More

    ಅಮೃತಧಾರೆ; ಜೀವನದಲ್ಲಿ ಬೇಕಿರುವುದು ಆಂತರಿಕ ಸಮತೋಲನ

    ಅಮೃತಧಾರೆ; ಜೀವನದಲ್ಲಿ ಬೇಕಿರುವುದು ಆಂತರಿಕ ಸಮತೋಲನಜೀವನ ಎಂದರೆ ಸಮತೋಲನ, ಜೀವವೆಂದು ನೀವು ಪರಿಗಣಿಸುವ ಪ್ರತಿಯೊಂದೂ, ‘ನಾನು’ ಎಂದು ನೀವು ಗುರುತಿಸಿಕೊಳ್ಳುವ ಪ್ರತಿಯೊಂದೂ ಸಮತೋಲನದಲ್ಲಿದ್ದಾಗ ಮಾತ್ರ ಸುಂದರವಾಗಿರುತ್ತದೆ.

    ಕುರ್ಚಿಯ ಮೇಲೆ ಕುಳಿತುಕೊಂಡಿರುವವರು ದೇಹದ ಸಮತೋಲನ ಕಳೆದುಕೊಂಡರೆ, ಕುರ್ಚಿಯಿಂದ ಬಿದ್ದುಬಿಡುತ್ತಾರೆ. ಕುಳಿತುಕೊಳ್ಳುವುದು ಸಮತೋಲನ. ನಿಂತುಕೊಳ್ಳುವುದಂತೂ ಖಂಡಿತ ಸಮತೋಲನ. ಈ ಎರಡು ಕಾಲುಗಳ ಮೇಲೆ ನಿಂತು ಸಮತೋಲನ ಮಾಡುವುದು ಸಾಧಾರಣವಾದ ಕ್ರಿಯೆ ಅಲ್ಲ. ನೀವು ಅದನ್ನು ಲಘುವಾಗಿ ತೆಗೆದುಕೊಂಡುಬಿಟ್ಟಿದ್ದೀರಿ. ನೀವು ಮಗುವಾಗಿದ್ದಾಗ, ಎದ್ದು ನಿಲ್ಲಲು ಪ್ರಯತ್ನಿಸುತ್ತಾ ಎಷ್ಟು ಪ್ರಯಾಸಪಟ್ಟಿರಿ! ಈಗೇನೋ ಸಲೀಸಾಗಿ ಮಾಡುತ್ತಿದ್ದೀರ. ದೇಹ ಸ್ವಲ್ಪ ಸಮತೋಲನ ತಪ್ಪಿದರೆ ಕೇವಲ ನಿಂತುಕೊಳ್ಳುವುದೇ ಎಂತಹ ಸಾಹಸವಾಗುತ್ತದೆ ಅಲ್ಲವೇ? ಈ ಸಮತೋಲನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.

    ಅಲ್ಲದೆ, ನಡೆಯುವುದು ಸವೋಚ್ಚ ಸಮತೋಲನ. ಕೇವಲ ಎರಡು ಪಾದಗಳು! ನೀವು ಹೀಗೆ ನಡೆಯುತ್ತೀರಲ್ಲ, ಅದಕ್ಕೆ ಎಷ್ಟು ಸಮತೋಲನ ಬೇಕಾಗಿದೆ ಎಂದು ಗೊತ್ತೇ? ನಡೆಯುವಾಗ ಕೇವಲ ನಿಮ್ಮನ್ನು ಸಮತೋಲನದಲ್ಲಿ ಇಟ್ಟಿರಲು ಎಷ್ಟೊಂದು ಅಂಶಗಳು ತೊಡಗಿವೆ ಎಂದು ತಿಳಿದಿದೆಯೇ? ಇದೊಂದು ದೊಡ್ಡ ವಿಷಯ.

    ಆಲೋಚನೆಗಳಲ್ಲಿ ಸಮತೋಲನ ಕಳೆದುಕೊಂಡರೆ, ಅದನ್ನು ಬುದ್ಧಿಭ್ರಮಣೆ ಎನ್ನುತ್ತೇವೆ. ನಿಮ್ಮ ಭಾವನೆಗಳಲ್ಲಿ ನೀವು ಸಮತೋಲನ ಕಳೆದುಕೊಂಡರೆ, ಅದು ಎಷ್ಟು ಭಯಾನಕವಾಗಬಹುದು. ನಿಮಗೇ ಗೊತ್ತಿದೆ. ಬದುಕಿನ ಸಾರವೇ ಆದ ಭಾವನೆಗಳು – ಅವು ಸಮತೋಲನ ತಪ್ಪಿದರೆ, ನಿಮಗೂ ಸುತ್ತಲಿನವರಿಗೂ ಎಂತಹ ಚಿತ್ರಹಿಂಸೆ ಆಗುತ್ತದೆ, ಅಲ್ಲವೇ? ನಿಮ್ಮ ದೇಹ, ಆಲೋಚನೆ, ಭಾವನೆ, ನಿಮ್ಮ ಚಟುವಟಿಕೆ ಸಮತೋಲನದಲ್ಲಿದ್ದಾಗ ಮಾತ್ರ ಎಲ್ಲವೂ ಸುಂದರವಾಗಿರುತ್ತದೆ.

    ಈ ಸಮತೋಲನವನ್ನು ಜೀವನಕ್ಕೆ ತರುವುದಾದರೂ ಹೇಗೆ? ಈ ಸಮತೋಲನದ ತಳಹದಿ ಏನು? ಸಮತೋಲನ ಇದ್ದಾಗ – ನೀವು ಹೇಗೆ ರೂಪುಗೊಂಡಿರುತ್ತೀರಿ ಎಂದರೆ ರಣರಂಗದಲ್ಲಿದ್ದರೂ ನೀವು ಸಮತೋಲನ ಹೊಂದಿರುತ್ತೀರಿ. ನಿಮ್ಮ ಆಂತರಿಕ ಸಮತೋಲನ ಪರಿಪೂರ್ಣವಾಗಿದ್ದರೆ, ನೀವು ಬಾಹ್ಯದ – ನಿಮ್ಮ ದೇಹ, ನಿಮ್ಮ ಮನಸ್ಸುಗಳನ್ನು ಅತ್ಯುನ್ನತ ಮಟ್ಟಕ್ಕೆ ಸಜ್ಜುಗೊಳಿಸಬಹುದು – ಮತ್ತು ಒಬ್ಬ ಮನುಷ್ಯ ಇಷ್ಟು ಮಾತ್ರ ಮಾಡಬಲ್ಲ.

    ಹೊರಗಿನ ಪರಿಸ್ಥಿತಿಗಳಿಗೆ ಬಂದಾಗ, ‘ಪರಿಪೂರ್ಣ ಸಮತೋಲನ’ ಎಂಬುದು ಇಲ್ಲವೇ ಇಲ್ಲ. ನನ್ನೊಳಗೆ ನಾನು ಪರಿಪೂರ್ಣ ಸಮತೋಲನದಲ್ಲಿ ಇರಬಹುದು, ಆದರೆ, ಹೊರಗಿನ ಚಟುವಟಿಕೆಗಲ್ಲಿ ತೊಡಗಿದಾಗ ನಿರಂತರ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ. ಈ ಪ್ರಪಂಚದಲ್ಲಿ, ಹೊರಗಿನ ಚಟುವಟಿಕೆಗಳನ್ನು ಪರಿಪೂರ್ಣವಾಗಿ ಆಗಿ ಸಮತೋಲನ ಮಾಡಿದವರು ಯಾರೊಬ್ಬರೂ ಇಲ್ಲ. ನನ್ನ ದೃಷ್ಟಿಯಲ್ಲಿ ಇದು ಪರಿಪೂರ್ಣ ಆಗಿರಬಹುದು, ಆದರೆ, ಬೇರೆ ಯಾರೋ ಅದನ್ನು ‘ನಾನ್ಸೆನ್ಸ್’ ಎನ್ನಬಹುದು. ನೀವು, ‘ನಾನು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದೀನಿ, ಜೀವನದಲ್ಲಿ ಯಶಸ್ವಿಯಾಗಿದ್ದೀನಿ’ ಎಂದು ಭಾವಿಸಿರುತ್ತೀರಿ, ಇಡೀ ಪ್ರಪಂಚವೇ ನಿಮ್ಮನ್ನು ಚಪ್ಪಾಳೆ ತಟ್ಟಿ ಹೊಗಳುತ್ತಿರುತ್ತದೆ, ಆದರೆ, ನೀವು ಒಬ್ಬ ಕೆಲಸಕ್ಕೆ ಬಾರದವರು ಎಂದು ನಿಮ್ಮ ಮಕ್ಕಳು ನಿಕೃಷ್ಟತೆಯಿಂದ ಬಹಿರಂಗವಾಗಿ ಹೇಳುತ್ತಾರೆ.

    ಹೀಗಾಗಿ, ಹೊರಗಿನ ಪರಿಸ್ಥಿತಿಗಳಿಗೆ ಸದಾ ಹೊಂದಾಣಿಕೆಯ ಅವಶ್ಯಕತೆ ಇರುತ್ತದೆ. ನಾವಿರುವ ಪರಿಸ್ಥಿಗಳಿಗೆ ತಕ್ಕಂತೆ ನಿರಂತರವಾಗಿ ಅಳವಡಿಸಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಆದರೆ, ನೀವು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ನಿಮ್ಮೊಳಗೆ ಆಂತರ್ಯದಲ್ಲಿ ಪರಿಪೂರ್ಣ ಸಮತೋಲನ ಹೊಂದಿದ್ದರೆ ಮಾತ್ರ ಹೊರಗೂ ಸಮತೋಲನ ಬರುತ್ತದೆ. ಆಂತರ್ಯದಲ್ಲಿ ಸಮತೋಲನ ಇರುವಾಗ ಅದು ಸಹಜವಾಗಿ ನಿಮ್ಮ ಚಟುವಟಿಕೆಯಲ್ಲೂ ಅಭಿವ್ಯಕ್ತಗೊಳ್ಳುತ್ತದೆ. ಸಮತೋಲನ ಆಗಿರುವುದು ಚಟುವಟಿಕೆ ಅಲ್ಲ. ನೀವು ನಿಮ್ಮ ಭೌತಿಕ ದೇಹ ಮತ್ತು ಮನಸ್ಸನ್ನು ಅತ್ಯುನ್ನತ ಸಂಭಾವ್ಯತೆಯೊಡನೆ ಕಾರ್ಯನಿರ್ವಹಿಸುವಂತೆ ಮಾಡಿದರೆ, ಇರುವ ಅವಕಾಶ ಮತ್ತು ಸಂದರ್ಭಕ್ಕೆ ತಕ್ಕಂತೆ, ಸಮಾಜದಲ್ಲಿ ಏನೇನು ಮಾಡಬಹುದೋ ಅದೆಲ್ಲವನ್ನೂ ನಿಮ್ಮ ಅತ್ಯುತ್ತಮ ಸಾಮರ್ಥ್ಯದಿಂದ ಮಾಡುತ್ತಿದ್ದೀರಿ ಎಂದು ಅರ್ಥ. ನಿಮಗೆ ಮಾಡಲು ಆಗುವುದೂ ಅಷ್ಟೇ.

    ಬಾಹ್ಯದಲ್ಲಿ ಎಷ್ಟು ಚಟುವಟಿಕೆಗಳನ್ನು ಮಾಡಬೇಕು, ಹೇಗೆ ಮಾಡಬೇಕು- ಇವುಗಳನ್ನು ನೀವು ನಿರ್ಧರಿಸಬಾರದು. ನೀವಿರುವ ಸಂದರ್ಭಕ್ಕೆ ಏನು ಯುಕ್ತವೋ ಎನ್ನುವುದನ್ನು ಆಧರಿಸಿ ಚಟುವಟಿಕೆ ಮಾಡಬೇಕು, ನಿಮ್ಮ ಇಷ್ಟಾನಿಷ್ಟಗಳನ್ನು ಆಧರಿಸಿ ಅಲ್ಲ, ಹೌದಲ್ಲವೇ? ಆದರೆ, ಈಗ ಜನರು ಚಟುವಟಿಕೆಗಳು ತಮ್ಮ ಬಗ್ಗೆಯೇ ಎಂಬಂತೆ ಬದುಕುತ್ತಿದ್ದಾರೆ. ಇದಕ್ಕೆ ಸರಳ ಕಾರಣ ಎಂದರೆ- ನೀವು ಯಾರು ಎನ್ನುವುದು ಇನ್ನೂ ನಿಶ್ಚಿತವಾಗಿ ನೆಲೆಗೊಂಡಿಲ್ಲ. ಅದನ್ನು ನೀವು ಚಟುವಟಿಕೆಗಳ ಮುಖಾಂತರ ನೆಲೆಗೊಳಿಸಲು ಪ್ರಯತ್ನಿಸುತ್ತಿದ್ದೀರಿ.

    ‘ನಾನು ಯೋಚಿಸುತ್ತೇನೆ, ಆದ್ದರಿಂದ ನಾನು ಅಸ್ತಿತ್ವದಲ್ಲಿದ್ದೇನೆ’ ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ದಯವಿಟ್ಟು ಗಮನಿಸಿ – ನಿಮ್ಮ ಅಸ್ತಿತ್ವ ಮೊದಲೋ ಅಥವಾ ನಿಮ್ಮ ಯೋಚನೆ ಮೊದಲೋ? ನೀವು ಅಸ್ತಿತ್ವದಲ್ಲಿರುವ ಕಾರಣದಿಂದಲೇ ತಾನೇ ನಿಮಗೆ ಯೋಚನೆ ಮಾಡಲು ಆಗುತ್ತಿರುವುದು?

    ನೀವು ಒಂದು ವೇಳೆ – ನಾನು ಯೋಚಿಸುತ್ತೇನೆ ಆದ್ದರಿಂದ ನಾನು ಅಸ್ತಿತ್ವದಲ್ಲಿದ್ದೇನೆ, ನಾನು ಚಟುವಟಿಕೆಗಳನ್ನು ಮಾಡುತ್ತೇನೆ ಆದ್ದರಿಂದ ನಾನು ಅಸ್ತಿತ್ವದಲ್ಲಿದ್ದೇನೆ – ಎಂಬ ಹಾದಿಯನ್ನು ಹಿಡಿದರೆ, ನಿಮ್ಮ ಇಡೀ ಜೀವನದಲ್ಲಿ ಒಂದೇ ಒಂದು ಕ್ಷಣಕ್ಕೂ ಸಮತೋಲನ ಕಂಡುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಅದು ಸಾಧ್ಯವೇ ಇಲ್ಲ. ಹೊರಗಡೆ ಎಲ್ಲವೂ ಸುಂದರವಾಗಿ ವ್ಯವಸ್ಥೆಗೊಂಡಿರಬಹುದು; ಆದರೆ, ನಿಮ್ಮೊಳಗೆ ಅತಿಯಾದ ಅಸ್ತವ್ಯಸ್ತತೆ ಇರುತ್ತದೆ, ಏಕೆಂದರೆ, ನೀವು ಯಾವಾಗಲೂ ಪೂರ್ತಿಯಾಗಿ ಬೇರೆ ಮಾರ್ಗದಲ್ಲಿ ಹೋಗುತ್ತಿದ್ದೀರಿ, ಜೀವನವನ್ನು ತಲೆಕೆಳಗಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದೀರಿ.

    ನಾವು ಸಮತೋಲನ ಎಂದಾಗ, ಸಮತೋಲನದ ಬಗ್ಗೆ ನಿಮ್ಮ ಕಲ್ಪನೆ ಏನು? ಇವತ್ತಿನ ದಿನ ಎಲ್ಲವೂ ಚೆನ್ನಾಗಿ ನಡೆದರೆ, ಅದನ್ನು ಸಮತೋಲನ ಎನ್ನುವಿರಾ? ನನಗೆ ಸಮತೋಲನ ಎಂದರೆ – ನಾನು ಬಾಗಿಲು ಮುಚ್ಚಿ ಕೋಣೆಯಲ್ಲಿ ನಾಲ್ಕೈದು ದಿನಗಳು ಕುಳಿತುಕೊಂಡರೆ, ನನ್ನ ಮನಸ್ಸಿನಲ್ಲಿ ಒಂದೇ ಒಂದು ಯೋಚನೆಯೂ ಇರುವುದಿಲ್ಲ. ಯೋಚಿಸಬಾರದು ಎಂದೇನೂ ಪ್ರಯತ್ನಪಡುವುದಿಲ್ಲ, ಯೋಚನೆ ಮಾಡಬೇಕಾದ ಅವಶ್ಯಕತೆ ಇದ್ದರೆ ನಾನು ಯೋಚನೆ ಮಾಡುತ್ತೇನೆ, ಇಲ್ಲದಿದ್ದರೆ ನನ್ನ ಮನಸ್ಸಿಗೆ ಯಾವ ಯೋಚನೆಯೂ ಬರುವುದಿಲ್ಲ. ನನ್ನ ತಲೆ ಯಾವ ಯೋಚನೆಗಳೂ ಇಲ್ಲದೆ ಖಾಲಿಯಿರುತ್ತದೆ, ನಾನಾಗಿಯೇ ಯೋಚನೆ ಮಾಡುವವರೆಗೂ ಒಂದು ಯೋಚನೆಯೂ ಮನಸ್ಸಿನಲ್ಲಿ ತಾನಾಗೇ ಏಳುವುದಿಲ್ಲ. ಆದರೆ, ಎಲ್ಲರೂ ಹಾಗಲ್ಲ. ಹೊರಗಡೆಯಿಂದ ಯಾವುದಾದರೂ ವಿಷಯ ಸೆಳೆಯದಿದ್ದರೆ, ಯೋಚನೆಗಳೇ ಇಲ್ಲದ ಒಂದೇ ಒಂದು ಕ್ಷಣವನ್ನು ಸಹ ಅವರು ಅನುಭವಿಸಿರುವುದಿಲ್ಲ, ಅಲ್ಲವೇ? ಇದು ಏಕೆ ಅನುಭವ ಆಗಿಲ್ಲ ಎಂದರೆ ನೀವಲ್ಲದ ಯಾವುದೋ ಒಂದರ ಜೊತೆ ನಿಮ್ಮನ್ನು ನೀವು ಗುರುತಿಸಿಕೊಂಡಿದ್ದೀರಿ. ನೀವಲ್ಲದ ಯಾವುದೋ ಒಂದರ ಜೊತೆ ನಿಮ್ಮನ್ನು ನೀವು ಗುರುತಿಸಿಕೊಂಡ ಕ್ಷಣದಿಂದ ಯೋಚನೆ ಎನ್ನುವುದು ಕೊನೆಯಿಲ್ಲದ ಪ್ರಕ್ರಿಯೆಯಾಗುತ್ತದೆ.

    ನೀವೂ ಆ ರೀತಿಯ ಸಮತೋಲನ ತಲುಪಬೇಕಾದರೆ ಏನು ಮಾಡಬೇಕು? ನಿಮ್ಮ ಮನಸ್ಸು ನೀವು ಹೇಳಿದಂತೆ ಕೇಳಬೇಕು, ಅದು ಎಲ್ಲಕ್ಕಿಂತ ಮುಖ್ಯ. ಹಲವಾರು ರೀತಿಗಳಲ್ಲಿ ಇದನ್ನು ವ್ಯಕ್ತಪಡಿಸಲಾಗಿದೆ – ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ. ಜೀಸಸ್ ಸಹ ಹೀಗೆ ಹೇಳುವ ಮಟ್ಟಕ್ಕೆ ಹೋದರು. ‘ನಿಮ್ಮ ಕಣ್ಣು ಏಕವಾದರೆ, ನಿಮ್ಮ ಶರೀರವೆಲ್ಲ ಬೆಳಕಿನಿಂದ ತುಂಬುತ್ತದೆ’. ಹಾಗೆಂದರೆ – ನಿಮ್ಮ ಭೌತಿಕತೆಯಲ್ಲಿ ಯಾವಾಗಲೂ ನೀನು ಮತ್ತು ನಾನು ಎಂಬುದು ಇರುತ್ತದೆ. ಏನಾದರೂ ಎರಡಾಗಿದ್ದಾಗ ಮಾತ್ರ ಸಮತೋಲನ ಮಾಡುವ ಅವಶ್ಯಕತೆ ಏಳುವುದು. ಜೀವನದ ನಿಮ್ಮ ಅನುಭವ, ಈ ಕ್ಷಣದಲ್ಲಿ ನೀವು ಯಾರು ಎನ್ನುವ ದ್ವಂದ್ವವನ್ನು ಮೀರಿದಾಗ, ಭೌತಿಕತೆಯ ಮಿತಿಗಳನ್ನು ದಾಟಿದಾಗ, ಭೌತಿಕತೆಯ ಆಚೆಗೆ ಇರುವುದೊಂದು ನಿಮಗೆ ಜೀವಂತ ವಾಸ್ತವಿಕತೆಯಾಗಿ ಪರಿಣಮಿಸುತ್ತದೆ ಮತ್ತು ಈಗ ನಿಮಗಿರುವುದು ಒಂದೇ ಕಣ್ಣು. ನೀವು ಎಲ್ಲವನ್ನೂ ಸಮನಾಗಿ ನೋಡುತ್ತೀರಿ.

    ಈಗ ಎಲ್ಲವೂ ಪರಿಪೂರ್ಣ ಸಮತೋಲನದಲ್ಲಿದೆ. ನೀವು ಅದಕ್ಕಾಗಿ ಶ್ರಮಿಸಬೇಕಾಗಿಲ್ಲ, ಅಸ್ತಿತ್ವವೇ ಸಮತೋಲನ. ಭೌತಿಕ ವಾಸ್ತವಿಕತೆ ಮಾತ್ರ ಏರಿಳಿಯುತ್ತಿರುವುದು. ಬೇರೆ ಎಲ್ಲವೂ ಪರಿಪೂರ್ಣ ಸಮತೋಲನದಲ್ಲಿದೆ. ಭೌತಿಕತೆ ಮಾತ್ರ ಮೇಲೆ ಕೆಳಗೆ ಹೋಗುತ್ತಿರುವುದು, ಅಲ್ಲವೇ?

    ಹೀಗಾಗಿ, ಮಾನವ ಜೀವನದಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿರುವುದು – ಭೌತಿಕತೆಯ ಮಿತಿಗಳನ್ನು ಮೀರುವುದು. ಇಡೀ ಪ್ರಪಂಚದಲ್ಲಿ ಈ ಸಾಮರ್ಥ್ಯ ಪಡೆದು ಬಂದಿರುವ ಜೀವಿ ಎಂದರೆ ನೀವೊಬ್ಬರೇ. ಬೇರೆಲ್ಲ ಜೀವಜಂತುಗಳು ತಮ್ಮ ಭೌತಿಕತೆಯಲ್ಲಿ ಬಂಧಿತವಾಗಿವೆ. ನಿಮ್ಮಲ್ಲಿ ಭೌತಿಕತೆಯನ್ನು ಮೀರಿ ಹೋಗುವ ಸಾಮರ್ಥ್ಯವಿದೆ. ಆದರೆ, ನೀವು ಭೌತಿಕತೆಯ ವಿರುದ್ಧ ಹೋಗುತ್ತಿಲ್ಲ. ಇದು ದೇಹವನ್ನು ತಿರಸ್ಕರಿಸುವ ವಿಷಯವಲ್ಲ, ಬದಲಾಗಿ ಮೇಲ್ಮೈಯಲ್ಲಿ ಉಳಿಯದೇ ಕೊಂಚ ಆಳಕ್ಕಿಳಿಯುವ ವಿಷಯ. ಇದೊಂದು ಮಾತ್ರ ಪ್ರತಿಯೊಬ್ಬ ಮನುಷ್ಯನಿಗೂ ಸಂಭವಿಸಲೇಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts