Kavya Maran : ಟೀಮ್ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಸನ್ ರೈಸರ್ಸ್ ಹೈದರಾಬಾದ್ ( SRH ) ಜತೆಗಿನ ಸಂಬಂಧವನ್ನು ಕಡಿತಗೊಳಿಸಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಭುವಿ ಭಾರಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಎಸ್ಆರ್ಎಚ್ ಅಭಿಮಾನಿಗಳು ತಂಡದ ಒಡತಿ ಕಾವ್ಯಾ ಮಾರನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ (ನ.24) ಮತ್ತು ಸೋಮವಾರ (ನ.25) ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಮೆಗಾ ಹರಾಜು ನಡೆಯಿತು. ಎರಡನೇ ದಿನ ಅಂದ್ರೆ ಸೋಮವಾರದ ಹರಾಜಿನಲ್ಲಿ ಭುವಿ, ಆರ್‌ಸಿಬಿ ಪಾಲಾದರು. ರೈಟ್ ಟು ಮ್ಯಾಚ್ ಕಾರ್ಡ್ ಬಳಸಿಯಾದ್ರೂ ಭುವಿಯನ್ನು ಮರಳಿ ಪಡೆಯಬಹುದಿತ್ತು ಎಂದು ಎಸ್ಆರ್ಎಚ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಭುವಿಯನ್ನು ಕೈಬಿಟ್ಟಿದ್ದಕ್ಕೆ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
ಕನಿಷ್ಠ 2 ಕೋಟಿ ಮೂಲ ಬೆಲೆಯಲ್ಲಿ ಭುವಿ ಸೋಮವಾರ ಹರಾಜಿಗೆ ಬಂದರು. ಭುವಿ ಹೆಸರು ಕೇಳಿದ ತಕ್ಷಣ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಬಿಡ್ಡಿಂಗ್ಗೆ ಇಳಿದವು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿ, 9 ಕೋಟಿ ರೂ.ವರೆಗೆ ಬಿಡ್ ಮಾಡಿದವು. ಇದಾದ ಬಳಿಕ ಲಖನೌ ತಂಡ ಭುವಿಯ ಬೆಲೆಯನ್ನು 10 ಕೋಟಿ ರೂ.ಗೆ ಏರಿಸಿದ ನಂತರ ಮುಂಬೈ ಸ್ಪರ್ಧೆಯಿಂದ ಹಿಂದೆ ಸರಿಯಿತು. ಇದರಿಂದ ಭುವಿ, ಲಖನೌ ಪಾಲಾಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಅನಿರೀಕ್ಷಿತವಾಗಿ ಆರ್‌ಸಿಬಿ ರೇಸ್‌ಗೆ ಜಿಗಿದ್ದು, 75 ಲಕ್ಷ ರೂ. ಹೆಚ್ಚಿನ ಬಿಡ್ ಕೂಗಿತು. ಇದರಿಂದ ಲಖನೌ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯಿತು. ಅಂತಿಮವಾಗಿ ಭುವನೇಶ್ವರ್ ಕುಮಾರ್ 10.75 ಕೋಟಿ ರೂ.ಗೆ ಆರ್‌ಸಿಬಿ ಪಾಳಯಕ್ಕೆ ಎಂಟ್ರಿ ಕೊಟ್ಟರು.
ಭುವಿ 2011 ರಲ್ಲಿ ಐಪಿಎಲ್ ಪಾದರ್ಪಣೆ ಮಾಡಿದರು. ಭುವಿ ಮೊದಲ ಸೀಸನ್ನಲ್ಲಿ ಪುಣೆ ವಾರಿಯರ್ಸ್ (ಈಗ ನಿಷ್ಕ್ರಿಯ) ತಂಡಕ್ಕಾಗಿ ಆಡಿದರು. ಏಳಕ್ಕಿಂತ ಕಡಿಮೆ ಎಕನಾಮಿಯೊಂದಿಗೆ 2013 ರಲ್ಲಿ 13 ವಿಕೆಟ್‌ಗಳನ್ನು ಪಡೆದ ಭುವಿಯನ್ನು 2014 ರಲ್ಲಿ ಸನ್‌ರೈಸರ್ಸ್ ಸ್ವಾಧೀನಪಡಿಸಿಕೊಂಡಿತು. 2016ರಲ್ಲಿ ಎಸ್ಆರ್ಎಚ್ ಪರ 23 ವಿಕೆಟ್‌ಗಳನ್ನು ಕಬಳಿಸಿದರು. ಮುಂದಿನ ವರ್ಷ ಅಂದರೆ 2017ರಲ್ಲಿ 26 ವಿಕೆಟ್ ಪಡೆದರು. ಆದರೆ, ನಂತರದ ಸೀಸನ್ನಿಂದ ಭುವಿ ಒಮ್ಮೆಯೂ 20 ವಿಕೆಟ್‌ಗಳ ಗಡಿ ತಲುಪಲು ಸಾಧ್ಯವಾಗಲಿಲ್ಲ. ಇದೀಗ ಸನ್ ರೈಸರ್ಸ್ ಅವರನ್ನು ಕೈಬಿಟ್ಟಿರುವುದು ಗಮನಾರ್ಹ. ಮೇಲಾಗಿ ಹರಾಜಿನಲ್ಲೂ ಅವರ ಬಗ್ಗೆ ಆಸಕ್ತಿ ತೋರಲಿಲ್ಲ.
ಭುವಿಯನ್ನು ಎಸ್ಆರ್ಎಚ್ ಕೈಬಿಟ್ಟಿದ್ದಕ್ಕೆ ಆರೆಂಜ್ ಆರ್ಮಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾವ್ಯಾ ಮೇಡಂ ನೀವು ಈ ರೀತಿ ಮಾಡಬಾರದಿತ್ತು. ಭುವಿ ಅವರನ್ನು ತೆಗೆದುಕೊಳ್ಳಬೇಕಿತ್ತು. ನಿಮ್ಮನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತೇವೆ ಭುವಿ ಅಣ್ಣ ಎಂದು ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ಇನ್ನು ಕೆಲವರು ‘ನನ್ನ ಲವ್ ಬ್ರೇಕಪ್‌ಗಿಂತಲೂ, ಭುವಿ-ಸನ್‌ರೈಸರ್ಸ್ ಬ್ರೇಕಪ್‌ನಿಂದ ಹೆಚ್ಚು ನೋವಾಗಿದೆ’ ಎಂದು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಭುವಿ ಹಲವು ಸಂದರ್ಭಗಳಲ್ಲಿ ಸನ್‌ರೈಸರ್ಸ್ ತಂಡದ ನಾಯಕರಾಗಿದ್ದರು.
ಮತ್ತೊಂದೆಡೆ ಭುವಿ ಆಗಮನದಿಂದ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಭುವಿ ಒಟ್ಟು 176 ಐಪಿಎಲ್ ಪಂದ್ಯಗಳನ್ನು ಆಡಿದ್ದು, 181 ವಿಕೆಟ್ ಪಡೆದಿದ್ದಾರೆ. ಅದರಲ್ಲಿ ಅತ್ಯುತ್ತಮ ಪ್ರದರ್ಶನವೆಂದರೆ, 19 ರನ್ಗೆ 5 ವಿಕೆಟ್ ಪಡೆದಿದ್ದು. ಉತ್ತರ ಪ್ರದೇಶ ಮೂಲದ ಈ ವೇಗಿ ಕೆಲ ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿಲ್ಲ. ಆದರೆ, ದೇಶೀಯ ಟಿ20ಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸುವ ಮೂಲಕ ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೆಲೆಗೆ ಬಿಕರಿಯಾಗಿದ್ದಾರೆ. (ಏಜೆನ್ಸೀಸ್)