ಕ್ರೀಡೆ

ಜಂತರ್​ ಮಂತರ್​ ಹೊರತುಪಡಿಸಿ ಕುಸ್ತಿಪಟುಗಳು ಬೇರೆಡೆ ಪ್ರತಿಭಟಿಸಲಿ: ದೆಹಲಿ ಪೊಲೀಸ್​

ನವದೆಹಲಿ: ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟುಗಳು ಕಳೆದ ಹಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೊಂದು ಹಂತ ತಲುಪಿದೆ.

ಪ್ರತಿಭಟನಾ ನಿರತ ಕುಸ್ತಿಪಟುಗಳು ಭಾನುವಾರ(ಮೇ 28)ರಂದು ಉದ್ಘಾಟನೆಗೊಂಡ ನೂತನ ಸಂಸತ್​ ಭವನದ ಎದುರು ಪ್ರತಿಭಟನಾ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ವಶದಲ್ಲಿರುವ ಕುಸ್ತಿಪಟುಗಳಿಗೆ ಪೊಲೀಸರು ಜಂತರ್​ ಮಂತರ್​ ಹೊರತು ಪಡಿಸಿ ದೆಹಲಿಯ ಸೂಕ್ತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಾಗಿ ಹೇಳಿದೆ.

ಈ ಕುರಿತು ಟ್ವೀಟ್​ ಮಾಡಿರುವ ದೆಹಲಿ ಪೊಲೀಸ್​ ಇಲಾಖೆ ಜಂತರ್​ ಮಂತರ್​ನ ನಿಗದಿತ ಸ್ಥಳದಲ್ಲಿ ಕುಸ್ತಪಟುಗಳು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಪ್ರತಿಭಟನಾ ನಿರತರು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಸ್ಥಳದಿಂದ ಅವರನ್ನು ತೆರವುಗೊಳಿಸಲಾಗಿದೆ.

ಒಂದು ವೇಳೆ ಕುಸ್ತಿಪಟುಗಳು ಪ್ರತಿಭಟನೆ ನಡೆಸಲು ಮುಂದಾದರೆ ಜಂತರ್​ ಮಂತರ್​ ಹೊರತುಪಡಿಸಿ ದೆಹಲಿಯ ಸೂಕ್ತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಭಾನುವಾರ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಮತ್ತು ವಿಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.