ಕ್ರೀಡೆ

ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣ ಏರಿಕೆ, ಮುಂಬೈನಲ್ಲಿ ಐಪಿಎಲ್ ಪಂದ್ಯ ಅನುಮಾನ

ನವದೆಹಲಿ: ಮುಂಬರುವ ಐಪಿಎಲ್ 14ನೇ ಆವೃತ್ತಿಯನ್ನು ಸಂಪೂರ್ಣವಾಗಿ ಮುಂಬೈನಲ್ಲೇ ಆಯೋಜಿಸುವ ಬಗ್ಗೆ ಬಿಸಿಸಿಐ ಪ್ರಾಥಮಿಕ ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಇದೀಗ ಟೂರ್ನಿ ಹತ್ತಿರವಾಗುತ್ತಿದ್ದಂತೆ ಚಿತ್ರಣ ಸಂಪೂರ್ಣ ಬದಲಾಗಿದ್ದು, ಮುಂಬೈನಲ್ಲಿ ಈ ಬಾರಿ ಯಾವುದೇ ಐಪಿಎಲ್ ಪಂದ್ಯಗಳು ನಡೆಯದಿರುವ ಸಾಧ್ಯತೆ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿರುವುದು ಇದಕ್ಕೆ ಕಾರಣವಾಗಿದೆ.

ಮುಂಬೈನಲ್ಲಿ ಮಾತ್ರ ಟೂರ್ನಿ ನಡೆಸುವ ಬದಲಾಗಿ, ಬೆಂಗಳೂರು, ಚೆನ್ನೈ, ಕೋಲ್ಕತ, ಅಹಮದಾಬಾದ್ ಮತ್ತು ದೆಹಲಿ ಸಹಿತ ಆರು ತಾಣಗಳಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಬಿಸಿಸಿಐ ರೂಪುರೇಷೆ ರೂಪಿಸಿತ್ತು. ಇದೀಗ ಈ ಪಟ್ಟಿಯಿಂದ ಮುಂಬೈ ಹೊರಬಿದ್ದಿದ್ದು, ಹೈದರಾಬಾದ್‌ಗೆ ಸ್ಥಾನ ಕಲ್ಪಿಸಲಾಗಿದೆ. ಐಪಿಎಲ್ ಪಂದ್ಯಗಳನ್ನು ನಡೆಸುವ ತಾಣಗಳ ಬಗ್ಗೆ ಮುಂಬರುವ ಐಪಿಎಲ್ ಆಡಳಿತ ಮಂಡಳಿ ಸದಸ್ಯರು ಮತ್ತು ಬಿಸಿಸಿಐ ಪದಾಧಿಕಾರಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಐಪಿಎಲ್ 14ನೇ ಆವೃತ್ತಿಯ ದಿನಾಂಕವೂ ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದ್ದು, ಏಪ್ರಿಲ್ 8ರಿಂದ 12ರ ನಡುವೆ ಟೂರ್ನಿ ಆರಂಭಗೊಳ್ಳುವ ಮತ್ತು ಮೇ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ಮೊಹಾಲಿ, ಜೈಪುರ ಆಕ್ಷೇಪ: ಐಪಿಎಲ್ ಪಂದ್ಯ ಆಯೋಜಿಸುವ ತಾಣಗಳ ಪಟ್ಟಿಯಿಂದ ಮೊಹಾಲಿ ಮತ್ತು ಜೈಪುರವನ್ನು ಕೈಬಿಟ್ಟಿರುವ ಬಗ್ಗೆ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೆ ಆಕ್ಷೇಪ ಎತ್ತಿವೆ. ಇವೆರಡು ತಾಣಗಳನ್ನು ಯಾಕೆ ಕೈಬಿಡಲಾಗಿದೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಈ ಮುನ್ನ ಹೈದರಾಬಾದ್ ಕೂಡ ಬಿಸಿಸಿಐ ಪಟ್ಟಿಯಲ್ಲಿರಲಿಲ್ಲ. ಬಳಿಕ ಹೈದರಾಬಾದ್ ಹೆಸರು ಕೂಡ ಕಾಣಿಸಿಕೊಂಡಿದೆ.

ವೇಳಾಪಟ್ಟಿಗೆ ಚುನಾವಣೆ ಅಡಚಣೆ

ಕಳೆದ ವಾರ ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ವೇಳೆ ಅಹಮದಾಬಾದ್‌ನಲ್ಲಿ ಬಿಸಿಸಿಐ ಅಧಿಕಾರಿಗಳು ಮತ್ತು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಸಭೆ ನಡೆಸಿದ್ದು, ಬಹುನಗರಗಳಲ್ಲಿ ಪಂದ್ಯ ನಡೆಸಲು ನಿರ್ಧರಿಸಲಾಗಿದೆ. ಆದರೆ ಐಪಿಎಲ್ ಸಮಯದಲ್ಲೇ ಪಶ್ಚಿಮ ಬಂಗಾಳ (ಮಾರ್ಚ್ 27ರಿಂದ ಏಪ್ರಿಲ್ 29) ಮತ್ತು ತಮಿಳುನಾಡು (ಏಪ್ರಿಲ್ 6) ರಾಜ್ಯಗಳಲ್ಲಿ ಚುನಾವಣೆ ನಡೆಯಲಿವೆ. ಬಿಸಿಸಿಐನ ಕಳೆದ ಸಭೆಯ ವೇಳೆ ಈ ಚುನಾವಣಾ ದಿನಾಂಕಗಳು ಇನ್ನೂ ಪ್ರಕಟವಾಗಿರಲಿಲ್ಲ. ಇದೀಗ ಬಿಸಿಸಿಐ ಮುಂದಿನ ಸಭೆಯಲ್ಲಿ ಚುನಾವಣೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಪಂದ್ಯಗಳ ವೇಳಾಪಟ್ಟಿ ರೂಪಿಸಲು ಸಾಧ್ಯವಾಗಲಿದೆ.

ಪ್ರೇಕ್ಷಕರು ಬೇಡವೆಂದ ನೆಸ್ ವಾಡಿಯಾ

ಐಪಿಎಲ್ ಟೂರ್ನಿಯ ವೇಳೆ ಆರಂಭಿಕ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕ ನೆಸ್ ವಾಡಿಯಾ ಅಭಿಪ್ರಾಯಪಟ್ಟಿದ್ದಾರೆ. ಭಾರತ-ಇಂಗ್ಲೆಂಡ್ ಸರಣಿಯ ವೇಳೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿದೆ. ಆದರೆ ಐಪಿಎಲ್ ವೇಳೆ ದ್ವಿಪಕ್ಷೀಯ ಸರಣಿಗಿಂತ ಭಿನ್ನವಾದ ಸವಾಲು ಎದುರಾಗಲಿದೆ ಎಂದಿದ್ದಾರೆ. ಜತೆಗೆ ಮೊಹಾಲಿಯಲ್ಲಿ ಯಾಕೆ ಐಪಿಎಲ್ ಪಂದ್ಯ ನಡೆಸುತ್ತಿಲ್ಲ ಮತ್ತು ಯಾವ ಮಾನದಂಡದ ಆಧಾರದಲ್ಲಿ ತಾಣಗಳ ಆಯ್ಕೆ ನಡೆದಿದೆ ಎಂದು ಬಿಸಿಸಿಐಯನ್ನು ಪ್ರಶ್ನಿಸಿದ್ದಾರೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.

ಬಿಸಿಸಿಐಗೆ ಪಂಜಾಜ್ ಸಿಎಂ ಮನವಿ

ಐಪಿಎಲ್ ಪಂದ್ಯಗಳನ್ನು ಮೊಹಾಲಿಯಲ್ಲೂ ನಡೆಸಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಟೂರ್ನಿಯ ವೇಳೆ ಪಂದ್ಯಗಳಿಗೆ ಸೂಕ್ತ ವ್ಯವಸ್ಥೆ ಮತ್ತು ಆಟಗಾರರಿಗೆ ಭದ್ರತೆ ಒದಗಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.