ಕ್ರೀಡೆ

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಪ್ರತಿಭಟನೆ: ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ

ದೆಹಲಿ: ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಮಾಡಿದ್ದು, ಸಿಂಗ್​ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ಅನೇಕ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರವು ಸಿಂಗ್​ ವಿರುದ್ದ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಮತ್ತು ನ್ಯಾಯ ದೊರಕಿಸದ ಕಾರಣದಿಂದ ಬೇಸತ್ತಿದ್ದು ತಮಗೆ ಬಂದಿರುವ ಪದಕಗಳನ್ನು ಸಂಜೆ 6 ಗಂಟೆಗೆ ಹರಿದ್ವಾರದ ಬಳಿ ಗಂಗಾ ನದಿಗೆ ಎಸೆಯುವುದಾಗಿ ಹೇಳಿದ್ದಾರೆ. ಅಲ್ಲದೇ, ಇಂಡಿಯಾ ಗೇಟ್‌ನಲ್ಲಿ ಆಮರಣಾಂತ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಹಲವು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು. ಮೊನ್ನೆ ನೂತನ ಸಂಸತ್ ಭವನದತ್ತ ತೆರಳಿ ಕುಸ್ತಿಪಟುಗಳು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿದ್ದರು.

ನಮಗೆ ಮಾನಸಿಕ ಹಾಗೂ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕುಸ್ತಿಪಟುಗಳು, ಸಿಂಗ್​ ವಿರುದ್ಧ ಆರೋಪಿಸಿದ್ದರು.(ಏಜೆನ್ಸೀಸ್​)