ಕ್ರೀಡೆ

Mamata Banerjee | ಮಹಿಳಾ ತಂಡಕ್ಕೆ ಮಮತಾ ಬ್ಯಾನರ್ಜಿ ಅಭಿನಂದನೆ; ಅವರು ಎಂಟು ಗಂಟೆಯೊಳಗೆ ಮನೆಯಲ್ಲಿದ್ದರೆ ಇದು ಸಾಧ್ಯವಿತ್ತೇ ಎಂದು ಬಿಜೆಪಿ ವ್ಯಂಗ್ಯ

ಕೊಲ್ಕತ್ತಾ: ಭಾನುವಾರ (ನ 3) ನಡೆದ ಮಹಿಳಾ ವಿಶ್ವಕಪ್ ಫೈನಲ್​​ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ಟೀಮ್​ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ, ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಾಡಿರುವ ಅಭಿನಂದನಾ ಟ್ವೀಟ್‌ಗೆ ಬಿಜೆಪಿ ವ್ಯಂಗ್ಯವಾಡಿದೆ.

ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಜಯ ಸಾಧಿಸುವ ಮೂಲಕ ಭಾರತದ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದರು.

ಮಮತಾ ಬ್ಯಾನರ್ಜಿ...

ಇಂದು, ವಿಶ್ವಕಪ್ ಫೈನಲ್‌ನಲ್ಲಿ ನಮ್ಮ ಮಹಿಳಾ ತಂಡವು ಮಾಡಿರುವ ಸಾಧನೆಯ ಬಗ್ಗೆ ಇಡೀ ರಾಷ್ಟ್ರವೇ ಹೆಮ್ಮೆಪಡುತ್ತದೆ. ನೀವು ತೋರಿಸಿದ ಹೋರಾಟ ಯುವತಿಯರ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ನೀವು ಉನ್ನತ ಮಟ್ಟದಲ್ಲಿ ವಿಶ್ವ ದರ್ಜೆಯ ತಂಡ ಎಂದು ಸಾಬೀತುಪಡಿಸಿದ್ದೀರಿ, ನಮಗೆಲ್ಲಾ ಅದ್ಭುತ ಕ್ಷಣಗಳನ್ನು ನೀಡಿದ್ದೀರಿ. ಭವಿಷ್ಯದಲ್ಲಿ ಅನೇಕ ದೊಡ್ಡ ವಿಜಯಗಳು ನಿಮಗಾಗಿ ಕಾಯುತ್ತಿವೆ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ! ಎಂದು ಬ್ಯಾನರ್ಜಿ ಬರೆದಿದ್ದಾರೆ.

ಬಂಗಾಳದ ಮುಖ್ಯಮಂತ್ರಿಗಳ ಈ ಟ್ವೀಟ್​ಗೆ ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಐಟಿ ಸೆಲ್​, ಕಳೆದ ತಿಂಗಳು ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾನರ್ಜಿಯವರ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿದೆ. "ಓ ದೇವರೇ ಅವರು 12 ರವರೆಗೆ ಆಡುತ್ತಿದ್ದರು ಆದರೆ ನೀವು ಅವರಿಗೆ 8 ಗಂಟೆಯೊಳಗೆ ಮನೆಗೆ ಬರಲು ಹೇಳಿದ್ದೀರಿ #Raat8Ta #WomensWorldCup2025" ಎಂದು ಬರೆಯಲಾಗಿದೆ. ಅಕ್ಟೋಬರ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಕ್ರೂರ ಹಲ್ಲೆಯನ್ನು ಉದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ರಾತ್ರಿ 12.30 ರವರೆಗೆ ಏಕೆ ಹೊರಗಿದ್ದರು ಎಂದು ಪ್ರಶ್ನಿಸಿದ್ದರು. ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಹೆಣ್ಣುಮಕ್ಕಳು ಹೊರಗೆ ಬರಲು ಬಿಡಬಾರದು. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದರು.

ದೀದಿಯ ಈ ಹೇಳಿಕೆ ರಾಜಕೀಯ ಮತ್ತು ಸಾರ್ವಜನಿಕ ವಲಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಬಗೆಹರಿಸುವ ಬದಲು ಅವರು ಸಂತ್ರಸ್ತೆಯ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಆರೋಪಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತಕ್ಕೆ ಮುಖ್ಯಮಂತ್ರಿಯವರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಘಾತಕಾರಿ ಎಂಬಂತೆ ಈಗಲೂ ಅವರು ಖಾಸಗಿ ವೈದ್ಯಕೀಯ ಕಾಲೇಜಿನ ಮೇಲೆ ಆಪಾದನೆಯನ್ನು ಹೊರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥೆ ಸುಕಾಂತ ಮಜುಂದಾರ್ ಟೀಕಿಸಿದ್ದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಬ್ಯಾನರ್ಜಿ ಹೇಳಿಕೆಗಳನ್ನು ಮಹಿಳೆಯರ ಮೇಲಿನ ಕಳಂಕ ಎಂದು ಕರೆದರೆ, ರಾಷ್ಟ್ರೀಯ ಮಹಿಳಾ ಆಯೋಗ "ಅಸಂಬದ್ಧ" ಎಂದು ಟೀಕಿಸಿದೆ.(ಏಜೆನ್ಸೀಸ್​)