

ಕಳೆದ ಕೆಲ ವರ್ಷಗಳಿಂದ ಯುವಸಮೂಹದ ಬದುಕನ್ನೇ ದುಸ್ತರಗೊಳಿಸಿದ್ದ ಆನ್ಲೈನ್ ಮನಿ ಗೇಮಿಂಗ್ನ ಯುಗ ಕೊನೆಗೂ ಅಂತ್ಯವಾಗಿದ್ದು, ಕೋಟ್ಯಂತರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿವೆ. ಈ ಕೆಲಸ ಮುಂಚೆಯೇ ಮಾಡಿದ್ದರೆ ನಮ್ಮ ಮಗನನ್ನೋ, ಸಂಬಂಧಿಯನ್ನೋ ಉಳಿಸಿಕೊಳ್ಳಬಹುದಿತ್ತು ಎಂದು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಆನ್ಲೈನ್ ಮನಿ ಗೇಮಿಂಗ್ ನಿಷೇಧಿಸುವ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಅಸ್ತು ಎಂದಿದ್ದು, ಈಗ ರಾಷ್ಟ್ರಪತಿಗಳ ಅಂಕಿತವಷ್ಟೇ ಬಾಕಿ. ಮೋಸದ ದೊಡ್ಡ ಜಾಲದ ವಿರುದ್ಧ ನಿರ್ಣಾಯಕ ಸಮರ ಸಾರಲಾಗಿದ್ದು, ಈ ಪಿಡುಗು ಮತ್ತೊಂದು ರೂಪದಲ್ಲಿ ತಲೆಎತ್ತದಂತೆ ಎಚ್ಚರಿಕೆ ವಹಿಸಬೇಕಿದೆ.
ಆನ್ಲೈನ್ ಮನಿ ಗೇಮಿಂಗ್ ಸೃಷ್ಟಿಸಿರುವ ವಿತ್ತೀಯ ನಷ್ಟ, ಜೀವಹಾನಿ ಅಷ್ಟಿಷ್ಟಲ್ಲ. ಈ ಗಂಭೀರ ಪಿಡುಗಿನ ವಿರುದ್ಧ ದೇಶದ ನ್ಯಾಯಾಲಯಗಳು ಕೂಡ ಎಚ್ಚರಿಕೆ ನೀಡಿದ್ದವು. ಕೊನೆಗೂ, ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು, ಮಸೂದೆ ರೂಪಿಸಿದ್ದು, ಸಂಸತ್ತಿನ ಅಂಗೀಕಾರ ದೊರೆತಿದೆ. ಆನ್ಲೈನ್ ಮನಿ ಗೇಮ್ಳಲ್ಲಿ ತೊಡಗಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 1 ಕೋಟಿಯವರೆಗೂ ದಂಡ ವಿಧಿಸುವ ಅವಕಾಶ ಹೊಸ ಕಾನೂನಿಗೆ ಇರುತ್ತದೆ. ಆನ್ಲೈನ್ ಮನಿ ಗೇಮ್ ಕುರಿತ ಜಾಹೀರಾತು ಮಾಡಿದ್ದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಮನಿ ಗೇಮ್ಸ್ಗಾಗಿ ಹಣ ವರ್ಗಾವಣೆಯ ಸೌಲಭ್ಯ ಕಲ್ಪಿಸಿದ್ದಲ್ಲಿ 3 ವರ್ಷಗಳ ಕಾರಾಗೃಹ ವಾಸ, 1 ಕೋಟಿ ರೂ.ವರೆಗೆ ದಂಡ ವಿಧಿಸಬಹುದಾಗಿದೆ.
ದೇಶದಲ್ಲಿ ಮನಿ ಗೇಮಿಂಗ್ನಲ್ಲಿ ತೊಡಗುವವರ ಪೈಕಿ ಶೇಕಡ 47ರಷ್ಟು ಜನರು 18-30 ವಯೋಮಾನದವರು ಎಂಬುದು ಗಮನಾರ್ಹ. ಇವರನ್ನು ಬೆಟ್ಟಿಂಗ್ ಕೂಪದಿಂದ ಆಚೆ ತರಲು ಈ ನಿರ್ಣಯ ಸಹಕಾರಿ. ಸಾಲಸೋಲ ಮಾಡಿ ಯುವಕರು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದ್ದರು. ಎಷ್ಟೋ ಜನರು ಇದರಿಂದ ಹೊರಬರಲಾಗದೆ ಆತ್ಮ ಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಗೇಮಿಂಗ್ ಇಂಡಸ್ಟ್ರಿಯಲ್ಲಿ ಮನಿ ಗೇಮಿಂಗ್ನ ಪಾಲು ಶೇ. 85ರಷ್ಟಿದ್ದು, ಭಾರತದಲ್ಲಿ 60 ಕೋಟಿ ಬಳಕೆದಾರರಿದ್ದಾರೆ. ಇನ್ಮುಂದೆ ಡ್ರೀಮ್ಸ್ 11ನಂಥ ಆನ್ಲೈನ್ ಗೇಮ್ಸ್ ಮೇಲೆ ಟೀಂ ಕಟ್ಟುವಂತಿಲ್ಲ. ಹಾಗೆ ಮಾಡಿದರೆ ಜೈಲು ಶಿಕ್ಷೆ ಮತ್ತು ದಂಡ ಕಟ್ಟಿಟ್ಟ ಬುತ್ತಿ. ಬೆಟ್ಟಿಂಗ್ನಲ್ಲಿ ಕಪ್ಪು ಹಣದ ಚಲಾವಣೆಯೂ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಮತ್ತು ಇಂಥ ಹಣ ಸಮಾಜವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುವ ಅಪಾಯವೂ ಇದೆ.
ಆನ್ಲೈನ್ ಆಟಗಳಿಂದಾಗಿ ಸರ್ಕಾರಗಳಿಗೆ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ವಾರ್ಷಿಕವಾಗಿ ದೊಡ್ಡ ಮೊತ್ತದ ಆದಾಯ ಬರುತ್ತಿದೆ. ಈ ಕಾರಣಕ್ಕಾಗಿಯೇ ಕಠಿಣ ನಿಲುವು ತಳೆಯುತ್ತಿಲ್ಲ ಎಂಬ ಆರೋಪವಿತ್ತು. ಆದರೆ, ಕೇಂದ್ರ ಸರ್ಕಾರ ಸಮಸ್ಯೆಯ ಗಂಭೀರತೆಯನ್ನು ಅರಿತು ದಿಟ್ಟ ನಿರ್ಧಾರ ಕೈಗೊಂಡಿರುವುದು ಸೂಕ್ತವಾಗಿಯೇ ಇದೆ. ಇನ್ನು ರಾಜ್ಯ ಸರ್ಕಾರಗಳು ಕೂಡ ಇದೇ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಂಡರೆ ಮನಿ ಗೇಮಿಂಗ್ ಎಂಬ ಪಿಡುಗಿನ ವಿರುದ್ಧ ಪರಿಣಾಮಕಾರಿ ಅಸ್ತ್ರ ಪ್ರಯೋಗಿಸಿದಂತಾಗುತ್ತದೆ. ತಮಿಳುನಾಡು ಸರ್ಕಾರ ಈಗಾಗಲೇ ರಿಯಲ್ ಮನಿ ಗೇಮ್ಸ್ (ಆರ್ಎಂಜಿ)ಗಳನ್ನು ನಿಷೇಧಿಸಿ, ಕಠಿಣ ನಿಯಮಗಳನ್ನು ರೂಪಿಸಿದೆ. ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆಪ್ಗಳ ಬಗ್ಗೆ ತನಿಖೆಗಾಗಿ ತೆಲಂಗಾಣ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರೂಪಿಸಿದೆ.
ಹಣ ಮಾಡುವ ಧಾವಂತದಲ್ಲಿ ಹದಿಹರೆಯದವರು ಮತ್ತು ತರುಣರು ಆನ್ಲೈನ್ ಮನಿ ಗೇಮಿಂಗ್ನ ಜಾಲದಲ್ಲಿ ಸಿಲುಕುತ್ತಿದ್ದಾರೆ. ಇದರಿಂದ ಅವರಲ್ಲಿ ಖಿನ್ನತೆ, ಚಿಂತೆ, ಆತಂಕ ಹೆಚ್ಚುತ್ತಿದೆ. ಆನ್ಲೈನ್ ಮನಿ ಗೇಮಿಂಗ್ ಹಾವಳಿಯಿಂದ ಕೆಳ ಮಧ್ಯಮ ಮತ್ತು ಮಧ್ಯಮವರ್ಗದ ಯುವಕರು ಹೆಚ್ಚು ಹಾನಿ ಅನುಭವಿಸುತ್ತಿದ್ದಾರೆ. ಹಾಗಾಗಿ, ಇದನ್ನು ತಡೆಯಲು ಕೂಡಲೇ ಪರಿಣಾಮಕಾರಿ ಕಾನೂನು ರಚನೆಯಾಗಬೇಕು.
| ಅಲಹಾಬಾದ್ ಹೈಕೋರ್ಟ್ (2025ರ ಮೇನಲ್ಲಿ ಹೇಳಿದ್ದು)
ಇಂಡಿಯಾ ಬ್ರ್ಯಾಂಡೆಡ್ ಈಕ್ವಿಟಿ ಫೌಂಡೇಶನ್ನ ತಾಜಾ ವರದಿಯ ಪ್ರಕಾರ ದೇಶದಲ್ಲಿ 60 ಕೋಟಿ ಜನರು ಆನ್ಲೈನ್ ಆಟಗಳಿಗೆ ದಾಸರಾಗಿದ್ದಾರೆ. ಇದು ಬರೀ ಮನರಂಜನೆಗೆ ಆಡುವ ಆಟವಲ್ಲ. ಬೇಗ ಹಣ ಮಾಡಬೇಕು, ಐಷಾರಾಮಿ ಜೀವನ ಸಾಗಿಸಬೇಕು ಎಂಬ ಭ್ರಮೆಯಲ್ಲಿ ಗೇಮಿಂಗ್ಸ್ ಆಪ್ಗಳಲ್ಲಿ ದುಡ್ಡು ತೊಡಗಿಸಿ ಆಡುವ ಅಪಾಯಕಾರಿ ಆಟ. ದುಡ್ಡು ಮಾಡುವುದರಿರಲಿ, ದಿನದಿಂದ ದಿನಕ್ಕೆ ಸಾಲದ ಪ್ರಮಾಣ ಹೆಚ್ಚುತ್ತ ಹೋಗಿ, ಕೊನೆಗೊಮ್ಮೆ ಅದು ಕುತ್ತಿಗೆಯವರೆಗೂ ಬಂದಾಗ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚುತ್ತಲೇ ಇವೆ. ಮಕ್ಕಳು ಈ ಬಗೆಯ ಜೂಜಿಗೆ ದಾಸರಾಗಿರುವುದು ಬಹುತೇಕ ಪ್ರಕರಣಗಳಲ್ಲಿ ತಂದೆ-ತಾಯಿಗೆ ಗೊತ್ತಿರುವುದೇ ಇಲ್ಲ. ಸಾಲದ ಮೊತ್ತ ಹಲವು ಲಕ್ಷ ದಾಟಿದಾಗ ಮನೆಯ ಸದಸ್ಯರು ಏನೂ ಮಾಡದಂಥ ಅಸಹಾಯಕ ಸ್ಥಿತಿ. ಹಾಗಾಗಿ, ಕೊನೆಗೆ ಯುವಕರು ಸಾವಿನ ದಾರಿ ತುಳಿಯುತ್ತಿದ್ದು, ‘ಈ ಮೋಸದಾಟಕ್ಕೆ ನೀವು ಬಲಿಯಾಗಬೇಡಿ’ ಎಂಬ ಸಂದೇಶವನ್ನು ಸಾಯುವ ಮುನ್ನ ನೀಡುತ್ತಿದ್ದಾರೆ. ಮಧ್ಯಮವರ್ಗದ ಮತ್ತು ಗ್ರಾಮೀಣ ಭಾಗದ ಯುವಕರು ಈ ಗೇಮಿಂಗ್ ಬಲೆಗೆ ಸಿಲುಕೊಂಡಿದ್ದು, ಹೊರಬರಲಾರದೆ ಒದ್ದಾಡುತ್ತಿದ್ದಾರೆ.
ರಿಯಲ್ ಮನಿ ಗೇಮ್ ಎಂದರೆ ಬಳಕೆದಾರರೊಬ್ಬರು ನಗದು ಅಥವಾ ಇತರ ರೂಪದಲ್ಲಿ ಹಣವನ್ನು ಠೇವಣಿ ಇಟ್ಟು, ಆ ಮೊತ್ತದಿಂದ ಲಾಭ ಗಳಿಸುವ ಉದ್ದೇಶದಿಂದ ಆನ್ಲೈನ್ನಲ್ಲಿ ಆಡುವ ಆಟ. ಇಲ್ಲಿ ಲಾಭ ಎಂದರೆ ಬಹುಮಾನ ಅಥವಾ ನಗದು.
60 ಕೋಟಿ ಜನರು ಆನ್ಲೈನ್ ಮನಿ ಗೇಮಿಂಗ್ನಲ್ಲಿ ವರ್ಷಕ್ಕೆ ಕಡಿಮೆ ಎಂದರೂ 20 ಸಾವಿರ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆನ್ಲೈನ್ ಗೇಮಿಂಗ್ ಮಾರುಕಟ್ಟೆ ಪ್ರಸ್ತುತ 34,000 ಕೋಟಿ ರೂ.ಗಳದ್ದಾಗಿದ್ದು, 2029ರವರೆಗೆ 80 ಸಾವಿರ ಕೋಟಿ ರೂ.ಗೆ ತಲುಪಲಿದೆ ಎನ್ನುತ್ತವೆ ಮೂಲಗಳು.
ಎಲ್ಲ ಥರದ ಆನ್ಲೈನ್ ಮನಿ ಗೇಮ್ಸ್ ಹಾಗೂ ಅವುಗಳನ್ನು ಉತ್ತೇಜಿಸುವ ಇ-ಸ್ಪೋರ್ಟ್ಸ್ ಮತ್ತು ಆನ್ಲೈನ್ ಸೋಷಿಯಲ್ ಗೇಮಿಂಗ್ಗಳನ್ನು ನಿಷೇಧಿಸುವ ಮಹತ್ವದ ಮಸೂದೆಗೆ ಸಂಸತ್ ಅನುಮೋದನೆ ಲಭಿಸಿದೆ. ರಾಜ್ಯಸಭೆಯಲ್ಲಿ ಗುರುವಾರ ಗದ್ದಲದ ನಡುವೆಯೂ ಚರ್ಚೆ ಇಲ್ಲದೆ ಅದಕ್ಕೆ ಅಂಗೀಕಾರ ನೀಡಲಾಗಿದೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿತ್ತು. ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025ಅನ್ನು ಮೇಲ್ಮನೆಯಲ್ಲಿ ಮಂಡಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಈ ಶಾಸನವು ಆನ್ಲೈನ್ ಗೇಮಿಂಗ್ ವಿಭಾಗದ ಮೂರನೇ ಎರಡರಷ್ಟು ಭಾಗವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು. ಸಮಾಜಕ್ಕೆ ಅದರಲ್ಲೂ ಮಧ್ಯಮ ವರ್ಗದ ಯುವ ಜನತೆಗೆ ದೊಡ್ಡ ಸಮಸ್ಯೆ ಆಗಿರುವ ಆನ್ಲೈನ್ ಗೇಮ್ಳನ್ನು ಈ ಶಾಸನ ನಿಷೇಧಿಸಲಿದೆ ಎಂದು ಅವರು ವಿವರಿಸಿದರು. ಇದು ಗೀಳಾಗಿ ಪರಿವರ್ತನೆಯಾಗಿದ್ದು, ಕುಟುಂಬಗಳು ಉಳಿತಾಯವನ್ನು ಕಳೆದುಕೊಳ್ಳುವಂತಾಗಿದೆ ಎಂದು ಸಚಿವರು ಈ ಶಾಸನದ ಅನಿವಾರ್ಯತೆಯನ್ನು ಪ್ರತಿಪಾದಿಸಿದರು.