ಮುಂಬೈ ಲೋಕಲ್ ರೈಲಿನೊಳಗೆ ಚಿಲಂ ಸೇದಿದ ಯುವಕರು
- ಮುಂಬೈ ಲೋಕಲ್ ರೈಲಿನೊಳಗೆ ಚಿಲಂ ಸೇದಿದ ಯುವಕರು
- ಹ ಪ್ರಯಾಣಿಕರಿದ್ದರೂ ಕ್ಯಾರೇ ಎನ್ನದ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಆಕ್ರೋಶ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಮಹಾರಾಷ್ಟ್ರ: ಮುಂಬೈನ ಜೀವನಾಡಿ ಎಂದೇ ಕರೆಯಲ್ಪಡುವ ಲೋಕಲ್ ರೈಲಿ (Mumbai Local) ನೊಳಗಿನ ಆಘಾತಕಾರಿ ದೃಶ್ಯವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ. ಚಲಿಸುತ್ತಿರುವ ರೈಲಿನೊಳಗೆ ಇಬ್ಬರು ವ್ಯಕ್ತಿಗಳು ಯಾವುದೇ ಭಯವಿಲ್ಲದೆ, ಬಹಿರಂಗವಾಗಿ ಚಿಲಂ (Chilam) ಸೇದುತ್ತಿರುವ ವಿಡಿಯೋ ಹೊರಬಂದಿದ್ದು, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಬಹುದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.
ಪಶ್ಚಿಮ ರೈಲ್ವೆ (Western Railway) ಮಾರ್ಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹಗಲಿನ ವೇಳೆಯಲ್ಲೇ ಈ ಕೃತ್ಯ ನಡೆದಿದೆ. ಲೋಕಲ್ ರೈಲಿನ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದ ಒಬ್ಬ ಯುವಕ ಮತ್ತು ಮಧ್ಯವಯಸ್ಕ ವ್ಯಕ್ತಿ ಹಾಯಾಗಿ ಚಿಲಂ ಸೇದುತ್ತಿರುವುದನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಸಹ ಪ್ರಯಾಣಿಕರಿದ್ದರೂ ಕ್ಯಾರೇ ಮಾಡದ ಖದೀಮರು!
ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕ ಮೊದಲು ಚಿಲಂ ಅನ್ನು ಹಚ್ಚಿ ದೀರ್ಘವಾಗಿ ಧೂಮಪಾನ ಮಾಡುತ್ತಾನೆ. ನಂತರ ಅದನ್ನು ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿಗೆ ಪಾಸ್ ಮಾಡುತ್ತಾನೆ. ರೈಲಿನ ಬೋಗಿಯಲ್ಲಿ ಇತರ ಪ್ರಯಾಣಿಕರು ಇದ್ದರೂ ಈ ಇಬ್ಬರಿಗೂ ಯಾವುದೇ ಭಯವಿಲ್ಲದೆ, ತಮ್ಮದೇ ಲೋಕದಲ್ಲಿದ್ದ ಇವರು ಸಾರ್ವಜನಿಕ ಸ್ಥಳ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಧೂಮಪಾನ ಮುಂದುವರಿಸಿದ್ದಾರೆ. ಈ ದೃಶ್ಯ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಮುಂಬೈ ರೈಲ್ವೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಲಂ ಅಥವಾ ಚಿಲ್ಲಮ್ ಎಂಬುದು ಜೇಡಿಮಣ್ಣು ಅಥವಾ ಕಲ್ಲಿನಿಂದ ಮಾಡಿದ ಸಾಂಪ್ರದಾಯಿಕ ಧೂಮಪಾನದ ಪೈಪ್ ಆಗಿದೆ. ಸಾಮಾನ್ಯವಾಗಿ ಇದನ್ನು ತಂಬಾಕು ಅಥವಾ ಗಾಂಜಾ ಸೇದಲು ಬಳಸಲಾಗುತ್ತದೆ. ಆದರೆ, ಈ ವೈರಲ್ ವಿಡಿಯೋದಲ್ಲಿ ಆ ಇಬ್ಬರು ವ್ಯಕ್ತಿಗಳು ಚಿಲಂ ಒಳಗೆ ಏನನ್ನು ತುಂಬಿಸಿ ಸೇದುತ್ತಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ರೈಲ್ವೆ ಇಲಾಖೆ ಮತ್ತು ಪೊಲೀಸರು ಸೈಲೆಂಟ್?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದರೂ, ಘಟನೆ ನಿಖರವಾಗಿ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಇನ್ನು ವಿಡಿಯೋದಲ್ಲಿರುವ ವ್ಯಕ್ತಿಗಳ ವಿರುದ್ಧ ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP) ಅಥವಾ ಪಶ್ಚಿಮ ರೈಲ್ವೆ ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಮತ್ತು ಕ್ರಮ ಕೈಗೊಂಡಿರುವ ಕುರಿತು ಮಾಹಿತಿ ಹಂಚಿಕೊಂಡಿಲ್ಲ.
ರೈಲಿನಲ್ಲಿ ಧೂಮಪಾನ ಮಾಡಿದ್ರೆ ಏನಾಗುತ್ತೆ?
ಭಾರತದಲ್ಲಿ ರೈಲು ಅಥವಾ ರೈಲ್ವೆ ಆವರಣದೊಳಗೆ ಧೂಮಪಾನ ಮಾಡುವುದನ್ನು ಕಾನೂನುಬದ್ಧವಾಗಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 167 ರ ಅಡಿಯಲ್ಲಿ ರೈಲಿನಲ್ಲಿ ಧೂಮಪಾನ ಮಾಡುವುದು ದೊಡ್ಡ ಅಪರಾಧವಾಗಿದೆ. ಹೀಗೆ ಮಾಡಿದರೆ ಭಾರಿ ದಂಡ ಮಾತ್ರವಲ್ಲದೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಹಾಗೆಯೇ COTPA ಕಾಯ್ದೆ 2003ರ ಪ್ರಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ ಸಾರ್ವಜನಿಕ ಸಾರಿಗೆಯಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.
ಮಹಾರಾಷ್ಟ್ರ ಸರ್ಕಾರ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಹೀಗಿದ್ದೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕ ತಂದಿದೆ. ರೈಲ್ವೆ ಇಲಾಖೆಯು ಇಂತಹ ಅಕ್ರಮ ಚಟುವಟಿಕೆಗಳನ್ನು ಕಂಡ ತಕ್ಷಣ ಅಧಿಕೃತ ಸಹಾಯವಾಣಿ ಅಥವಾ RPF ಗೆ ದೂರು ನೀಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಇನ್ನು ಈ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ, (ಏಜನ್ಸೀಸ್).