ಮಧ್ಯಾಹ್ನ 2ಕ್ಕೆ ಕಾಂಗ್ರೆಸ್​ನಿಂದ ನಡಿಗೆ: ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆ, ನ್ಯಾಷನಲ್​ ಕಾಲೇಜು ಗ್ರೌಂಡ್​ನಲ್ಲಿ ಸಾಂಸ್ಕೃತಿಕ ಕಲರವ

congress padayatre
Published on

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಇಂದು(ಸೋಮವಾರ) ಮಧ್ಯಾಹ್ನ ಕೆಪಿಸಿಸಿ ವತಿಯಿಂದ ಬೃಹತ್​ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮಧ್ಯಾಹ್ನ 2 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಯಾತ್ರೆ ಆರಂಭವಾಗಲಿದೆ. ಕೆ.ಆರ್​. ವೃತ್ತ, ಹಡ್ಸನ್​ ವೃತ್ತ, ಜೆ.ಸಿ. ರಸ್ತೆ, ಮಿನರ್ವ ವೃತ್ತ, ವಿವಿ ಪುರಂ ವೃತ್ತ ಮಾರ್ಗವಾಗಿ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನ ತಲುಪಲಿದೆ. ನಂತರ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದಾರಿಯುದ್ದಕ್ಕೂ ಕಾಂಗ್ರೆಸ್​ ನಡಿಗೆಗೆ ಸ್ವಾಗತ ಕೋರುವ ಬ್ಯಾನರ್​, ಫ್ಲೆಕ್ಸ್​, ಬಂಟಿಂಗ್ಸ್​ ರಾರಾಜಿಸುತ್ತಿವೆ.

ಪಾದಯಾತ್ರೆ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣ ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನ ಇರಲಿದೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರ ಚಿತ್ರವನ್ನು ಸಹ ಪ್ರದರ್ಶಿಸಲಾಗುತ್ತದೆ. ಮಂಗಳೂರು, ಬೆಳಗಾವಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕಲಾ ತಂಡಗಳು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದು, ಪಾದಯಾತ್ರೆ ಮಾರ್ಗ ಪೂರ್ತಿ ಸ್ವಯಂ ಸೇವಕರು, ಪ್ರತಿ ಕಿ.ಮೀ.ಗೆ ಒಂದರಂತೆ 6 ಆಂಬುಲೆನ್ಸ್​, ವೈದ್ಯರ ತಂಡ, ತಂಪುಪಾನೀಯ ವ್ಯವಸ್ಥೆ ಮಾಡಲಾಗುತ್ತಿದೆ.

ಸಂಜೆ ನ್ಯಾಷನಲ್​ ಕಾಲೇಜು​ ಮೈದಾನದಲ್ಲಿ ಖ್ಯಾತ ಗಾಯಕ ಹರಿಹರನ್​ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯುವುದು. ಯಾವುದೇ ರಾಜಕೀಯ ಭಾಷಣ ಇರುವುದಿಲ್ಲ. ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಉಚಿತವಾಗಿ ಮೆಟ್ರೋ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮೆಟ್ರೋ ಟಿಕೆಟ್​ ಖರೀದಿಸಲಾಗಿದೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಹೊರ ಭಾಗದಲ್ಲಿ ಪ್ರತ್ಯೇಕ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ವಾಹನಗಳಲ್ಲಿ ಆಗಮಿಸುವ ಜನರಿಗಾಗಿ ಆಯಾ ಪ್ರಮುಖ ರಸ್ತೆಗಳ ಮಾರ್ಗದ ಇಕ್ಕೆಲಗಳಲ್ಲಿ ಪಾರ್ಕಿಂಗ್​ಗೆ ಜಾಗ ಗುರುತಿಸಲಾಗಿದೆ.

-ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸುವ ಬೆಳಗಾವಿ, ಬಾಗಲಕೋಟೆ, ಹಾವೇರಿ, ಬೀದರ್​, ಹುಬ್ಬಳ್ಳಿ ಧಾರವಾಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಬಿಜಾಪುರ, ರಾಯಚೂರು, ವಿಜಯನಗರ (ಹೊಸಪೇಟೆ) ಶಿವಮೊಗ್ಗ ಜಿಲ್ಲೆಯವರು ಅಂತಾರಾಷ್ಟ್ರೀಯ ಎಕ್ಸಿಬಿಷನ್​ ಸೆಂಟರ್​ ಬಳಿ ವಾಹನ ನಿಲುಗಡೆ ಮಾಡಿ ನಾಗಸಂದ್ರ ಮೆಟ್ರೋ ಸ್ಟೇಷನ್​ನಿಂದ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ.

- ಮೈಸೂರು ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸುವ ರಾಮನಗರ(ಕನಕಪುರ ಹೊರತುಪಡಿಸಿ), ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಜನರು ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಮೆಟ್ರೋ ಸ್ಟೇಷನ್​ನಿಂದ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ.

- ಕನಕಪುರ ರಸ್ತೆ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕನಕಪುರ, ಮಳವಳ್ಳಿ, ಹನೂರು, ಕೊಳ್ಳೇಗಾಲ ಭಾಗದ ಜನರಿಗೆ ಕನಕಪುರ ರಸ್ತೆ ನೈಸ್​ ಜಂಕ್ಷನ್​ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಕೊಣನಕುಂಟೆ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣಕ್ಕೆ ಬರುವ ವ್ಯವಸ್ಥೆ.

- ಕೆ.ಆರ್​. ಪುರಂ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕೋಲಾರ, ಹೊಸಕೋಟೆ, ಚಿಂತಾಮಣಿ ಭಾಗದ ಜನರಿಗೆ ಐಟಿಐ ಗ್ರೌಂಡ್ಸ್​ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ.

-ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಜನರಿಗೆ ಯಶವಂತಪುರದ ಸ್ಯಾಂಡಲ್​ ಸೋಪ್​ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣ ಬರಲು ವ್ಯವಸ್ಥೆ.

ಭರ್ಜರಿ ತಯಾರಿಗೆ ಪರಮೇಶ್ವರ ನೇತೃತ್ವ: ಈ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ 15 ದಿನಗಳಿಂದಲೂ ಭರ್ಜರಿ ತಯಾರಿ ನಡೆದಿತ್ತು. ಸುಮಾರು 1.5 ಲಕ್ಷಕ್ಕೂ ಹೆಚ್ಚು ಮಂದಿ ಫ್ರೀಡಂ ಮಾರ್ಚ್​ನಲ್ಲಿ ಹೆಜ್ಜೆ ಹಾಕುವ ನಿರೀಕ್ಷೆ ಇದ್ದು, ಈಗಾಗಲೇ 75 ಸಾವಿರಕ್ಕೂ ಹೆಚ್ಚು ಜನರು ನಡಿಗೆಯಲ್ಲಿ ಹೆಜ್ಜೆ ಹಾಕಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಫ್ರೀಡಂ ಮಾರ್ಚ್​ ವ್ಯವಸ್ಥೆಗಾಗಿ 11 ಉಪಸಮಿತಿಗಳ ರಚನೆ ಮಾಡಲಾಗಿತ್ತು. ಸಾರಿಗೆ, ಆಹಾರ, ಮಾಧ್ಯಮ ಸೇರಿದಂತೆ ವಿವಿಧ ಉಪಸಮಿತಿಗಳಿವೆ. ಇನ್ನು ಫ್ರೀಡಂ ಮಾರ್ಚ್​ನಲ್ಲಿ ಹೆಜ್ಜೆ ಹಾಕುವ ಪ್ರತಿ ವ್ಯಕ್ತಿಗೆ ಟಿ ಶರ್ಟ್​, ಕ್ಯಾಪ್​, ಕಿಟ್​ ನೀಡಲಾಗುತ್ತಿದೆ.

Koo App
ಇಂದು ಬೆಂಗಳೂರಿನಲ್ಲಿ ನಾವೆಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದೇವೆ. ನೀವೂ ಬನ್ನಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಈ ಮಹತ್ವದ ನಡಿಗೆಯಲ್ಲಿ ಭಾಗವಹಿಸಿ. ಒಂದಾಗಿ ಹೆಜ್ಜೆ ಹಾಕೋಣ. ಸ್ವಾತಂತ್ರ್ಯವನ್ನು ಸಂಭ್ರಮಿಸೋಣ. ಇಂದು ಮಧ್ಯಾಹ್ನ 2 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭ. #FreedomMarch
View attached media content
-ಕರ್ನಾಟಕ ಕಾಂಗ್ರೆಸ್ (@inckarnataka)15 Aug 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net