

ವಿಜಯವಾಡ: ನಕಲಿ ಮದ್ಯ ಉತ್ಪಾದನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ(ನ. 02) ಆಂಧ್ರ ಪ್ರದೇಶದ ಇಬ್ರಾಹಿಂಪಟ್ಟಣದಲ್ಲಿ ಮಾಜಿ ಸಚಿವ ಮತ್ತು ವೈಎಸ್ಆರ್ಸಿಪಿ ನಾಯಕ ಜೋಗಿ ರಮೇಶ್ ಮತ್ತು ಅವರ ಸಹೋದರರನ್ನು ಅಬಕಾರಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ(Arrest) ಎಂದು ವರದಿಯಾಗಿದೆ.
ಭಾನುವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುನಾನಲ್ ಕಾಲೋನಿಯಲ್ಲಿರುವ ವಿಜಯವಾಡ ಪೂರ್ವ ಅಬಕಾರಿ ಕಚೇರಿಯಲ್ಲಿ ಮಾಜಿ ಸಚಿವ ಜೋಗಿ ರಮೇಶ್, ಸಹೋದರ ರಾಮು ಹಾಗೂ ಅವರ ಪಿಎ ಅರೆಪಲ್ಲಿ ರಾಮು ಅವರನ್ನು ಪ್ರಮುಖ ಆರೋಪಿ ಅಡ್ಡೇಪಲ್ಲಿ ಜನಾರ್ದನ ರಾವ್ ಮತ್ತು ಅವರ ಸಹೋದರ ಜಗನ್ ಮೋಹನ್ ಅವರೊಂದಿಗಿನ ವ್ಯವಹಾರ ವಹಿವಾಟಿಗೆ ಸಂಬಂಧಿಸಿದಂತೆ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು ಎನ್ನಲಾಗಿದೆ.
ಬಳಿಕ ಪ್ರಕರಣದಲ್ಲಿ ಜೋಗಿ ರಮೇಶ್ ಅವರನ್ನು ಎ18 ಮತ್ತು ಅವರ ಸಹೋದರನನ್ನು ಎ19 ಮಾಡಿ ಬಂಧಿಸಿದ್ದು, ಪಿಎ ಅರೆಪಲ್ಲಿ ರಾಮು ಅವರನ್ನು ಹೇಳಿಕೆ ಪಡೆದು ಬಿಟ್ಟು ಕಳುಹಿಸಿದ್ದಾರೆ. ಇನ್ನೂ ರಮೇಶ್ ಬಂಧನದ ಬಗ್ಗೆ ತಿಳಯುತ್ತಿದ್ದಂತೆ ವೈಎಸ್ಆರ್ಸಿಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸಚಿವರ ಮನೆ ಮುಂದೆ ಜಮಾಯಿಸಿದ ಇದು ಸೇಡಿನ ರಾಜಕೀಯ ಎಂದು ಆರೋಪಿಸಿ ಆಂಧ್ರ ಟಿಡಿಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಜೋಗಿ ರಮೇಶ್ ಬಂಧನಕ್ಕೆ ವೈಎಸ್ಆರ್ ಕಾಂಗ್ರೆಸ್ ಪಕ್ಷ ಆಕ್ರೋಶ
ನಕಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಗಿ ರಮೇಶ್ ಮೇಲಿನ ಆರೋಪವನ್ನು ವೈಎಸ್‌ಆರ್‌ಸಿಪಿ ನಿರಾಕರಿಸಿದ್ದು, ಇದು ಅವರನ್ನು ದುರುದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ವೈಎಸ್ಆರ್ಸಿಪಿಯನ್ನು ಟಾರ್ಗೆಟ್ ಮಾಡಲು ಅವರಿಗೆ ಕಿರುಕುಳ ನೀಡಲಾಗ್ತಿದೆ. ಇದು ಸೇಡಿನ ರಾಜಕೀಯ ಎಂಬುದು ಸ್ಪಷ್ಟ. ಮೈತ್ರಿ ಸರ್ಕಾರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದೆ.
ಪ್ರಕರಣದಲ್ಲಿ ಟಿಡಿಪಿ ನಾಯಕರನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಮ್ಮ ಅಪರಾಧವನ್ನು ಮುಚ್ಚಿಹಾಕಲು, ಅವರು ನಕಲಿ ಕಥೆಯನ್ನು ಸೃಷ್ಟಿಸಿದ್ದಾರೆ. ಮತ್ತು ಜೋಗಿ ರಮೇಶ್ ಅವರನ್ನು ಅದರಲ್ಲಿ ಎಳೆದು ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದೆ. (ಏಜೆನ್ಸೀಸ್)