ಕ್ರೀಡೆ

ವಿಶ್ವಕಪ್​ ಮೊದಲ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಶಾಕ್​: ಗಿಲ್​​ಗೆ​ ಡೆಂಘೆ, ಆಸಿಸ್​ ವಿರುದ್ಧ ಕಣಕ್ಕಿಳಿಯೋದು ಡೌಟು!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 2023ರ ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯಕ್ಕೂ ಮುನ್ನವೇ ಭಾರತ ತಂಡದಕ್ಕೆ ಬಹುದೊಡ್ಡ ಆಘಾತ ಉಂಟಾಗಿದೆ. ಅತ್ಯುತ್ತಮ ಫಾರ್ಮ್​ನಲ್ಲಿರುವ ಆರಂಭಿಕ ಆಟಗಾರ ಶುಭಮನ್​ ಗಿಲ್​ ಡೆಂಘೆಯಿಂದ ಬಳಲುತ್ತಿರುವುದಾಗಿ ವರದಿಯಾಗಿದ್ದು, ಅ.8ರ ಭಾನುವಾರದಂದು ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಗಿಲ್​ 2023ರಲ್ಲಿ ಒಳ್ಳೆಯ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್​, 1230 ರನ್​ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್​ ಸ್ಕೋರರ್​ ಎನಿಸಿಕೊಂಡಿದ್ದಾರೆ. 72.35 ರನ್​ ಸರಾಸರಿಯೊಂದಿಗೆ 105.03 ಸ್ಟ್ರೈಕ್​ ರೇಟ್​ ಅನ್ನು ಹೊಂದಿದ್ದಾರೆ.

ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್​ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ಸಚಿನ್​ ತೆಂಡೂಲ್ಕರ್​ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್​ನಲ್ಲೂ ಗಿಲ್​ ಒಳ್ಳೆಯ ರನ್​ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್​ ದಾಖಲಿಸಿದ ಗಿಲ್​, ಐಸಿಸಿ ಏಕದಿನ ಬ್ಯಾಟ್ಸ್​ಮೆನ್​ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್​ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್​ ವರ್ಷದಲ್ಲಿ ಗಿಲ್​ ಅವರಿಗೆ 665 ರನ್​ ಮಾತ್ರ ಬಾಕಿ ಇದೆ.

ವರದಿಗಳ ಪ್ರಕಾರ ಆರಂಭಿಕ ಆಟಗಾರ ಗಿಲ್​ ಅವರಿಗೆ ಡೆಂಘೆ ಸೋಂಕು ತಲುಗಿದೆ. ಬಿಸಿಸಿಐನ ವೈದ್ಯಕೀಯ ತಂಡ ಗಿಲ್​ ಅವರನ್ನು ತುಂಬಾ ಹತ್ತಿರದಿಂದ ವೈದ್ಯಕೀಯ ಸಮಾಲೋಚನೆ ನಡೆಸುತ್ತಿದೆ. ಮತ್ತೊಂದು ಸುತ್ತಿನ ಪರೀಕ್ಷೆ ಇಂದು (ಅ.06) ನಡೆಯಲಿದೆ. ಪ್ರಸ್ತುತ ಬೆಳವಣಿಗೆಯನ್ನು ನೋಡಿದರೆ, ಗಿಲ್​ ಅವರು ನಾಡಿದ್ದು ಅಂದರೆ ಅ.8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಏಕೆಂದರೆ ಪಂದ್ಯಕ್ಕೆ ಇನ್ನೂ ಎರಡೇ ದಿನ ಬಾಕಿ ಇದೆ.

ಒಂದು ವೇಳೆ ಗಿಲ್​ ಮೊದಲ ಪಂದ್ಯದಿಂದ ಹೊರಗೆ ಉಳಿದರೆ, ಆಸ್ಟ್ರೇಲಿಯಾ ವಿರುದ್ಧ ರೋಹಿತ್​ ಶರ್ಮ ಜತೆಗೆ ಇಶಾನ್​ ಕಿಶಾನ್​ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸದ್ಯ ಇಶಾನ್​ ಭಾರತದ ತಂಡದ ಮಧ್ಯಮ ಕ್ರಮಾಂಕದ ಭರವಸೆ ಆಟಗಾರರಾಗಿದ್ದಾರೆ. ಏಷ್ಯಾ ಕಪ್​ ವೇಳೆ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ 81 ಎಸೆತಕ್ಕೆ 82 ರನ್​ ಬಾರಿಸುವ ಮೂಲಕ ತಂಡಕ್ಕೆ ಆಸೆರೆಯಾದರು. ಹೀಗಾಗಿ ಗಿಲ್​ ಅಲಭ್ಯರಾದರೆ ಯಾವ ತಂತ್ರವನ್ನು ನಾಯಕ ರೋಹಿತ್​ ಶರ್ಮ ಅನುಸರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)