Gurugram Lift Accident 
ಟ್ರೆಂಡಿಂಗ್

ಲಿಫ್ಟ್‌ನಲ್ಲಿ ಪೂಜಾರಿಯನ್ನು ಕಾದು ಕುಳಿತಿದ್ದ ಯಮಧರ್ಮ: ಕೂದಲಿಗೆ ಕೈ ಹಾಕುತ್ತಿದ್ದಂತೆ ಬಿದ್ದ ಕನ್ನಡಿ; ವಿಡಿಯೋ ವೈರಲ್​! Gurugram Lift Accident

ಗುರಗ್ರಾಮ್​: ಕೋಟಿ ಕೋಟಿ ಹಣ ಸುರಿದು ಐಷಾರಾಮಿ ಫ್ಲಾಟ್‌ಗಳಲ್ಲಿ ವಾಸಿಸುವ ಜನರಿಗೆ ಈಗ ಪ್ರಾಣ ಭಯ ಕಾಡುತ್ತಿದೆ. ಗುರುಗ್ರಾಮ್‌ನ ಸೆಕ್ಟರ್ 70A ನಲ್ಲಿರುವ ಪ್ಯಾರಾಸ್ ಅರೆನ್ ಸೊಸೈಟಿಯ ಲಿಫ್ಟ್‌ನಲ್ಲಿ ನಡೆದ ಘಟನೆ (Gurugram Lift Accident) ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಲಿಫ್ಟ್‌ನಲ್ಲಿ ನಡೆದಿದ್ದೇನು?

ಮಾರ್ಚ್ 24 (ಮಂಗಳವಾರ) ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದ ಆರಂಭದಲ್ಲಿ ಹಳದಿ ಕುರ್ತಾ ಧರಿಸಿದ ಪೂಜಾರಿಯೊಬ್ಬರು ಕೈಯಲ್ಲಿ ಬ್ಯಾಗ್ ಹಿಡಿದು ಲಿಫ್ಟ್ ಪ್ರವೇಶಿಸುತ್ತಾರೆ. ಅವರು ತಮ್ಮ ಫ್ಲೋರ್‌ನ ಬಟನ್ ಒತ್ತಿ ನಿಲ್ಲುತ್ತಾರೆ. ಲಿಫ್ಟ್ ಚಲಿಸಲು ಶುರುವಾದಾಗ, ಎದುರಿಗಿದ್ದ ದೊಡ್ಡ ಕನ್ನಡಿಯಲ್ಲಿ ನೋಡುತ್ತಾ ತಮ್ಮ ಕೂದಲನ್ನು ಸರಿಪಡಿಸಿಕೊಳ್ಳಲು ಮುಂದಾಗುತ್ತಾರೆ.
ಆದರೆ, ಮರುಕ್ಷಣವೇ ಅಲ್ಲಿ ನಡೆದದ್ದು ಅಕ್ಷರಶಃ ಸಾವು-ಬದುಕಿನ ಆಟ ಪಂಡಿತ್ ಜೀ ಅವರು ಕನ್ನಡಿ ನೋಡುತ್ತಿದ್ದಂತೆಯೇ, ಬಲವಾದ ಹೊಡೆತ ಬಿದ್ದಂತೆ ಆ ಬೃಹತ್ ಕನ್ನಡಿ ಇದ್ದಕ್ಕಿದ್ದಂತೆ ಒಡೆದು ಚೂರುಚೂರಾಗಿ ಅವರ ಮೈಮೇಲೆಯೇ ಬೀಳುತ್ತದೆ.

ಅದೃಷ್ಟವಶಾತ್ ಬಚಾವ್!

ಗಾಜಿನ ಚೂರುಗಳು ಮೈಮೇಲೆ ಬಿದ್ದಾಗ ಪೂಜಾರಿ ಗಾಬರಿಯಿಂದ ಹಿಂದೆ ಸರಿಯುತ್ತಾರೆ. ಒಂದು ವೇಳೆ ಆ ಗಾಜಿನ ಹರಿತವಾದ ದೊಡ್ಡ ತುಂಡುಗಳು ಅವರ ಕುತ್ತಿಗೆ ಅಥವಾ ತಲೆಗೆ ತಗುಲಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಅದೃಷ್ಟವಶಾತ್ ಅವರು ದೊಡ್ಡ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಿಡಿಯೋ ಮುಗಿಯುವ ಹೊತ್ತಿಗೆ ಗಾಬರಿಗೊಂಡ ಪಂಡಿತ ನೆಲದ ಮೇಲೆ ಹರಡಿರುವ ಗಾಜಿನ ಚೂರುಗಳನ್ನು ನೋಡುತ್ತಾ ದಂಗಾಗಿ ನಿಂತಿರುವುದು ಕಂಡುಬರುತ್ತದೆ.

ನೆಟ್ಟಿಗರ ಆಕ್ರೋಶ ಮತ್ತು ತಮಾಷೆ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಪಂಡಿತ್ ಜೀ ಅವರೇ, ನಿಮ್ಮ ಪ್ರಾಣ ಉಳಿದಿದ್ದಕ್ಕೆ ನೀವೇ ಒಂದು ಶಾಂತಿ ಪೂಜೆ ಮಾಡಿಸಿಕೊಳ್ಳಿ ಎಂದು ಒಬ್ಬರು ತಮಾಷೆಯಾಗಿ ಬರೆದಿದ್ದಾರೆ.
ಆದರೆ ಹೆಚ್ಚಿನವರು ಬಿಲ್ಡರ್‌ಗಳ ವಿರುದ್ಧ ಕೆಂಡಕಾರಿದ್ದಾರೆ. ಲಕ್ಷಾಂತರ ರೂಪಾಯಿ ಮೇಂಟೆನೆನ್ಸ್ ಚಾರ್ಜ್ ಕಟ್ಟಿಸಿಕೊಂಡರೂ ನಿವಾಸಿಗಳಿಗೆ ಸರಿಯಾದ ಸುರಕ್ಷತೆ ಇಲ್ಲ. ಕಡಿಮೆ ಬೆಲೆಯ ನಿರ್ವಹಣಾ ಒಪ್ಪಂದಗಳಿಂದಾಗಿ ಇಂತಹ ಅನಾಹುತಗಳು ನಡೆಯುತ್ತಿವೆ ಎಂದು ಗುರುಗ್ರಾಮ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇಫ್ಟಿ ಬಗ್ಗೆ ಎಚ್ಚರಿಕೆ!

ಪ್ರತಿಷ್ಠಿತ ವಸತಿ ಸಂಕೀರ್ಣಗಳಲ್ಲಿ ಲಿಫ್ಟ್‌ಗಳ ಸರಿಯಾದ ನಿರ್ವಹಣೆ ಇಲ್ಲದಿರುವುದು ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಘಟನೆಯು ಲಿಫ್ಟ್ ಬಳಸುವ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಕನ್ನಡಿ ಇರಲಿ ಅಥವಾ ಲಿಫ್ಟ್‌ನ ತಾಂತ್ರಿಕ ವ್ಯವಸ್ಥೆ ಇರಲಿ, ಸ್ವಲ್ಪ ಅಜಾಗರೂಕತೆ ವಹಿಸಿದರೂ ಪ್ರಾಣಕ್ಕೆ ಕುತ್ತು ಗ್ಯಾರಂಟಿ ಎನ್ನುವುದು ನೆಟ್ಟಿಗರ ಅಂಭೋಣವಾಗಿದೆ,(ಏಜನ್ಸೀಸ್​).