ಕುರಿ ಚಿತ್ರವಿರುವ ಕೇಕ್ ಕತ್ತರಿಸಿದ ಆಗ್ರಾದ ಮುಸ್ಲಿಂ ಕುಟುಂಬ
ಆಗ್ರಾ: ಇವತ್ತು (ಗುರುವಾರ, ಮೇ.28) ಪ್ರಪಂಚದೆಲ್ಲಡೆ ಬಕ್ರಿದ್ ಹಬ್ಬವನ್ನು ಇಸ್ಲಾಂ ಧರ್ಮವನ್ನು ಅನುಸರಿಸುವವರು ಆಚರಿಸುತ್ತಿದ್ದಾರೆ. ಭಾರತದಲ್ಲಿ ಕೆಲ ದಿನಗಳಿಂದ ಈ ಹಬ್ಬಕ್ಕೆ ಕುರಿತಂತೆ ಪಶ್ಚಿಮ ಬಂಗಾಳ, ಮುಂಬೈ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಉದ್ವಿಘ್ನ ವಾತಾವರಣದ ಮುನ್ಸೂಚನೆ ದೊರೆಯುತ್ತಿತ್ತು.
ಆದರೆ ಇಂದು ಬಹುತೇಕ ಸ್ಥಳಗಳಲ್ಲಿ ಶಾಂತಿಯುತ ಹಬ್ಬದ ಆಚರಣೆ ಕಂಡುಬಂದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಹಾಗೂ ಸಾಮೂಹಿಕ ಪ್ರಾಣಿವಧೆ ಮತ್ತು ಗೋ ಹತ್ಯೆಗೆ ನಿಷೇಧವನ್ನು ಹೇರಲಾಗಿತ್ತು.
ಇವೆಲ್ಲಾ ಕೋಮು ವಿರೋದಾಭಾಸಗಳ ನಡುವೆ ಉತ್ತರ ಪ್ರದೇಶದ ಆಗ್ರಾದ ಮುಸ್ಲಿಂ ಕುಟುಂಬವೊಂದು ಪ್ರಾಣಿ ಬಲಿಯನ್ನು ತ್ಯಜಿಸಿ ಕುರಿಯ ಚಿತ್ರವಿರುವ ಕೇಕ್ನ್ನು ಕತ್ತರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕತ್ ವೈರಲ್ (Viral Video) ಆಗುತ್ತಿದೆ.
ಭಕ್ತಿ ತೋರಿಕೆಯಲ್ಲಿರುವುದಿಲ್ಲ!
ಈ ಘಟನೆಯು ಆಗ್ರಾದ ಶಾಗಂಜ್ ಎಂಬಲ್ಲಿ ನಡೆದಿದ್ದು, ವಕೀಲ ಗುಲ್ ಚಮನ್ ಶೆರ್ವಾನಿ ಎನ್ನುವವರು ಹಬ್ಬಕ್ಕೆ ಕುರಿಯ ಬಲಿಯನ್ನು ಕೊಡುವ ಬದಲು ಕುರಿಯ ಚಿತ್ರವಿರುವ ಕೇಕ್ನ್ನು ಕತ್ತರಿಸುವ ಮೂಲಕ ಬಕ್ರಿದ್ನ್ನು ಆಚರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗುಲ್ ಚಮನ್ ಶೆರ್ವಾನಿ, ಭಕ್ತಿ ಎನ್ನುವುದು ಮನಸ್ಸಿನಲ್ಲಿರಬೇಕೆ ಹೊರತು ತೋರಿಕೆಯಲ್ಲಲ್ಲ, ಅಲ್ಲಾ ಕೂಡ ವ್ಯಕ್ತಿಯ ತೋರಿಕೆಯನ್ನಲ್ಲ, ಅನವ ಉದ್ದೇಶವನ್ನು, ಅಂತರಾತ್ಮಕ್ಕೆ ಗೌರವ ಕೊಡುತ್ತಾನೆ ಎಂದು ಹೇಳಿದ್ದಾರೆ.
ಕೆಲವರು ಈ ಬಲಿ/ವಧೆ ಹೆಸರಿನಲ್ಲಿ ತಮ್ಮಲ್ಲಿರುವ ಹಣದ ತೋರಿಕೆಯನ್ನು ಮಾಡುತ್ತಾರೆ. ಆದರೆ ಅದೆಷ್ಟೋ ಜನ ಅನಾಥರು, ಬಡವರು ಒಂದೊತ್ತಿನ ಊಟಕ್ಕಾಗಿ ಕಷ್ಟ ಪಡುತ್ತಿರುತ್ತಾರೆ. ನಾವು ಸಾಧ್ಯವಾದರೆ ಅಂತವರಿಗೆ ಸಹಾಯ ಮಾಡಬೇಕು, ಶೋಕಿಯ ಬದುಕು ಒಳ್ಳೆಯದಲ್ಲ ಎಂದು ಚಮನ್ ಶೆರ್ವಾನಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ನೆಟ್ಟಿಗರಿಂದ ಫುಲ್ ಮಾರ್ಕ್ಸ್!
ಈ ಕುರಿ ಚಿತ್ರದ ಕೇಕ್ ಕಟಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಬಕ್ರಿದ್ ಆಚರಣೆ ಮಾಡಿದರೆ ಯಾರು ತಾನೆ ನಿಮ್ಮನ್ನು ವಿರೋಧಿಸುತ್ತಾರೆ ಎಂದು ಒಬ್ಬ ಬಳಕೆದಾರ ಕಮೆಂಟ್ ಹಾಕಿದ್ದಾರೆ.
ಪ್ರಾಣಿಗಳನ್ನು ಬಲಿಕೊಡುವ ಬದಲು ಈ ಐಡಿಯಾವನ್ನು ಎಲ್ಲಾ ಧರ್ಮದವರು ಅನುಸರಿಸಿದರೆ ತುಂಬಾ ಒಳ್ಳೆಯದು ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ರೀತಿಯ ಹಬ್ಬದ ಆಚರಣೆಯನ್ನು ಸರ್ಕಾರ ಕೂಡ ಪ್ರೋತ್ಸಾಹಿಸಬೇಕೆಂದು ಮತ್ತೊಬ್ಬರು ಆಗ್ರಹ ಮಾಡಿದ್ದಾರೆ, (ಏಜನ್ಸೀಸ್).