ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನೂತನ ಅಧ್ಯಕ್ಷರಾಗಿ ಜಯ್ ಷಾ ಆಯ್ಕೆಯಾಗಿದ್ದು, ಈ ಹುದ್ದೆಗೇರಿದ ಅತಿ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾದ 35 ವರ್ಷದ ಜಯ್ ಷಾ 2021ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾದರು. ಇದೀಗ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಜಯ್ ಷಾ ಹೊಸ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದು, ಭಾರತಕ್ಕೆ ಬಂಪರ್ ಎಂದು ಹೇಳಬಹುದಾಗಿದೆ.
ಆಗಸ್ಟ್ 27ರಂದು ಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಜಯ್ ಷಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಪಾಕಿಸ್ತಾನ ಸೇರಿದಂತೆ ಐಸಿಸಿ ಸದಸ್ಯ ರಾಷ್ಟ್ರಗಳು ಜಯ್ ಷಾ ಅವರ ಆಯ್ಕೆಯನ್ನು ಬೆಂಬಲಿಸಿದ್ದವು. ಆದರೆ, ಜಯ್ ಷಾರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಕುರಿತು ಐಸಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಆಯ್ಕೆ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕ್ರಿಕೆಟ್ ವೆಸ್ಟ್ ಇಂಡೀಸ್ನ ಸಿಇಒ ಜಾನಿ ಗ್ರೇವ್, ಆಂತರಿಕ ರಾಜಕೀಯದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಲು ಐಸಿಸಿ ಇಷ್ಟಪಡುವುದಿಲ್ಲ. ಬಿಸಿಸಿಐಯಲ್ಲಿ ಜಯ್ ಷಾ ವಅರ ಕಾರ್ಯವೈಖರಿ ನೋಡಿದರೆ ಅವರ ಸಾಮರ್ಥ್ಯ ಏನೆಂದು ತಿಳಿಯುತ್ತದೆ. ಐಪಿಎಲ್. ಮಹಿಳಾ ಪ್ರೀಮಿಯರ್ ಲೀಗ್, ಏಕದಿನ ವಿಶ್ವಕಪ್ ಸೇರಿದಂತೆ ಅನೇಕ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇದಲ್ಲದೆ ಬಿಸಿಸಿಐ ಹಾಗೂ ಬೇರೆ ಬೇರೆ ಕಂಪನಿಗಳ ನಡುವೆ ದೊಡ್ಡ ಮೊತ್ತದ ಒಪ್ಪಂದಗಳನ್ನು ಮಾಡಿಸುವ ಮೂಲಕ ಅಪಾರ ಪ್ರಮಾಣದ ಆದಾಯವನ್ನು ತಂದುಕೊಟ್ಟಿದ್ದಾರೆ. ಹೀಗಾಗಿ ಜಯ್ ಷಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಜಾನಿ ಗ್ರೇವ್ ತಿಳಿಸಿದ್ದಾರೆ.
ಐಸಿಸಿ ಅಧ್ಯಕ್ಷರಾಗಿ ಜಯ್ ಷಾ ಡಿಸೆಂಬರ್ 01ರಂದು ಅಧಿಕಾರ ಸ್ವೀಕರಿಸಲಿದ್ದು, ಇದಾದ ಬಳಿಕ ಅವರ ಅಧ್ಯಕ್ಷತೆಯಲ್ಲಿ ಸಾಲು ಸಾಲು ಟೂರ್ನಿಗಳು ನಡೆಯುತ್ತವೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಹಾಗೂ ಏಕದಿನ ವಿಶ್ವಕಪ್ ನಡೆಯಲಿದೆ.