ರಕ್ತದ ಮಡುವಿನಲ್ಲಿ ಬಿದ್ದ ನವಿಲಿನ ಪುಕ್ಕ ಕಿತ್ತ ಪುಂಡರು
ವೈರಲ್: ಮಾನವಿಯತೆ ಇಲ್ಲದ ಮನುಷ್ಯನಿಗಿಂತ ಕಾಡು ಪ್ರಾಣಿಗಳೇ ವಾಸಿ ಎಂಬ ಮಾತಿದೆ. ಈ ನಾಣ್ಣುಡಿಗೆ ಪೂರಕ ಎಂಬಂತೆ ಇತ್ತೀಚೆಗೆ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರೋ ವಿಡಿಯೋ ಸಾಕ್ಷಿಯಾಗಿದೆ. ಅಫಘಾತಕ್ಕೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನವಿವೊಂದರ (Peacock Viral Video) ಪ್ರಾಣವನ್ನು ಉಳಿಸುವ ಬದಲು ಅದರ ಗರಿಯನ್ನು ಕೀಳುತ್ತಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಜನರಿಗೆ ರೀಲ್ಸ್ ಹುಚ್ಚು, ಇಲ್ಲಾಂದ್ರೆ ಯಾವುದಾದ್ರೂ ಘಟನೆ ನಡೆದಾಗ ಮೊಬೈಲ್ ಹಿಡಿದು ವಿಡಿಯೋ ಮಾಡೋ ಚಟ ಅಂಟಿಕೊಂಡಿದೆ. ಆದರೆ, ಇಲ್ಲೊಂದು ಕಡೆ ಜನ ಕ್ರೌರ್ಯದ ಪರಮಾವಧಿಯನ್ನೇ ಮೆರೆದಿದ್ದಾರೆ. ರಸ್ತೆಬದಿಯಲ್ಲಿ ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ನವಿಲನ್ನು ಬದುಕಿಸೋ ಬದಲು, ತಮ್ಮ ಸ್ವಾರ್ಥಕ್ಕಾಗಿ ಅದರ ಸುಂದರವಾದ ಗರಿಗಳನ್ನು ಕಿತ್ತುತ್ತಿರುವ ಘೋರ ಘಟನೆ ನಡೆದಿದೆ.
ವಿಡಿಯೋನಲ್ಲೇನಿದೆ?
ವೈರಲ್ ವಿಡಿಯೋನಲ್ಲಿ ರಸ್ತೆಬದಿಯಲ್ಲಿ ಅಸಹಾಯಕವಾಗಿ ಬಿದ್ದಿರೋ ನವಿಲಿಗೆ ಯಾವುದೋ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಲವಾದ ಪೆಟ್ಟು ಬಿದ್ದಿರೋ ಕಾರಣ ಆ ನವಿಲಿಗೆ ಎದ್ದುನಿಲ್ಲಲು ಕೂಡ ಆಗ್ತಿಲ್ಲ. ನೋವಿನಿಂದ ತತ್ತರಿಸುತ್ತಾ ರೆಕ್ಕೆ ಬಡಿಯುತ್ತಾ ಒದ್ದಾಡ್ತಿದೆ.
ಇಂಥಾ ಟೈಮ್‌ನಲ್ಲಿ ಯಾರೇ ಆದ್ರೂ ಏನು ಮಾಡ್ತಾರೆ? ಅಯ್ಯೋ ಪಾಪ ಅಂತ ನೀರು ಕುಡಿಸ್ತಾರೆ, ಇಲ್ಲಾಂದ್ರೆ ಅರಣ್ಯ ಇಲಾಖೆಗೋ ಅಥವಾ ಪ್ರಾಣಿ ದಯಾ ಸಂಘಕ್ಕೋ ಫೋನ್ ಮಾಡಿ ವಿಷಯ ತಿಳಿಸ್ತಾರೆ. ಆದರೆ, ಅಲ್ಲಿ ನೆರೆದಿದ್ದ ಜನ ಮಾತ್ರ ರಾಕ್ಷಸರಂತೆ ವರ್ತಿಸಿದ್ದಾರೆ.
ನವಿಲಿನ ಸುತ್ತ ಮುಗಿಬಿದ್ದ ಕೆಲವರು, ಅದರ ನೋವನ್ನ ನೋಡದೆ ಅದರ ಮೈಮೇಲಿದ್ದ ವರ್ಣರಂಜಿತ ಗರಿಗಳನ್ನು ಮನಬಂದಂತೆ ಎಳೆದು ಕೀಳಲು ಶುರು ಮಾಡಿದ್ದಾರೆ. ಒಬ್ಬರಾದ ಮೇಲೊಬ್ಬರು ಬಂದು ಗರಿಗಳನ್ನು ಕಿತ್ತುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆ ಮೂಕ ಹಕ್ಕಿ ಜೀವ ಉಳಿಸಿಕೊಳ್ಳಲು ಒದ್ದಾಡ್ತಿದ್ರೆ, ಇವರು ತಮ್ಮ ಮನೆಯ ಅಲಂಕಾರಕ್ಕೆ ಗರಿ ಸಿಕ್ಕಿತು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಪಿತ್ತ ನೆತ್ತಿಗೇರಿಸಿದ ವಿಡಿಯೋ: ಕಠಿಣ ಶಿಕ್ಷೆಗೆ ಆಗ್ರಹ
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ಜನ ಇದನ್ನು ನೋಡಿ ಆಕ್ರೋಶ ಹೊರಹಾಕ್ತಿದ್ದಾರೆ. ಇಂಥವರನ್ನ ಮನುಷ್ಯರು ಅನ್ನಬೇಕಾ? ಇವರ ಮೇಲೆ ಅರಣ್ಯ ಇಲಾಖೆ ತಕ್ಷಣ ಕೇಸ್ ಹಾಕಿ ಜೈಲಿಗೆ ತಳ್ಳಬೇಕು ಎಂದು ಒಬ್ಬ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ.
ಮಾನವೀಯತೆ ಅನ್ನೋದು ಪೂರ್ತಿ ಸತ್ತು ಹೋಗಿದೆ. ಕಣ್ಣೆದುರೇ ಒಂದು ಜೀವ ಒದ್ದಾಡ್ತಿದ್ರೂ ಕರುಣೆ ಇಲ್ವಾ? ಆ ರೆಕ್ಕೆಗಳನ್ನ ತಗೊಂಡು ಇವರು ಏನು ಮಾಡ್ತಾರೆ? ಅಂತ ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎನ್ನೋದು ಬಹುತೇಕರ ಆಗ್ರಹವಾಗಿದೆ,(ಏಜನ್ಸೀಸ್).