ಪಿಲ್ಲರ್​ ಅಳವಡಿಸದೆ ಬೋಟು, ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದು, ಸೇತುವೆಯುದ್ದಕ್ಕೂ ಆಕರ್ಷಕ ದೀಪಾಲಂಕಾರ, ಮಧ್ಯಭಾಗದಲ್ಲಿ ವೀವ್​ ಪಾಯಿಂಟ್​ ನಿರ್ಮಿಸುವ ಯೋಜನೆ ಶಾಸಕರದ್ದು. ಯೋಜನೆಯ ನೀಲಿನಕಾಶೆ ಸಿದ್ಧವಾಗುತ್ತಿದ್ದು, ಶ್ರೀ ಕಾಮಗಾರಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ.

ಹರೇಕಳ ಬಳಿಕ ಎರಡನೇ ಯೋಜನೆ

ಉಳ್ಳಾಲ ತಾಲೂಕಿನ ಹರೇಕಳ ಅಡ್ಯಾರ್​ ಸಂಪರ್ಕ ಸೇತುವೆ ಅನಿರೀಕ್ಷಿತ ಯೋಜನೆಯಾಗಿತ್ತು. ರಾಜ್ಯ ಹೆದ್ದಾರಿ ಹರೇಕಳದಿಂದ ರಾ.ಹೆ. ಅಡ್ಯಾರ್​ ಸಂಪರ್ಕ ಕಲ್ಪಿಸುವ ಈ ಯೋಜನೆ 198 ಕೋಟಿಯದ್ದಾಗಿದೆ. ಆದರೆ ಯಾವುದೇ ಹೆದ್ದಾರಿ ಇಲ್ಲದ ಕೋಟೆಪುರ- ಬೋಳಾರ ಸೇತುವೆಗೆ ಅಂದಾಜು 220 ಕೋಟಿ ರೂ. ನಿರೀಕ್ಷಿಸಲಾಗಿದೆ. ಹರೇಕಳ- ಅಡ್ಯಾರ್​ ಸೇತುವೆ 600 ಮೀಟರ್​ ಇದ್ದರೆ, ಕೋಟೆಪುರ- ಬೋಳಾರ ಸೇತುವೆ 1.42 ಕಿ.ಮೀ. ಇರಲಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಸೇತುವೆಗಳಿಗೆ ಅನುದಾನ ನೀಡುವುದು ಸಾಮಾನ್ಯ. ಆದರೆ ಪ್ರಥಮ ಬಾರಿಗೆ ಹೆದ್ದಾರಿಯೇ ಇಲ್ಲದೆ ಸೇತುವೆ ನಿಮಾರ್ಣಕ್ಕೆ ಸರ್ಕಾರ ಅನುದಾನ ನೀಡಿದೆ. ಇದೊಂದು ದೂರದೃಷ್ಟಿಯ ಯೋಜನೆಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಕೋನ ಹೊಂದಲಾಗಿದೆ. - ಯು.ಟಿ.ಖಾದರ್​, ವಿಧಾನಸಭಾಧ್ಯಕ್ಷ ಕೋಟೆಪುರ ಮತ್ತು ಬೋಳಾರ ಮೀನುಗಾರಿಕಾ ವ್ಯವಹಾರದ ಕೇಂದ್ರ ಸ್ಥಾನ ಎನಿಸಿದೆ. ಎರಡೂ ಪ್ರದೇಶಕ್ಕೆ ಸಂಪರ್ಕ ಸೇತುವೆ ನಿಮಾರ್ಣಗೊಂಡರೆ ಸ್ಥಳಿಯರು ಮಾತ್ರವಲ್ಲದೆ ಮೀನುಗಾರರಿಗೆ ಅತ್ಯಂತ ಹೆಚ್ಚಿನ ಪ್ರಯೋಜನ ಆಗಲಿದೆ. - ಯು.ಕೆ.ಯೂಸುಫ್​, ಕಾರ್ಯದರ್ಶಿ, ಉಳ್ಳಾಲ ಬ್ಲಾಕ್​ ಕಾಂಗ್ರೆಸ್​ ಕೋಟೆಪುರದಿಂದ ಬೋಳಾರಕ್ಕೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ನಿಮಾರ್ಣ ಆಗಲಿದೆ ಎನ್ನುವ ಯೋಚನೆಯೂ ಇರಲಿಲ್ಲ. ಆದರೆ ಶಾಸಕರು ಯೋಜನೆ ರೂಪಿಸಿ ಅನುದಾನ ಮಂಜೂರುಗೊಳಿಸಿದ್ದಾರೆ. ಯೋಜನೆ ಕಾರ್ಯಗತಗೊಂಡರೆ ಐದತ್ತು ನಿಮಿಷದಲ್ಲೇ ಮಂಗಳೂರು ತಲುಪಲು ಸಾಧ್ಯ. - ಅಶೋಕ್​ ಕ್ಲಿಕ್​ ತೊಕ್ಕೊಟ್ಟು, ಆಟೋಗ್ರಾಫರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net