ಕ್ರೀಡೆ

ವೈವಾಹಿಕ ಜೀವನದಲ್ಲಿ ಬಿರುಕು: ನೋವಿನಿಂದಲೇ ಕುಡಿದು ತೂರಾಡಿದ ಚಾಹಲ್​?! ವಿಡಿಯೋ ವೈರಲ್​... Yuzvendra chahal

Yuzvendra chahal : ಕಳೆದ ಕೆಲವು ದಿನಗಳಿಂದ ಟೀಮ್​​ ಇಂಡಿಯಾದ ಸ್ಟಾರ್ ಸ್ಪಿನ್ನರ್​ ಯುಜುವೇಂದ್ರ ಚಾಹಲ್ ಹಾಗೂ ಅವರ ಪತ್ನಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್​ ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದೆಯಂತೆ. ಆದರೆ, ಈ ಸುದ್ದಿಗೆ ಚಾಹಲ್​ ಆಗಲಿ ಧನಶ್ರೀ ಆಗಲಿ ಇದುವರೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ವಿಚ್ಛೇದನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಭಾರಿ ಚರ್ಚೆ ಆಗುತ್ತಿರುವ ಸಮಯದಲ್ಲೇ ಚಾಹಲ್ ಅವರು​ ಮದ್ಯದ ಅಮಲಿನಲ್ಲಿ ತೂರಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಚಾಹಲ್ ಅವರು ಒಬ್ಬ ವ್ಯಕ್ತಿಯ ಸಹಾಯದಿಂದ ಪಬ್‌ನಿಂದ ಹೊರಗೆ ಬರುತ್ತಿರುವುದನ್ನು ಕಾಣಬಹುದು. ಚಾಹಲ್​ ನೋಡಿದರೆ ಕಂಠಪೂರ್ತಿ ಕುಡಿದು ಪ್ರಜ್ಞಾಹೀನನಾಗಿರುವುದು ಗೋಚರವಾಗುತ್ತದೆ. ಮದ್ಯದ ಮತ್ತಿನಲ್ಲೇ ಕಾರನ್ನೇರಿ ಕುಳಿತುಕೊಳ್ಳುತ್ತಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಚಾಹಲ್‌ ಅವರನ್ನು ಈ ಸ್ಥಿತಿಯಲ್ಲಿ ನೋಡಿ ಅನೇಕರಿಗೆ ನೋವುಂಟಾಗಿದೆ.

ಅಂದಹಾಗೆ ಚಾಹಲ್ ಮತ್ತು ಧನಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಚಾಹಲ್ ಅವರು ತಮ್ಮ ಪತ್ನಿಯೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್​ ಮಾಡಿರುವುದು ವಿಚ್ಛೇದನ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.

2020ರ ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಾಹಲ್ ಮತ್ತು ಧನಶ್ರೀ ತಮ್ಮ ಸಿಹಿ ಕ್ಷಣಗಳನ್ನು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದರು. ಒಂದು ಸಮಯದಲ್ಲಿ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದ್ದ ಈ ಜೋಡಿ ಇದೀಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಶೀಘ್ರದಲ್ಲೇ ಇಬ್ಬರು ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.

ಅಂದಹಾಗೆ ಟೀಮ್​ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿಯಂತಹ ಕ್ರಿಕೆಟಿಗರು ಇಂತಹ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೀಗ ವಿಚ್ಛೇದನ ಪಡೆದರೆ ಚಾಹಲ್ ಕೂಡ ಆ ಪಟ್ಟಿಗೆ ಸೇರಲಿದ್ದಾರೆ. ಒಟ್ಟಿನಲ್ಲಿ ವೈಯಕ್ತಿಕ ಸಮಸ್ಯೆಗಳು ಚಾಹಲ್ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಸದ್ಯದಲ್ಲೇ ದಂಪತಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. (ಏಜೆನ್ಸೀಸ್​)