ಕ್ರೀಡೆ

ಬಾಂಗ್ಲಾ ವಿರುದ್ಧ ಮುನ್ನಡೆ ಸಾಧಿಸಿದರೂ ಫಾಲೋ ಆನ್​ ಹೇರದ ಟೀಮ್​ ಇಂಡಿಯಾ; ಕಾರಣ ಹೀಗಿದೆ

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಸಂಪೂರ್ಣ ಪಾರುಪತ್ಯ ಮರೆದಿದ್ದು, ಎದುರಾಳಿಗಳ ಬೆಂಡೆತ್ತಿದೆ. ನಾಲ್ಕನೇ ದಿನದಂತ್ಯಕ್ಕೆ ಗೆಲ್ಲಬೇಕೆಂಬ ಹಂಬಲದೊಂದಿಗೆ ಭಾರತ ದಿನದಾಟ ಆರಂಭಿಸಿದ್ದು, ಮೊದಲ ಇನ್ನಿಂಗ್ಸ್​​ ವೇಳೆ ನಡೆದ ಘಟನೆಯೊಂದು ಕುತೂಹಲ ಮೂಡಿಸುತ್ತಿದೆ. ಈ ಬಗ್ಗೆ ಕ್ರೀಡಾ ವಲಯದಲ್ಲೂ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 376 ರನ್​ಗಳಿಸಿ ಆಲೌಟ್​ ಆಯಿತು. ಆತಿಥೇಯರಿಗೆ ಟಕ್ಕರ್​ ಕೊಡುವ ನಿಟ್ಟಿನಲ್ಲಿ ಕಣಕ್ಕಿಳಿದ ಬಾಂಗ್ಲಾ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 149 ರನ್​ಗಳಿಗೆ ಆಲೌಟ್ ಆಗುವ ಮೂಲಕ ಎದುರಾಳಿಗಳಿಗೆ 227 ರನ್​ಗಳ ಭಾರೀ ಮುನ್ನಡೆ ನೀಡಿದರು.

ಮೊದಲ ಇನಿಂಗ್ಸ್​ನಲ್ಲಿ 227 ರನ್​ಗಳ ಮುನ್ನಡೆ ಪಡೆದರೂ ಟೀಮ್ ಇಂಡಿಯಾ ಬಾಂಗ್ಲಾದೇಶದ ಫಾಲೋ ಆನ್​ ಹೇರದೆ ಎರಡನೇ ಇನ್ನಿಂಗ್ಸ್​ ಆರಂಭಿಸಿತು. 227 ರನ್​ಗಳ ಮುನ್ನಡೆ ಹೊಂದಿದ್ದರೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ್ ತಂಡಕ್ಕೆ ಅಂತಹ ಯಾವುದೇ ಆಹ್ವಾನ ನೀಡಲಿಲ್ಲ. ಇದಕ್ಕೆ ಕಾರಣವೂ ತಿಳಿದು ಬಂದಿದ್ದು, ನಾಯಕ ರೋಹಿತ್​ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೃಹತ್ ಮೊತ್ತದ ಮುನ್ನಡೆ ಹೊಂದಿದ್ದರೂ ಟೀಮ್ ಇಂಡಿಯಾ ಫಾಲೋ ಆನ್ ಹೇರದಿರಲು ಮುಖ್ಯ ಕಾರಣ ಮುಂಬರುವ ಟೆಸ್ಟ್ ಸರಣಿಗಳು. ಅಂದರೆ ಭಾರತೀಯ ಬ್ಯಾಟರ್​ಗಳು ಮುಂಬರುವ ನ್ಯೂಜಿಲೆಂಡ್​, ಆಸ್ಟ್ರೇಲಿಯಾ ಹಾಗೂ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಆಡಬೇಕಾಗಿರುವ ಕಾರಣ ಬ್ಯಾಟಿಂಗ್ ಅಭ್ಯಾಸ ನಡೆಸಲು ದ್ವಿತೀಯ ಇನಿಂಗ್ಸ್​ ಆರಂಭಿಸಿದೆ.ಒಂದು ವೇಳೆ ಫಾಲೋ ಆನ್ ಹೇರಿದರೆ ಬಾಂಗ್ಲಾದೇಶ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಸಾಧ್ಯತೆ ಹೆಚ್ಚಿತ್ತು.

ಹೀಗಾಗಿಯೇ ಟೀಮ್ ಇಂಡಿಯಾ ನ್ಯೂಜಿಲೆಂಡ್​, ಆಸ್ಟ್ರೇಲಿಯಾ ಹಾಗೂ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ಗೂ ಮುನ್ನ ಬ್ಯಾಟಿಂಗ್ ಅಭ್ಯಾಸ ನಡೆಸಲು ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಅನ್ನು ಬಳಸಿಕೊಳ್ಳುತ್ತಿದೆ. ಅದರಂತೆ ಫಾಲೋ ಆನ್ ಅವಕಾಶವಿದ್ದರೂ ಟೀಮ್ ಇಂಡಿಯಾ ಬ್ಯಾಟಿಂಗ್​ಗೆ ಅಭ್ಯಾಸಕ್ಕಾಗಿ ದ್ವಿತೀಯ ಇನಿಂಗ್ಸ್ ಆಡಿದೆ. ಈ ವಿಚಾರವಾಗಿ ನಾಯಕ ರೋಹಿತ್​ ಶರ್ಮಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.