ಕ್ರೀಡೆ

ಸ್ಯಾಮ್​​ ಕಾನ್​ಸ್ಟಾಸ್​ ಜತೆ ವಾಗ್ವಾದ: ಬ್ಯಾನ್​ ಆಗ್ತಾರಾ ವಿರಾಟ್​ ಕೊಹ್ಲಿ? ಐಸಿಸಿ ನಿಮಯಗಳು ಏನು ಹೇಳುತ್ತೆ? Virat Kohli

Virat Kohli : ಇಂದಿನಿಂದ (ಡಿ.26) ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಆರಂಭವಾಗಿದೆ. ಮೊದಲ ದಿನವೇ ವಿವಾದದ ಬಿರುಗಾಳಿಯೊಂದು ಎದ್ದಿದೆ. ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟ್ಸ್​​​ಮನ್​ ವಿರಾಟ್​ ಕೊಹ್ಲಿ ಬ್ಯಾನ್​ ಆಗ್ತಾರಾ ಎಂಬ ಚರ್ಚೆಯು ಆರಂಭವಾಗಿದೆ. ಏಕೆಂದರೆ, ಮೊದಲ ದಿನದಾಟದ ವೇಳೆ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಸ್ಯಾಮ್​​ ಕಾನ್​ಸ್ಟಾಸ್​ ನಡುವೆ ತೀವ್ರ ವಾಗ್ವಾದ ನಡೆಯಿತು.

19 ವರ್ಷದ ಸ್ಯಾಮ್ ಕಾನ್​ಸ್ಟಾಸ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದರು. ಜಸ್​ಪ್ರೀತ್​ ಬುಮ್ರಾ ಅವರಂತಹ ವಿಶ್ವದರ್ಜೆಯ ಬೌಲರ್‌ಗಳನ್ನು ಕಾನ್​ಸ್ಟಾಸ್​ ಸುಲಭವಾಗಿ ಎದುರಿಸಿದರು. ಇದು ಎಲ್ಲರನ್ನೂ ಅಚ್ಚರಿಗೊಳಿಸಿತು. ಭಾರತದ ವೇಗಿಗಳು ಯುವ ಆಸೀಸ್ ಆಟಗಾರರ ಬ್ಯಾಟಿಂಗ್​ ಆಕ್ರಮಣ ತಡೆಯಲು ಹೆಣಗಾಡಿದರು. ಹೀಗಾಗಿ ವಿರಾಟ್ ಕೊಹ್ಲಿ ಕಾನ್​ಸ್ಟಾಸ್​ ಏಕಾಗ್ರತೆಯನ್ನು ಮುರಿ ಸ್ಲೆಡ್ಜಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್​ 10 ಮತ್ತು 11ನೇ ಓವರ್‌ಗಳ ನಡುವಿನ ವಿರಾಮದ ಸಮಯದಲ್ಲಿ, ಸ್ಯಾಮ್ ಕಾನ್‌ಸ್ಟಾಸ್ ಮತ್ತು ಉಸ್ಮಾನ್ ಖವಾಜಾ ಕ್ರೀಸ್​ ತುದಿಗಳನ್ನು ಬದಲಾಯಿಸುವಾಗ ಕೊಹ್ಲಿ ಯುವ ಬ್ಯಾಟರ್‌ನತ್ತ ನಡೆದು ಬಂದು ಡಿಕ್ಕಿ ಹೊಡೆದರು. ಈ ವೇಳೆ ಕಾಮೆಂಟರಿಯಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಕೊಹ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ ಎಂದರು.

ರಿಪ್ಲೇ ನೋಡಿದಾಗ ವಿರಾಟ್​ ಕೊಹ್ಲಿಗೆ ತಾನು ಹೋಗುತ್ತಿರುವ ಹಾದಿಯ ಬಗ್ಗೆ ಚೆನ್ನಾಗಿ ತಿಳಿದಿರುವಂತೆ ತೋರಿಸುತ್ತದೆ. ಇತ್ತ ಸ್ಯಾಮ್ ಕಾನ್​ಸ್ಟಾಸ್​ ತಮ್ಮ ತಲೆಯನ್ನು ತಗ್ಗಿಸಿ, ಕೈ ಗ್ಲೌಸ್​ಗಳನ್ನು ಸರಿ ಮಾಡಿಕೊಳ್ಳುತ್ತಾ ಬರುವಾಗ ಅವರ ಭುಜಕ್ಕೆ ಕೊಹ್ಲಿ ಡಿಕ್ಕಿ ಹೊಡೆಯುತ್ತಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಉಸ್ಮಾನ್ ಖವಾಜಾ ಮತ್ತು ಅಂಪೈರ್ ಮಧ್ಯಪ್ರವೇಶಿಸಿದ ನಂತರ ವಾಗ್ವಾದ ಶೀಘ್ರದಲ್ಲೇ ಪರಿಹರಿಸಲಾಯಿತು. ಆದರೆ, ಕೊಹ್ಲಿಯ ಈ ನಡೆ ಐಸಿಸಿ ನೀತಿ ಸಂಹಿತೆಗೆ ವಿರುದ್ಧವಾಗಿದ್ದು, ದಂಡ ವಿಧಿಸಬಹುದಾಗಿದೆ. ಈ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿದೆ.

ಐಸಿಸಿ ನಿಯಮಗಳು ಏನು ಹೇಳುತ್ತವೆ?

ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಪ್ರಕಾರ, ಮತ್ತೊಬ್ಬ ಆಟಗಾರನೊಂದಿಗೆ ಸೂಕ್ತವಲ್ಲದ ಮತ್ತು ಉದ್ದೇಶಪೂರ್ವಕ ದೈಹಿಕ ಸಂಪರ್ಕವನ್ನು ಮಾಡುವುದು ಹಂತ 2ರ ಅಪರಾಧವಾಗಿದೆ. ಇದು MCC ಕಾನೂನುಗಳ ಅಧ್ಯಾಯ 42.1 ಅಡಿಯಲ್ಲಿ ಬರುತ್ತದೆ ಮತ್ತು ಈ ನಡವಳಿಕೆ ಸ್ವೀಕಾರಾರ್ಹವಲ್ಲ. ಯಾವುದೇ ಆಟಗಾರ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದರೆ ಮೈದಾನದಲ್ಲಿರುವ ಅಂಪೈರ್‌ಗಳು ವರದಿ ಮಾಡಬೇಕು. ಇದಾದ ಬಳಿಕ ಮ್ಯಾಚ್ ರೆಫರಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಕೊಹ್ಲಿ ಅವರು ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿದ್ದಾರೆ ಎಂದು ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳು ನಿರ್ಧರಿಸಿದರೆ, ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ಐಸಿಸಿ) ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.

ಇನ್ನು ಹಂತ 2ರ ಅಪರಾಧಗಳು ಮೂರರಿಂದ ನಾಲ್ಕು ಡಿಮೆರಿಟ್ ಪಾಯಿಂಟ್‌ಗಳ ದಂಡವನ್ನು ಹೊಂದಿರುತ್ತದೆ. ಅದಕ್ಕೆ ಅನುಗುಣವಾದ ಶಿಕ್ಷೆಗಳು ಈ ಕೆಳಗಿನಂತಿವೆ...

* ಶೇ.50% 100 ರಷ್ಟು ಪಂದ್ಯ ಶುಲ್ಕ ದಂಡ ಅಥವಾ ಮೂರು ಡಿಮೆರಿಟ್ ಪಾಯಿಂಟ್‌ಗಳಿಗೆ 1 ಅಮಾನತು ಅಂಕ

* ನಾಲ್ಕು ಡಿಮೆರಿಟ್ ಪಾಯಿಂಟ್‌ಗಳಿಗೆ ಎರಡು ಅಮಾನತು ಅಂಕಗಳು

ಅಂದಹಾಗೆ ಡಿಮೆರಿಟ್ ಅಂಕಗಳು 24 ತಿಂಗಳ ಅವಧಿಗೆ ಆಟಗಾರನ ದಾಖಲೆಯಲ್ಲಿ ಉಳಿಯುತ್ತವೆ. ವಿರಾಟ್ ಕೊಹ್ಲಿ ಅವರು 2019 ರಿಂದ ಯಾವುದೇ ಡಿಮೆರಿಟ್ ಪಾಯಿಂಟ್ ಪಡೆದಿಲ್ಲ. ಮ್ಯಾಚ್ ರೆಫರಿ ಏನಾದರೂ ಕೊಹ್ಲಿಗೆ ನಾಲ್ಕು ಡಿಮೆರಿಟ್ ಅಂಕಗಳನ್ನು ನೀಡಿದರೆ, ಅದು ಅಮಾನತುಗೆ ಕಾರಣವಾಗುತ್ತದೆ. ಇದರಿಂದ ಒಂದು ಟೆಸ್ಟ್ ಅಥವಾ ಎರಡು ಸೀಮಿತ ಓವರ್‌ಗಳ ಪಂದ್ಯಗಳಿಗೆ ಬ್ಯಾನ್​ ಮಾಡಬಹುದು. ಇದೇನಾದರೂ ನಡೆದರೆ, ಜನವರಿ 3 ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯವನ್ನು ಕೊಹ್ಲಿ ಕಳೆದುಕೊಳ್ಳುವ ಅಪಾಯವಿದೆ. ಆದಾಗ್ಯೂ, ಯಾವುದೇ ನಿರ್ಬಂಧಗಳ ವಿರುದ್ಧ ಭಾರತ ತಂಡದ ಮ್ಯಾನೇಜ್‌ಮೆಂಟ್ ಅಥವಾ ಕೊಹ್ಲಿ ಸ್ವತಃ ಮೇಲ್ಮನವಿ ಸಲ್ಲಿಸಬಹುದು. ಗಮನಾರ್ಹ ಸಂಗತಿ ಏನೆಂದರೆ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ ಅವರು 2018 ರ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಆರಂಭದಲ್ಲಿ ಮೂರು ಡಿಮೆರಿಟ್ ಅಂಕಗಳನ್ನು ಪಡೆದರು. ಅಲ್ಲದೆ, ಮೇಲ್ಮನವಿಯಲ್ಲಿ ರಬಾಡ ಅವರ ಅನುಮತಿಯನ್ನು ರದ್ದುಗೊಳಿಸಲಾಯಿತು. (ಏಜೆನ್ಸೀಸ್​)