Yashaswi Jaiswal : ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದಾರೆ. ಇದು ಆಸ್ಟ್ರೇಲಿಯಾ ನೆಲದಲ್ಲಿ ಅವರ ಮೊದಲ ಶತಕ. ಈ ಶತಕದೊಂದಿಗೆ ಜೈಸ್ವಾಲ್ ಕೆಲವು ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಜೈಸ್ವಾಲ್ ಭಾರತ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ನೊಂದಿಗೆ ಈ ಶತಕವನ್ನು ಪೂರ್ಣಗೊಳಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಅವರ ನಾಲ್ಕನೇ ಶತಕವಾಗಿದೆ.
ಪರ್ತ್ ಟೆಸ್ಟ್‌ನ ಮೂರನೇ ದಿನ (ನ. 24) ಯಶಸ್ವಿ ಜೈಸ್ವಾಲ್ ಶತಕ ಬಾರಿಸಿ ಅದ್ದೂರಿಯಾಗಿ ಸಂಭ್ರಮಿಸಿದರು. 205 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸುವ ಮೂಲಕ ಯುವ ಆಟಗಾರ ಈ ಶತಕ ಸಾಧನೆ ಮಾಡಿದರು. ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಮೊದಲ ಟೆಸ್ಟ್‌ನಲ್ಲಿ, ಜೈಸ್ವಾಲ್ ಶತಕ ದಾಖಲಿಸುವ ಮೂಲಕ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದರು. ಈ ಶತಕದೊಂದಿಗೆ ಜೈಸ್ವಾಲ್ 8 ದಾಖಲೆಗಳನ್ನು ನಿರ್ಮಿಸಿದ್ದು, ಅವರ ಬಗ್ಗೆ ನಾವೀಗ ತಿಳಿದುಕೊಳ್ಳೋಣ...
1. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ 200 ರನ್ಗಳ ಆರಂಭಿಕ ಜತೆಯಾಟದ ದಾಖಲೆಗೆ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1986ರಲ್ಲಿ ಸುನಿಲ್ ಗವಾಸ್ಕರ್ ಮತ್ತು ಶ್ರೀಕಾಂತ್ 191 ರನ್ಗಳ ಜತೆಯಾಟ ನೀಡಿದ್ದರು.
2. ಮೊದಲ 15 ಟೆಸ್ಟ್‌ಗಳಲ್ಲಿ 1500+ ರನ್ ಗಳಿಸಿದ ಏಷ್ಯಾದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಜೈಸ್ವಾಲ್ ಬರೆದಿದ್ದಾರೆ.
3. ಟೆಸ್ಟ್‌ನಲ್ಲಿ ವೇಗವಾಗಿ 1500+ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಜೈಸ್ವಾಲ್ ಅವರು 28 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಪೂಜಾರ ಕೂಡ 28 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
4. ಯಶಸ್ವಿ ಜೈಸ್ವಾಲ್ (161) ಆಸ್ಟ್ರೇಲಿಯಾದಲ್ಲಿ ನಡೆದ ತಮ್ಮ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು 1967-68ರಲ್ಲಿ ಬ್ರಿಸ್ಬೇನ್ನಲ್ಲಿ ಎಂ.ಎಲ್. ಜಯಸಿಂಹ (101) ಮತ್ತು 1977-78ರಲ್ಲಿ ಬ್ರಿಸ್ಬೇನ್ನಲ್ಲಿ ಸುನಿಲ್ ಗವಾಸ್ಕರ್ (113) ಶತಕ ಸಿಡಿಸಿದರು.
5. ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಎರಡನೇ ಕಿರಿಯ ಆರಂಭಿಕ ಆಟಗಾರ ಎನಿಸಿಕೊಂಡರು. 22 ವರ್ಷ 330 ದಿನಗಳ ವಯಸ್ಸಿನಲ್ಲಿ ಜೈಸ್ವಾಲ್ ಈ ಸಾಧನೆ ಮಾಡಿದರು. ಅವರಿಗಿಂತ ಮೊದಲು ಕೆಎಲ್ ರಾಹುಲ್ (22 ವರ್ಷ 263 ದಿನ) ಈ ಸಾಧನೆ ಮಾಡಿದ್ದಾರೆ.
6. ಯಶಸ್ವಿ ಜೈಸ್ವಾಲ್ 23ನೇ ವರ್ಷಕ್ಕೆ ಕಾಲಿಡುವ ಮೊದಲು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಐದನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಜೈಸ್ವಾಲ್ ಈ ವರ್ಷ 3 ಶತಕಗಳನ್ನು ಗಳಿಸಿದ್ದಾರೆ.
7. ಯಶಸ್ವಿ ಜೈಸ್ವಾಲ್ ಭಾರತದ ಪರ 23 ವರ್ಷದೊಳಗೆ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜೈಸ್ವಾಲ್ 4 ಶತಕಗಳನ್ನು ಗಳಿಸಿದ್ದಾರೆ. 8 ಶತಕಗಳೊಂದಿಗೆ ಸಚಿನ್ ಎಲ್ಲರಿಗಿಂತಲೂ ಮೊದಲ ಸ್ಥಾನದಲ್ಲಿದ್ದಾರೆ.
8. ಯಶಸ್ವಿ ಜೈಸ್ವಾಲ್ ಟೆಸ್ಟ್ ಪಂದ್ಯದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇಂದಿನ ಶತಕದ ಇನ್ನಿಂಗ್ಸ್‌ನವರೆಗೆ 35 ಸಿಕ್ಸರ್‌ಗಳು ಬಾರಿಸಿದ್ದಾರೆ. 2014ರಲ್ಲಿ ಬ್ರೆಂಡನ್ ಮೆಕಲಮ್ ಅವರ 33 ಸಿಕ್ಸರ್‌ಗಳ ದಾಖಲೆಯನ್ನು ಜೈಸ್ವಾಲ್ ಮುರಿದರು.
ಪರ್ತ್ ಟೆಸ್ಟ್ ವಿಚಾರಕ್ಕೆ ಬರುವುದಾದರೆ, ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಈವರೆಗೆ 5 ವಿಕೆಟ್ ನಷ್ಟಕ್ಕೆ 388 ರನ್ ಗಳಿಸಿದ್ದು, 434 ರನ್ಗಳ ಮುನ್ನಡೆ ಹೊಂದಿದೆ. ಸದ್ಯ ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿ ಆಡುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ 20 ರನ್ ಗಳಿಸಿ ಕೊಹ್ಲಿಗೆ ಸಾಥ್ ನೀಡಿದ್ದಾರೆ. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ಗೆ ಆಲೌಟ್ ಆಗಿತ್ತು ಮತ್ತು ಆಸ್ಟ್ರೇಲಿಯಾವನ್ನು 104 ರನ್ಗಳಿಗೆ ಆಲೌಟ್ ಮಾಡಿತ್ತು. (ಏಜೆನ್ಸೀಸ್)