ಮದ್ಯದ ಅಮಲಿನಲ್ಲಿ ಥಾರ್ ಕಾರಿನ ರೂಫ್ ಏರಿದ ಯುವತಿಯರು
- ಮದ್ಯದ ಅಮಲಿನಲ್ಲಿ ಥಾರ್ ಕಾರಿನ ರೂಫ್ ಏರಿದ ಯುವತಿಯರು
- ಸ್ಟಂಟ್ ಮಾಡಲು ಹೋಗಿ ಕಾರಿನಿಂದ ಕೆಳಕ್ಕೆ ಬಿದ್ದ ಯುವತಿ
- ಸೋಶಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ನವದೆಹಲಿ: ಇಂಟರ್ನೆಟ್ ಜಗತ್ತಿನಲ್ಲಿ ಫೇಮಸ್ ಆಗಬೇಕು, ನಾಲ್ಕು ಜನ ತಮ್ಮನ್ನು ನೋಡಬೇಕು ಎಂಬ ಹಪಾಹಪಿಗೆ ಬಿದ್ದಿರುವ ಯುವ ಪೀಳಿಗೆ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುವುದು ಸಾಮಾನ್ಯವಾಗಿದೆ.
ಅದರಲ್ಲೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತು ರಸ್ತೆಯಲ್ಲಿ ಸಾಹಸ ಪ್ರದರ್ಶಿಸುವುದು ಕಾನೂನುಬಾಹಿರ ಎಂಬ ಅರಿವಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಇಂತದ್ದೆ ಒಂದು ವಿಡಿಯೋ ವೈರಲ್ (Viral Video) ಆಗುತ್ತಿದೆ.
ವಿಡಿಯೋಲೇನಿದೆ?
ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್(ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ರಾತ್ರಿಯ ಸಮಯದಲ್ಲಿ ರಸ್ತೆಯೊಂದರಲ್ಲಿ ಐಷಾರಾಮಿ ಥಾರ್ ಕಾರಿನ ಮೇಲೆ ಇಬ್ಬರು ಹುಡುಗಿಯರು ಕುಳಿತಿರುವುದನ್ನು ಕಾಣಬಹುದು. ವರದಿಗಳ ಪ್ರಕಾರ, ಆ ಇಬ್ಬರೂ ಯುವತಿಯರು ಸಂಪೂರ್ಣವಾಗಿ ಮದ್ಯ ಸೇವಿಸಿದ್ದು, ತೂರಾಡುತ್ತಿದ್ದರು. ಮದ್ಯದ ಅಮಲಿನಲ್ಲಿ ಏನೂ ಅರಿಯದ ಅವರಲ್ಲಿ ಒಬ್ಬಾಕೆ ಥಾರ್ ಕಾರಿನ ಛಾವಣಿಯ (Roof) ಮೇಲೆ ಕುಳಿತು ಸ್ಟಂಟ್ ಮಾಡಲು ಪ್ರಯತ್ನಿಸುತ್ತಿದ್ದಾಳೆ.
ಅದೇ ಸಮಯದಲ್ಲಿ ಕಾರು ಚಾಲಕ ಕೂಡ ಕಿಕ್ ಪಡೆಯಲು ವಾಹನವನ್ನು ಒಮ್ಮೆಲೇ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಚಾಲಕನ ಈ ಬೇಜವಾಬ್ದಾರಿಯುತ ಚಾಲನೆಯಿಂದಾಗಿ,ಕಾರಿನ ಮೇಲಿದ್ದ ಹುಡುಗಿ ತನ್ನ ಸಮತೋಲನವನ್ನು ಕಳೆದುಕೊಂಡಿದ್ದಾಳೆ. ಕಾರು ಸಣ್ಣದಾಗಿ ಪಲ್ಟಿಯಾದಂತೆ ಆದಾಗ, ಆಕೆ ಸೀದಾ ರಸ್ತೆಗೆ ಬಿದ್ದಿದ್ದಾಳೆ. ಗಾಡಿ ಚಲಿಸುತ್ತಿದ್ದ ಕಾರಣ ಆಕೆ ಬಿದ್ದ ವೇಗಕ್ಕೆ ಗಂಭೀರ ಗಾಯಗಳಾಗಿರುವ ಸಾಧ್ಯತೆಯಿದೆ.
ನೆಟ್ಟಿಗರ ಆಕ್ರೋಶ; ಕಾಮೆಂಟ್‌ಗಳ ಸುರಿಮಳೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಹೆಚ್ಚಿನ ಜನರು ಈ ಕೃತ್ಯವನ್ನು ಮೂರ್ಖತನದ ಪರಮಾವಧಿ ಎಂದು ಕರೆದಿದ್ದಾರೆ.
ಒಬ್ಬ ಬಳಕೆದಾರರು, ಸಿನಿಮಾಗಳಲ್ಲಿ ಈ ರೀತಿಯ ಸಾಹಸಗಳು ಚೆನ್ನಾಗಿ ಕಾಣುತ್ತವೆ; ಆದರೆ ರಸ್ತೆಯಲ್ಲಿ ಸಾಹಸ ಮಾಡಿದರೆ ಮೂಳೆಗಳು ಮುರಿಯುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ಸ್ಟಂಟ್‌ಗಳ ಹೆಸರಿನಲ್ಲಿ ಪ್ರಾಣ ಕಳೆದುಕೊಳ್ಳುವುದು ಧೈರ್ಯವಲ್ಲ, ಅದು ಹುಚ್ಚುತನ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು, ಇಂತಹ ವೀಡಿಯೊಗಳನ್ನು ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು, ಇವರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ,(ಏಜನ್ಸೀಸ್).