More

  ವಿಶ್ವಕಪ್​ ಮೊದಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ರಚಿನ್​ ಯಾರು? ರಾಹುಲ್​-ಸಚಿನ್​, ಬೆಂಗಳೂರಿಗಿರುವ ಸಂಬಂಧವೇನು?

  ಅಹಮದಾಬಾದ್​: ನಿನ್ನೆ (ಅ.05) ನಡೆದ ಐಸಿಸಿ ಪುರುಷರ ಏಕದಿನ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್​ ವಿರುದ್ಧ ನ್ಯೂಜಿಲೆಂಡ್​ ತಂಡವು 9 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕಿವೀಸ್​ ಪಡೆಯ ಗೆಲವಿನಲ್ಲಿ ಭಾರತದ ಮೂಲದ ರಚಿನ್ ರವೀಂದ್ರ ಪ್ರಮುಖ ಪಾತ್ರವಹಿಸಿದರು.

  ನ್ಯೂಜಿಲೆಂಡ್​ ಬ್ಯಾಟಿಂಗ್​ ಆರ್ಡರ್​ ಅನ್ನು ಸದ್ಬಳಕೆ ಮಾಡಿಕೊಂಡ ರಚಿನ್​, ಚೊಚ್ಚಲ ಶತಕ​ ಸಿಡಿಸಿದರು. 23 ವರ್ಷದ ರಚಿನ್​, ಕೇನ್​ ವಿಲಿಯಮ್ಸನ್​ ಗೈರು ಹಾಜರಿಯಲ್ಲಿ ನ.03 ಬ್ಯಾಟಿಂಗ್​ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದರು. ಇಂಗ್ಲೆಂಡ್​ ಬೌಲರ್​ಗಳನ್ನು ಮನಸೋ ಇಚ್ಛೆ ಕಾಡಿದ ರಚಿನ್,​ ಕೇವಲ 93 ಎಸೆತಗಳಲ್ಲಿ 5 ಸಿಕ್ಸರ್​, 11 ಬೌಂಡರಿ ಸಮೇತ ಅಜೇಯ 123 ರನ್​ ಗಳಿಸಿ ಮಿಂಚಿದರು. ಡೆವನ್​ ಕಾನ್ವೆ (ಅಜೇಯ 153 ರನ್​, 121 ಎಸೆತ, 3 ಸಿಕ್ಷರ್​, 19 ಬೌಂಡರಿ)ಗೆ ರಚಿನ್​ ಉತ್ತಮ ಸಾಥ್​ ನೀಡುವ ಮೂಲಕ ಅದ್ಭುತ ಜತೆಯಾಟದೊಂದಿಗೆ ತಂಡವನ್ನು ಗೆಲವಿನ ದಡ ಸೇರಿಸಿದರು.

  ಇದನ್ನೂ ಓದಿ: ಪ್ರಾಂಶುಪಾಲ ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: ಸಹೋದರ ಡಾ.ರೇಣುಕಾ ಪ್ರಸಾದ್ ಸೇರಿ 6 ಮಂದಿಗೆ ಜೀವಾವಧಿ ಶಿಕ್ಷೆ

  ರಚಿನ್​ ರವೀಂದ್ರ ಭಾರತೀಯರು ಅದರಲ್ಲೂ ಕನ್ನಡರಿಗರ ಗಮನ ಸೆಳೆದರು. ಅದಕ್ಕೆ ಕಾರಣ ರಚಿನ್​ ಅವರ ಮೂಲ ಬೆಂಗಳೂರು. ಯುವ ಆಲ್ರೌಂಡರ್ ಆಗಿ ನ್ಯೂಜಿಲೆಂಡ್ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ರಚಿನ್ ತಂದೆ ರವಿ ಕೃಷ್ಣಮೂರ್ತಿ ಟೆಕ್ಕಿ ಆಗಿದ್ದು, 1990ರಲ್ಲಿ ನ್ಯೂಜಿಲೆಂಡ್​ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಕ್ಲಬ್ ಪರ ಕ್ರಿಕೆಟ್ ಆಡಿದ ಅನುಭವ ಹೊಂದಿರುವ ರವಿ ಕೃಷ್ಣಮೂರ್ತಿ, ರಚಿನ್ ಬಾಲ್ಯದ ಕೋಚ್ ಕೂಡ ಆಗಿದ್ದಾರೆ. ಟೀಮ್ ಇಂಡಿಯಾ ದಿಗ್ಗಜರಾದ ಸ‘ಚಿನ್’ ತೆಂಡುಲ್ಕರ್ ಹಾಗೂ ‘ರಾ’ಹುಲ್ ದ್ರಾವಿಡ್ ಹೆಸರು ಸೇರಿಸಿ ರಚಿನ್ ಎಂದು ಹೆಸರಿಡಲಾಗಿದೆ.

  ರಚಿನ್ ಅವರ ತಾತ ಬಾಲಕೃಷ್ಣ ಅಡಿಗ, ಬೆಂಗಳೂರಿನ ವಿಜಯ ಕಾಲೇಜ್​ನಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ಪ್ರಸಕ್ತ ಪ್ರಾಂಶುಪಾಲರಾಗಿದ್ದಾರೆ ಮತ್ತು ಕನ್ನಡ ವಿಜ್ಞಾನ ಲೇಖಕರೂ ಆಗಿದ್ದಾರೆ. ಬೆಂಗಳೂರು ದಕ್ಷಿಣ ಜಯನಗರದಲ್ಲಿ ಅವರ ಕುಟುಂಬಸ್ಥರು ನೆಲೆಸಿದ್ದಾರೆ ಎನ್ನಲಾಗಿದೆ. 2019ರ ವಿಶ್ವಕಪ್ ಫೈನಲ್ ಪಂದ್ಯವನ್ನು ರಚಿನ್ ರವೀಂದ್ರ ಬೆಂಗಳೂರಿನ ಪಬ್​ನಲ್ಲಿ ವೀಕ್ಷಣೆ ಮಾಡಿದ್ದರು. ಆಗಿನ ನಿರಾಸೆಗೆ ಸೇಡು ತೀರಿಸಿಕೊಳ್ಳುವಲ್ಲಿ ಈಗ ಅವರೇ ಪ್ರಮುಖ ಪಾತ್ರ ವಹಿಸಿರುವುದು ವಿಶೇಷವಾಗಿದೆ.

  ರಚಿನ್​ ತಂದೆ ಕ್ರಿಕೆಟ್​ ಹಿನ್ನೆಲೆಯುಳ್ಳವರಾಗಿದ್ದರಿಂದ ಚಿಕ್ಕ ವಯಸ್ಸಿನಲ್ಲೇ ರಚಿನ್​ ಕ್ರಿಕೆಟ್​ ಪ್ರಯಾಣವನ್ನು ಆರಂಭಿಸಿದರು. 2016 ವಿಶ್ವಕಪ್​ ಟೂರ್ನಿಗೆ ನ್ಯೂಜಿಲೆಂಡ್​ ಅಂಡರ್​-19 ತಂಡವನ್ನು ರಚಿನ್​ ಪ್ರತಿನಿಧಿಸಿದ್ದಾರೆ. 2018ರ ಅಂಡರ್​-19 ತಂಡದಲ್ಲೂ ಆಡಿದ್ದಾರೆ. 2021ರಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಪಂದ್ಯಕ್ಕೆ ರಚಿನ್​ ಪದಾರ್ಪಣೆ ಮಾಡಿದರು. ಇದಾದ ಕೂಡಲೇ ಟೆಸ್ಟ್​ ಮಾದರಿ ಪಂದ್ಯವನ್ನು ಪ್ರವೇಶಿಸಿದ ರಚಿನ್​, 2023ರಲ್ಲಿ ಏಕದಿನ ತಂಡವನ್ನು ಸೇರಿದರು.

  ಇದನ್ನೂ ಓದಿ: ಶಾಲಾ ಸಮವಸ್ತ್ರದಲ್ಲೇ ಧಮ್ ಹೊಡೆಯುವ ಫೋಟೋ ವೈರಲ್: ಪೊಲೀಸರು ಕ್ರಮ ಜರುಗಿಸಬೇಕೆಂಬ ಒತ್ತಾಯಿಸಿದ ಸಾರ್ವಜನಿಕರು

  ಈವರೆಗೂ ರಚಿನ್​, 3 ಟೆಸ್ಟ್​, 12 ಏಕದಿನ ಮತ್ತು 18 ಟಿ20 ಪಂದ್ಯಗಳನ್ನು ಆಡಿದ್ದಾರೆ. 2023ರ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಪಾಕಿಸ್ತಾನ ವಿರುದ್ಧ ಅಭ್ಯಾಸ ಪಂದ್ಯದಲ್ಲಿ 97 ರನ್​ ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್​ ಪ್ರದರ್ಶನದಿಂದ ರಚಿನ್​ ಎಲ್ಲರನ್ನು ತಮ್ಮತ್ತ ಸೆಳೆದರು. ಇದೀಗ ಉದ್ಘಾಟನಾ ಪಂದ್ಯದಲ್ಲೇ ಚೊಚ್ಚಲ ಶತಕ ಬಾರಿಸುವ ಮೂಲಕ ರಚಿನ್​ ವಿಶ್ವ ಕ್ರಿಕೆಟ್​ ಗಮನ ಸೆಳೆದಿದ್ದು, ನ್ಯೂಜಿಲೆಂಡ್​ ತಂಡಕ್ಕೆ ಸ್ಟಾರ್​ ಆಟಗಾರನ ಭರವಸೆ ಸಿಕ್ಕಂತಾಗಿದೆ.

  ಪಂದ್ಯದ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2019ರ ಫೈನಲಿಸ್ಟ್​ಗಳ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಕಿವೀಸ್ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿದರೂ, ಅನುಭವಿ ಜೋ ರೂಟ್ (77) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್​ಗೆ 282 ರನ್ ಪೇರಿಸಿತು. ಪ್ರತಿಯಾಗಿ ಕಾನ್​ವೇ- ರಚಿನ್ ಅಜೇಯ ಜತೆಯಾಟದ ಬಲದಿಂದ ಕಿವೀಸ್, 36.2 ಓವರ್​ಗಳಲ್ಲಿ 1 ವಿಕೆಟ್​ಗೆ 283 ರನ್​ ಗಳಿಸಿ, ಇನ್ನೂ 82 ಎಸೆತಗಳು ಬಾಕಿಯಿರುವಂತೆಯೇ ಸುಲಭ ಗೆಲುವು ದಾಖಲಿಸಿತು. (ಏಜೆನ್ಸೀಸ್​)

  ಏಕದಿನ ವಿಶ್ವಕಪ್ 2023| ರಚಿನ್-ಕಾನ್ವೆ ಭರ್ಜರಿ ಶತಕ; ಇಂಗ್ಲೆಂಡ್ ಮಣಿಸಿ ಶುಭಾರಂಭ ಕಂಡ ನ್ಯೂಜಿಲೆಂಡ್

  ವಿಶ್ವಕಪ್ ಸುವರ್ಣಪಥದಲ್ಲಿ ಭಾರಥಯಾತ್ರೆ

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts