ಕ್ರೀಡೆ

ರಾಹುಲ್​ ಮತ್ತು ಸಿರಾಜ್​ರನ್ನು ಏಕೆ ಆಯ್ಕೆ ಮಾಡಿಲ್ಲ? ಆಕ್ರೋಶ ಹೊರಹಾಕಿದ ಬಿಸಿಸಿಐ! BCCI ​

BCCI : ದುಲೀಪ್ ಟ್ರೋಫಿಯ (2025) ಮೊದಲ ಸುತ್ತಿನ ಪಂದ್ಯಗಳಿಗೆ ಕೇಂದ್ರೀಯ ಒಪ್ಪಂದದ ಆಟಗಾರರನ್ನು ಆಯ್ಕೆ ಮಾಡದಿರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಬಿಸಿಸಿಐ ಕ್ರಿಕೆಟ್ ಕಾರ್ಯಾಚರಣೆಗಳ ಜನರಲ್ ಮ್ಯಾನೇಜರ್ ಅಬೆ ಕುರುವಿಲ್ಲಾ ಅವರು ಆಯಾ ರಾಜ್ಯ ಕ್ರಿಕೆಟ್ ಸಂಘಗಳಿಗೆ ಪತ್ರ ಬರೆದಿದ್ದಾರೆ.

ದಕ್ಷಿಣ ವಲಯ ತಂಡದಲ್ಲಿ ಕೆ.ಎಲ್. ರಾಹುಲ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ ಕೃಷ್ಣ, ಸಾಯಿ ಸುದರ್ಶನ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಸ್ಟಾರ್ ಆಟಗಾರರು ಇಲ್ಲದಿರುವ ಕಾರಣ ಬಿಸಿಸಿಐ ಈ ರೀತಿ ಪ್ರತಿಕ್ರಿಯೆ ನೀಡಿದೆ. ಅವರೆಲ್ಲರೂ ಪ್ರಸ್ತುತ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ಒಂದು ತಿಂಗಳಿಗಿಂತ ಹೆಚ್ಚು ಕಾಲ ವಿಶ್ರಾಂತಿಯಲ್ಲಿದ್ದಾರೆ. ಅಲ್ಲದೆ, ಇವರೆಲ್ಲರೂ ಏಷ್ಯಾ ಕಪ್ ತಂಡದ ಭಾಗವಾಗಿಲ್ಲದ ಕಾರಣ, ದುಲೀಪ್ ಟ್ರೋಫಿಯಲ್ಲಿ ಆಡುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ, ಯಾರಿಗೂ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದರಿಂದಾಗಿ ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯವರೆಗೂ ಈ ಆಟಗಾರರು ವಿಶ್ರಾಂತಿಯಲ್ಲಿರುತ್ತಾರೆ.

ಅಂದಹಾಗೆ, ದುಲೀಪ್ ಟ್ರೋಫಿಗೆ ತಂಡಗಳನ್ನು ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡುವುದಿಲ್ಲ. ಬದಲಾಗಿ, ವಲಯ ಆಯ್ಕೆದಾರರು ಆಯ್ಕೆ ಮಾಡುತ್ತಾರೆ.

ದುಲೀಪ್ ಟ್ರೋಫಿಯ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ನ್ಯಾಯಯುತ ಸ್ಪರ್ಧೆಯನ್ನು ಒದಗಿಸಲು, ಪ್ರಸ್ತುತ ಲಭ್ಯವಿರುವ ಭಾರತೀಯ ಆಟಗಾರರನ್ನು ಆಯಾ ವಲಯ ತಂಡಗಳಿಗೆ ಆಯ್ಕೆ ಮಾಡಬೇಕು. ಒಪ್ಪಂದದಲ್ಲಿರುವ ಅಥವಾ ಭಾರತೀಯ ತಂಡದಲ್ಲಿ ಆಯ್ಕೆಗಾಗಿ ಕಾಯುತ್ತಿರುವ ಎಲ್ಲಾ ಆಟಗಾರರು ಬಿಸಿಸಿಐ ಆಯೋಜಿಸುವ ದೇಶೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕು. ಒಬ್ಬ ಆಟಗಾರ ಲಭ್ಯವಿದ್ದರೂ, ಮಾನ್ಯ ಕಾರಣಗಳಿಲ್ಲದೆ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದರೆ, ಆ ಆಟಗಾರನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸಲಾಗುವುದಿಲ್ಲ ಎಂದು ಕುರುವಿಲ್ಲಾ ಪತ್ರದಲ್ಲಿ ತಿಳಿಸಿದ್ದಾರೆ.

ಅಂದಹಾಗೆ, ಕಳೆದ ವರ್ಷ, ಕೇಂದ್ರ ಒಪ್ಪಂದ ಹೊಂದಿರುವ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರು ಕಳೆದ ರಣಜಿ ಋತುವಿನಲ್ಲಿ ಆಡಿದ್ದರು. ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಆರಂಭವಾಗಲಿದೆ. (ಏಜೆನ್ಸೀಸ್​)