More

    ಅಮೃತಧಾರೆ ಅಂಕಣ| ಪರಶಿವನು ಸ್ಮಶಾನವಾಸಿಯಾಗಿದ್ದೇಕೆ?

    ಅಮೃತಧಾರೆ ಅಂಕಣ| ಪರಶಿವನು ಸ್ಮಶಾನವಾಸಿಯಾಗಿದ್ದೇಕೆ?ಜನರಲ್ಲಿ ನಾನು ನೋಡುವ ಒಂದೇ ಸಮಸ್ಯೆ ಎಂದರೆ, ತೀವ್ರತೆಯ ಕೊರತೆ. ಅವರಲ್ಲಿ ಅಗತ್ಯವಿದ್ದಷ್ಟು ತೀವ್ರತೆಯಿದ್ದಿದ್ದರೆ, ಜೀವನಪೂರ್ತಿ ಮುಕ್ತಿಗಾಗಿ ಹೆಣಗಾಡಬೇಕಾಗಿರಲಿಲ್ಲ – ಇವತ್ತೇ ಅದನ್ನು ಮಾಡಬಹುದು. ಬಹುತೇಕ ಜನರಿಗೆ ಸಾವು ಹತ್ತಿರವಾದಾಗ ಅಥವಾ ಆ ಅಂತಿಮ ಕ್ಷಣಗಳಷ್ಟೇ ಅತ್ಯಂತ ತೀವ್ರವಾದ ಕ್ಷಣಗಳಾಗಿರುತ್ತವೆ. ಬಹುತೇಕ ಜನರು ಜೀವಮಾನದಲ್ಲೆಂದೂ ಪ್ರೀತಿಯಲ್ಲಿ, ಸಂತೋಷದಲ್ಲಿ, ನಗುವಿನಲ್ಲಿ, ಕಷ್ಟಗಳಲ್ಲಿ – ಎಲ್ಲೂ ಈ ಮಟ್ಟದ ತೀವ್ರತೆ ಅಥವಾ ಭಾವುಕತೆಯನ್ನು ಅನುಭವಿಸಿರುವುದಿಲ್ಲ.

    ಇದರಿಂದಲೇ ಶಿವನು ಹೋಗಿ ಸ್ಮಶಾನ ಅಥವಾ ಕಾಯಾಂತದಲ್ಲಿ ಕಾಯುತ್ತ ಕುಳಿತುಬಿಟ್ಟ. ಕಾಯ ಎಂದರೆ ‘ದೇಹ’. ಅಂತ ಎಂದರೆ ‘ಕೊನೆ’. ಕಾಯಾಂತ ಎಂದರೆ ‘ದೇಹದ ಕೊನೆಯಾಗುವುದು’ ಎಂದು ಅರ್ಥ- ‘ಜೀವದ ಕೊನೆ’ಯೆಂದಲ್ಲ. ಇದು ಕಾಯಾಂತ, ಜೀವಾಂತವಲ್ಲ. ನೀವು ಈ ಭೂಮಿಯಲ್ಲಿ ಏನೆಲ್ಲವನ್ನೂ ಪಡೆದುಕೊಳ್ಳುತ್ತೀರೋ, ಅದೆಲ್ಲವನ್ನೂ ಇಲ್ಲೇ ತೊರೆದು ಹೋಗಬೇಕು. ಶರೀರಕ್ಕೇ ಪ್ರಾಮುಖ್ಯ ಕೊಟ್ಟು ಜೀವಿಸಿದ್ದರೆ, ಆ ಶರೀರವನ್ನು ತ್ಯಜಿಸುವ ಕ್ಷಣವೇ ನಿಮಗೆ ಅತ್ಯಂತ ತೀವ್ರತೆಯ ಕ್ಷಣವಾಗಬಹುದು. ನಿಮ್ಮ ಶರೀರವನ್ನೂ ಮೀರಿದ್ದೇನಾದರೂ ಇದ್ದರೆ, ಆಗ ಅದು ಅಷ್ಟೊಂದು ಮುಖ್ಯ ಎನಿಸುವುದಿಲ್ಲ. ಯಾರು ತನ್ನತನದ ಅರಿವು ಹೊಂದಿರುತ್ತಾರೋ, ಕಾಯಾಂತ ಅಂತಹ ವಿಶೇಷ ಕ್ಷಣವಾಗುವುದಿಲ್ಲ. ಅದು ಮತ್ತೊಂದು ಕ್ಷಣ ಅಷ್ಟೇ.

    ಅಮರತ್ವವೆಂಬುದು ಎಲ್ಲರಲ್ಲೂ ಇರುವ ಒಂದು ನೈಜ ಸ್ಥಿತಿ. ಮರ್ತ್ಯವೆಂಬುದು ನಿಮ್ಮಿಂದ ಸೃಷ್ಟಿಯಾದ ತಪ್ಪು. ಇದು ಬದುಕಿನ ಬಗ್ಗೆ ಇರುವ ತಪ್ಪು ಗ್ರಹಿಕೆ. ಶರೀರ ಅಥವಾ ದೇಹಕ್ಕೆ ಕಾಯಾಂತ ಅಂತಿಮ, ಮತ್ತು ಅದು ಅನಿವಾರ್ಯ. ಅದೇ ನೀವು ಬರೀ ಕಾಯವಲ್ಲದೆ, ಜೀವವಾದರೆ, ಅಂದರೆ ಜೀವಂತ ಶರೀರವಾಗದೇ ಜೀವಿಯಾದರೆ, ಆಗ ಅಮರತ್ವವು ಸಹಜ ಸ್ಥಿತಿಯಾಗುತ್ತದೆ. ಅಮರರೇ ಅಥವಾ ಮರ್ತ್ಯರೇ ಎಂಬುದು ಅವರವರ ಗ್ರಹಿಕೆಯ ಪ್ರಶ್ನೆ, ಅಷ್ಟೇ.

    ಆದ್ದರಿಂದಲೇ ಜ್ಞಾನೋದಯವನ್ನು ‘ಸಾಕ್ಷಾತ್ಕಾರ’ ಎನ್ನುತ್ತಾರೆಯೇ ಹೊರತು ಸಿದ್ಧಿ ಅಥವಾ ಸಾಧನೆ ಎನ್ನುವುದಿಲ್ಲ. ನೀವು ಇದನ್ನು ಗಮನಿಸಬಲ್ಲಿರಾದರೆ, ಅದು ನಿಮಲ್ಲೇ ಇರುತ್ತದೆ. ಇದು ಗ್ರಹಿಕೆಯ ಪ್ರಶ್ನೆ, ಅಷ್ಟೇ ಹೊರತು ಯಾವುದೇ ಮೂಲಭೂತ ಅಸ್ತಿತ್ವದ ಪ್ರಶ್ನೆಯಲ್ಲ. ನೀವು ಸಂಪೂರ್ಣ ಸಿದ್ಧವಾಗಿದ್ದರೆ, ಪಂಚೇಂದ್ರಿಯಗಳಿಂದಷ್ಟೇ ಅಲ್ಲದೆ, ಪ್ರಜ್ಞೆಯಿಂದಲೂ ಸನ್ನದ್ಧರಾಗಿದ್ದರೆ, ಆಗ ಕಾಯವಷ್ಟೇ ಅಲ್ಲ, ಜೀವದ ಬಗ್ಗೆಯೂ ನಿಮಗೆ ಅರಿವಿರುತ್ತದೆ ಮತ್ತು ಸಹಜವಾಗಿಯೇ ಅಮರರಾಗುತ್ತೀರಿ. ನೀವು ಅಮರತ್ವಕ್ಕಾಗಿ ಶ್ರಮಿಸಬೇಕಿಲ್ಲ. ಅದು ಇರುವುದು ಹೀಗೆ ಎನ್ನುವುದನ್ನು ಅರಿಯಬೇಕಷ್ಟೆ.

    ಆದ್ದರಿಂದಲೇ ಶಿವನು ತನ್ನ ವಾಸಸ್ಥಳವನ್ನು ಕಾಯಾಂತ ಅಥವಾ ಸ್ಮಶಾನಕ್ಕೆ ಬದಲಾಯಿಸಿಕೊಂಡನು. ‘ಸ್ಮ’ ಎಂದರೆ ಶವ ಅಥವಾ ಕಳೇಬರ. ಶಾನ್ ಎಂದರೆ, ಶಯ್ಯೆ ಅಥವಾ ಹಾಸಿಗೆ. ಕಳೇಬರಗಳು ಎಲ್ಲಿರುತ್ತವೋ ಅದೇ ಅವನ ವಾಸಸ್ಥಾನ, ಏಕೆಂದರೆ, ಜೀವಂತವಾಗಿರುವವರ ಜೊತೆ ಕೆಲಸ ಮಾಡುವುದು ವ್ಯರ್ಥ ಎಂದು ಅವನಿಗೆ ಗೊತ್ತಾಗಿದೆ. ನೀವು ಅವರನ್ನು ಬೇಕಾದ ತೀವ್ರತೆಯ ಮಟ್ಟಕ್ಕೆ ತರುವುದು ಸಾಧ್ಯವಿಲ್ಲ. ಜನರನ್ನು ಸ್ವಲ್ಪ ತೀವ್ರತೆಗೆ ತರಲೂ ಸಹ ಎಷ್ಟೆಲ್ಲಾ ಕಸರತ್ತು ಮಾಡಬೇಕಾಗುತ್ತದೆ.

    ಅಸ್ತಿತ್ವದ ಬಯಕೆಯನ್ನೇ ಗುರಿಯನ್ನಾಗಿಸಿಕೊಳ್ಳುವುದರಿಂದ ತೀವ್ರತೆಯು ಬರುವುದಿಲ್ಲ. ಈ ಜೀವಂತ ದೇಹದಲ್ಲಿ ಎರಡು ಮೂಲಭೂತ ಶಕ್ತಿಗಳು ಇವೆ. ಒಂದು ಬದುಕುವ ಪ್ರವೃತ್ತಿ, ಇನ್ನೊಂದು ಎಲ್ಲೆಗಳನ್ನು ಮೀರಿದ ವಿಸ್ತರಣೆ. ನೀವು ಬದುಕುವ ಪ್ರವೃತ್ತಿಯನ್ನು ಬಲಪಡಿಸಿದರೆ, ಅದು ಯಾವಾಗಲೂ ಕೆಳಹಂತದಲ್ಲೇ ಆಡುತ್ತದೆ. ಏಕೆಂದರೆ ಅಸ್ತಿತ್ವವೆಂದರೆ ಹುಷಾರಾಗಿ ಆಡುವುದು. ಎಲ್ಲೆಗಳನ್ನು ಮೀರುವ ಶಕ್ತಿಯನ್ನೇ ಸದೃಢಪಡಿಸಿಕೊಂಡರೆ, ಮಿತಿಯೇ ಇಲ್ಲದ ವಿಸ್ತರಣೆಗಾಗಿ ಅನ್ವೇಷಿಸುತ್ತಿದ್ದರೆ, ಮತ್ತು ನಿಮ್ಮ ಶಕ್ತಿಯನ್ನೆಲ್ಲ ಅದಕ್ಕೇ ಕ್ರೋಡೀಕರಿಸಿದ್ದರೆ, ಆಗ ಬದುಕಿನ ತೀವ್ರತೆ ಅಗಾಧವಾಗಿರುತ್ತದೆ.

    ಎಲ್ಲಾ ಜೀವಿಗಳಲ್ಲೂ ಅಸ್ತಿತ್ವದ ಮೂಲ ಪ್ರವೃತ್ತಿಯೇ ಪ್ರಬಲವಾಗಿರುತ್ತದೆ. ನಾವು ಮಾನವರಾಗಿ ರೂಪುಗೊಂಡ ವಿಕಸನದ ಹಂತದಲ್ಲಿ, ಒಂದು ಉಚ್ಚ ಮಟ್ಟದ ಅರಿವು ಮತ್ತು ಬುದ್ಧಿವಂತಿಕೆ ನಮ್ಮ ಜೀವನದಲ್ಲಿ ಹೊಕ್ಕಿದೆ – ಅಸ್ತಿತ್ವದ ಮೂಲ ಪ್ರವೃತ್ತಿಯನ್ನು ಸರಿಸಿ, ವಿಸ್ತರಣೆಯ ಜ್ವಾಲೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ಸುಸಮಯ. ಈ ಎರಡೂ ಶಕ್ತಿಗಳಲ್ಲಿ, ಒಂದು ನಿಮ್ಮಲ್ಲಿನ ತೀಕ್ಷ್ಣತೆಗೆ ಇಂಧನವಾದರೆ, ಇನ್ನೊಂದು ನಿಮ್ಮನ್ನು ಯಾವಾಗಲು ಕುಗ್ಗಿಸುತ್ತಲೇ ಇರುತ್ತದೆ.

    ನಿಮ್ಮನ್ನು ಮತ್ತು ನಿಮ್ಮ ಆಟಗಳನ್ನೆಲ್ಲಾ ನೋಡಿ ಬೇಸರಗೊಂಡು ಶಿವನು ಸ್ಮಶಾನದಲ್ಲಿ ಕುಳಿತುಕೊಂಡಿದ್ದಾನೆ. ಅವನು ಪ್ರಪಂಚದ ಮೂರ್ಖನಾಟಕಗಳನ್ನು ನೋಡಿ ಬೇಸತ್ತಿದ್ದಾನೆ. ನಿಜವಾದ ಆಟ ನಡೆಯುವುದು ಸ್ಮಶಾನದಲ್ಲೇ. ಹುಟ್ಟು ಮತ್ತು ಸಾವುಗಳಲ್ಲಷ್ಟೇ ಏನಾದರೂ ಆಗುವುದಿದ್ದರೆ ಆಗಬಹುದು ಅಷ್ಟೇ. ಪ್ರಸೂತಿ ಗೃಹಗಳು ಮತ್ತು ಸ್ಮಶಾನಗಳು- ಈ ಎರಡೇ ಅರ್ಥಪೂರ್ಣ ಸ್ಥಳಗಳು.

    ಶಿವನು ಅತ್ಯಂತ ಅರ್ಥಪೂರ್ಣವಾದ ಸ್ಥಳದಲ್ಲಿ ಕುಳಿತಿದ್ದಾನೆ. ಆದರೆ ನೀವು ಭಯಗ್ರಸ್ಥರಾಗಿದ್ದು, ಅಸ್ತಿತ್ವ ಹಾಗೂ ಸ್ವಯಂ ಸಂರಕ್ಷಣಾ ಮಾರ್ಗದಲ್ಲಿದ್ದರೆ, ಇದು ನಿಮಗೆ ಅರ್ಥವೇ ಆಗುವುದಿಲ್ಲ. ನೀವು ವಿಸ್ತರಣೆಗೆ ಸನ್ನದ್ಧರಾಗಿದ್ದು, ಮುಕ್ತಿ ತಲುಪಲು ಬಯಸುವವರಾದರೆ ಮಾತ್ರ ಅರ್ಥವಾಗುತ್ತದೆ. ಅವನಿಗೆ ಬದುಕೇ ಪ್ರಮುಖವಾಗಿರುವವರು ಬೇಡ. ಬದುಕಲು ನಿಮಗೆ ಎರಡು ಕೈಕಾಲುಗಳು ಮತ್ತು ಒಂದಿಷ್ಟು ಸಕ್ರಿಯವಾಗಿರುವ ಮಿದುಳಿನ ಜೀವಕೋಶಗಳಿದ್ದರೆ ಸಾಕು. ಎರೆಹುಳುಗಳು, ಮಿಡತೆಗಳು, ಅಥವಾ ಯಾವುದೇ ಜೀವಿಯಾಗಬಹುದು, ಎಲ್ಲವು ಅಚ್ಚುಕಟ್ಟಾಗಿ ಬದುಕುತ್ತಿವೆ. ನಿಮಗೆ ಬದುಕಲು ಬೇಕಾಗಿರುವುದು ‘ಇಷ್ಟೇ’ ಮಿದುಳು. ಆದ್ದರಿಂದ ನೀವೇನಾದರೂ ಅಸ್ತಿತ್ವದ ಆಲೋಚನೆಯಲ್ಲೇ ಇದ್ದು, ಸ್ವಯಂ ಸಂರಕ್ಷಣೆಯೇ ಹೆಚ್ಚಾದರೆ, ಅವನಿಗೆ ಬೇಸರವಾಗಿ, ನಿಮ್ಮ ಸಾವನ್ನೇ ಎದುರು ನೋಡುತ್ತಾನೆ.

    ಅವನನ್ನು ‘ವಿನಾಶಕ’ ಎನ್ನುವುದು, ನಿಮ್ಮನ್ನು ನಾಶಮಾಡುತ್ತಾನೆ ಎಂದು ಅಲ್ಲ. ಅವನು ಸ್ಮಶಾನದಲ್ಲಿ ಕಾಯುವುದು ಶರೀರದ ನಾಶಕ್ಕೆ. ಏಕೆಂದರೆ ಶರೀರ ಇರುವವರೆಗೆ, ಸುತ್ತಲಿನ ಜನರಿಗೂ ಸಾವೆಂದರೇನು ಎಂದು ಅರ್ಥವಾಗುವುದಿಲ್ಲ. ಯಾರಾದರೂ ತುಂಬಾ ಆಪ್ತರು ಸತ್ತಾಗ, ಜನರು ಕಳೇಬರವನ್ನು ತಬ್ಬಿಕೊಂಡು, ಮುತ್ತಿಟ್ಟು, ಗೋಳಾಡಿ, ಅದನ್ನು ಮತ್ತೆ ಜೀವಂತವಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಒಮ್ಮೆ ಅದಕ್ಕೆ ಅಗ್ನಿ ಸೋಕಿದರೆ, ಯಾರೂ ಹತ್ತಿರ ಹೋಗಿ ಬೆಂಕಿಯ ಜ್ವಾಲೆಯನ್ನು ಅಪ್ಪಿಕೊಳ್ಳುವುದಿಲ್ಲ. ಅವರ ಸ್ವಯಂರಕ್ಷಣೆಯ ಪ್ರವೃತ್ತಿ ಹಾಗೆ ಮಾಡಬಾರದೆಂದು ಎಚ್ಚರಿಸುತ್ತದೆ.

    ಇದು ಸರಿ-ತಪ್ಪಿನ ಪ್ರಶ್ನೆಯಲ್ಲ, ಸೀಮಿತ ಭಾವ ಮತ್ತು ಅಂತಿಮ ಭಾವದ ಪ್ರತಿರೋಧವಾಗುತ್ತದೆ. ಸೀಮಿತವಾಗಿರುವುದು ತಪ್ಪೇ? ಇಲ್ಲ, ಆದರೆ ಸೀಮಿತತೆಯು ಯಾತನಾಮಯ. ಯಾತನೆಯಲ್ಲಿರುವುದು ತಪ್ಪೇ? ನೀವದನ್ನು ಆಹ್ಲಾದಿಸುವುದಾದರೆ ನಾನು ಯಾವುದರ ವಿರೋಧಿಯೂ ಅಲ್ಲ. ಆದರೆ ನನಗೆ ಇಷ್ಟವಾಗದ್ದೆಂದರೆ, ನೀವು ಹೋಗಬೇಕಾದ ದಿಕ್ಕನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಸಾಗುವುದು.

    ನಾನು ವಿರೋಧಿಸುವುದು ಪ್ರಜ್ಞಾಶೂನ್ಯರಾಗಿರುವುದನ್ನು, ಏಕೆಂದರೆ ಮನುಷ್ಯರಾಗಿರುವ ಸಾರವೇ, ಬೇರೆ ಯಾವುದೇ ಜೀವಿಗಳಿಗಿಂತ ಹೆಚ್ಚಿನ ಪ್ರಜ್ಞಾವಂತಿಕೆ ಹೊಂದಿರುವುದು. ಆದರೆ, ಬಹಳಷ್ಟು ಜನರು ಇದನ್ನು ತಪ್ಪಾಗಿಸುತ್ತಿದ್ದಾರೆ. ಸೃಷ್ಟಿಯೆಂದರೆ ಜಾಣ್ಮೆ. ಸೃಷ್ಟಿಕರ್ತನೆಂದರೆ, ಅಂತಿಮ ಜಾಣ್ಮೆ. ಆದರೆ, ಗೊಂದಲಗಳಲ್ಲಿರುವ ಜನರು ದೇವರ ಬಗ್ಗೆ ಮಾತನಾಡುತ್ತಾರೆ, ಮತ್ತು ಬಹಳಷ್ಟು ಜನ ಗೊಂದಲದಲ್ಲಿದ್ದಾಗ ಮಾತ್ರ ದೇವರ ಬಗ್ಗೆ ಮಾತನಾಡುತ್ತಾರೆ. ಬೆಚ್ಚಗಿನ ಹಿತವಾದ ಸ್ನಾನ ಮಾಡಿದಾಗ, ಒಳ್ಳೆಯ ಸಿನಿಮಾ ಹಾಡು ಹಾಡುತ್ತೀರಿ. ಅದೇ ನಿಮ್ಮನ್ನು ಕೊರೆಯುತ್ತಿರುವ ತೀರ್ಥಕುಂಡದಲ್ಲಿ ಹಾಕಿದರೆ – ‘ಶಿವ! ಶಿವಾ! ಎನ್ನುತ್ತೀರಿ. ಕಷ್ಟ ಬಂದ ತಕ್ಷಣ ಶಿವನ ಜ್ಞಾಪಕ ಬರುತ್ತದೆ. ಆದರೆ ನಿಮಗೆ ಬೇಕಾದ ಹಾಗೆ ಜೀವನ ಸಾಗುತ್ತಿದ್ದರೆ, ಆಗ ಬೇರೆಲ್ಲಾ ರೀತಿಯ ಜನ ಮತ್ತು ವಸ್ತುಗಳನ್ನು ನೆನೆಸಿಕೊಳ್ಳುತ್ತೀರಿ. ಯಾರಾದರೂ ಪಿಸ್ತೂಲನ್ನು ನಿಮ್ಮ ತಲೆಗೆ ಗುರಿ ಇಟ್ಟರೆ, ತಕ್ಷಣ ‘ಶಿವ! ಶಿವಾ! ಎಂದು ಕೂಗುತ್ತೀರಿ. ಕರೆಯಲು ಅವನು ಸರಿಯಾದ ವ್ಯಕ್ತಿಯಲ್ಲ. ಏಕೆಂದರೆ ಅವನು ಸ್ಮಶಾನದಲ್ಲಿ ಕಾಯುತ್ತಿದ್ದಾನೆ. ಯಾರಾದರೂ ತಲೆಗೆ ಪಿಸ್ತೂಲನ್ನು ಗುರಿ ಇಟ್ಟಾಗ, ನಿಮ್ಮನ್ನು ಕಾಪಾಡಲು ಶಿವನನ್ನು ಕರೆದರೆ ಅವನು ಖಂಡಿತ ಬರುವುದಿಲ್ಲ.

    ಜೀವನದಲ್ಲಿ ಹಿಮ್ಮುಖವಾಗಿ ನಡೆದರೆ ಎಂದಿಗೂ ಪ್ರತಿಫಲ ದೊರೆಯುವುದಿಲ್ಲ. ಅದೇ ಮುಂದಕ್ಕೆ ಚಲಿಸುತ್ತಾ ಹೋದರೆ, ಯಾವುದೇ ದಿಕ್ಕಿರಲಿ, ಯಾವುದೇ ಕಾರ್ಯವಾಗಲೀ – ನೀವು ಹಾಡಿ, ನರ್ತಿಸಿ, ಧ್ಯಾನ ಮಾಡಿ, ಅಳುತ್ತಿರಿ ನಗುತ್ತಿರಿ, ನಿಮ್ಮನ್ನು ಅದು ತೀವ್ರತೆಯ ಪರಾಕಾಷ್ಠೆಯತ್ತ ಒಯ್ಯುತ್ತದೆ, ಅಂದರೆ ಎಲ್ಲವೂ ಕಾರ್ಯಸಿದ್ಧಿಯಾಗುತ್ತದೆ. ಅನೇಕ ಜನರಿಗೆ ನೋವು ಕೊಡಲು ಚಾಕುವಿನಿಂದ ತಿವಿಯಬೇಕಾಗಿಲ್ಲ, ಸುಮ್ಮನೆ ಅವರಷ್ಟಕ್ಕೇ ಒಂಟಿಯಾಗಿ ಬಿಟ್ಟರೆ ಸಾಕು, ಚಡಪಡಿಸಿಬಿಡುತ್ತಾರೆ. ಅವರ ಸ್ವಯಂ ಸಂರಕ್ಷಣೆಯ ಪ್ರವೃತ್ತಿ ಸಮರ್ಥನೆಯ ಮಿತಿಗಳನ್ನು ಮೀರಿ ಜೀವನವನ್ನು ಕುಂಠಿತಗೊಳಿಸಿ ಹಿಮ್ಮುಖವಾಗಿಸುತ್ತಿದೆ. ಸ್ಮಶಾನದಲ್ಲಿ ಕುಳಿತಿರುವ ಶಿವನ ಸಂದೇಶ ಇದು: ನೀವು ಸತ್ತರೂ ಸಹ ಒಳ್ಳೆಯದೇ ಆಗುತ್ತದೆ, ಆದರೆ, ನಿಮ್ಮ ಜೀವನವನ್ನೇ ಕುಂಠಿತಗೊಳಿಸಿದರೆ, ಅದು ಕೆಲಸ ಮಾಡುವುದಿಲ್ಲ. ಜೀವನವನ್ನು ಕುಂಠಿತಗೊಳಿಸುತ್ತಿರೋ ಅಥವಾ ಸಾಕಾರಗೊಳಿಸುತ್ತೀರೋ, ಅದು ನೀವು ಏನು ಮಾಡುತ್ತೀರಿ, ಮಾಡುವುದಿಲ್ಲ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ, ಆದರೆ, ಈ ಜೀವನ, ಈ ಕ್ಷಣ ಎಷ್ಟು ಉತ್ಸಾಹಭರಿತವಾಗಿದೆ ಮತ್ತು ಗಾಢವಾಗಿದೆ ಎಂಬುದರಮೇಲೆ ಅವಲಂಬಿತವಾಗಿದೆ.

    ನೀವು ಮಾಡುವುದು ಉಪಯುಕ್ತವೋ ಅಲ್ಲವೋ ಎಂಬುದು ಪ್ರಶ್ನೆಯಲ್ಲ. ಉಪಯೋಗವಿಲ್ಲದ ವಸ್ತುಗಳಿಗೂ ತೀವ್ರತೆಯನ್ನು ತಂದರೆ, ಅದು ಕೂಡ ಆಗುತ್ತದೆ. ಆದರೆ ನೀವು ಮಾಡುವುದಕ್ಕೆಲ್ಲಾ ಒಂದು ಅರ್ಥವಿರಬೇಕು. ಅದು ಅರ್ಥಪೂರ್ಣವಾಗಿರದೆ, ಉಪಯುಕ್ತವಾಗಿಯೂ ಇರದಿದ್ದರೆ, ಅದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts