ಕ್ರೀಡೆ

ಮಳೆಯಿಂದಾಗಿ ಎಸ್​ಆರ್​ಎಚ್​-ರಾಜಸ್ಥಾನ ನಡುವಿನ ಕ್ವಾಲಿಫೈಯರ್​-2 ರದ್ದಾದರೆ ಯಾರಿಗೆ ಲಾಭ; ಹೀಗಿದೆ ಲೆಕ್ಕಾಚಾರ

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್​ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಮೇ 26ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ತಂಡವನ್ನು ಎದುರಿಸಲಿದೆ.

ಮೇ 24ರಂದು ನಡೆಯುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಸೋತ ತಂಡದ ಪಯಣ ಅಲ್ಲಿಗೆ ಅಂತ್ಯಗೊಳಲಿದೆ. ಆದರೆ ಕ್ವಾಲಿಫೈಯರ್-2 ಪಂದ್ಯದ ವೇಳೆ ಮಳೆ ಬಂದರೆ, ಯಾವ ತಂಡವು ಫೈನಲ್ ಪ್ರವೇಶಿಸುತ್ತದೆ ಎಂಬುದನ್ನು ನೋಡಬೇಕಾಗಿದೆ. ಒಂದು ವೇಳೆ ಮಳೆಯಿಂದಾಗಿ ಕ್ವಾಲಿಫಯರ್​-2 ರದ್ದಾದರೆ ಯಾವ ತಂಡ ಫೈನಲ್​ ಪ್ರವೇಶಿಸಲಿದೆ ಎಂಬ ಲೆಕ್ಕಾಚಾರ ಹೊರಬಿದ್ದಿದೆ.

ಲೀಗ್ ಹಂತದ ಯಾವುದೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಉಭಯ ತಂಡಗಳು ತಲಾ 1 ಅಂಕ ಪಡೆಯುತ್ತಿದ್ದವು. ಆದರೆ, ಪ್ಲೇಆಫ್‌ನಲ್ಲಿ ಇದು ನಡೆಯುವುದಿಲ್ಲ. ಮಳೆ ಬಂದರೆ ಮೊದಲು ಓವರ್‌ಗಳನ್ನು ಕಡಿತಗೊಳಿಸಲಾಗುತ್ತಿದೆ. ಇನಿಂಗ್ಸ್ ಬಳಿಕ ಮಳೆ ಬಂದರೆ ಡಿಎಲ್‌ಎಸ್ ವಿಧಾನದ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಅದೇ ದಿನ ಪಂದ್ಯ ಪೂರ್ಣಗೊಳ್ಳದಿದ್ದರೆ, ಮೀಸಲು ದಿನದಂದು ಅದನ್ನು ಮುಗಿಸಲು ಪ್ರಯತ್ನಿಸಲಾಗುವುದು. ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್‌ಗೆ ಮೀಸಲು ದಿನವಿದೆ. ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಸೂಪರ್ ಓವರ್‌ನಿಂದ ಫಲಿತಾಂಶ ಪಡೆಯಲಾಗುವುದು.

ಇಷ್ಟೆಲ್ಲ ಆದ ನಂತರವೂ ಪಂದ್ಯ ನಡೆಯದಿದ್ದರೆ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಮುನ್ನಡೆಯಲಿದೆ. ಹೀಗಿರುವಾಗ ಎರಡನೇ ಕ್ವಾಲಿಫೈಯರ್‌ ಪಂದ್ಯ ಮಳೆಯಿಂದ ರದ್ದಾದರೆ ಸನ್‌ರೈಸರ್ಸ್ ಹೈದರಾಬಾದ್ ಫೈನಲ್‌ಗೆ ಲಗ್ಗೆ ಇಡಲಿದೆ. ಹೈದರಾಬಾದ್ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿದ್ದರೆ, 5 ಪಂದ್ಯಗಳಲ್ಲಿ ಸೋಲು ಹಾಗೂ 1 ಪಂದ್ಯ ಮಳೆಯಿಂದ ರದ್ದಾಗಿದೆ. ತಂಡದ ನೆಟ್ ರನ್ ರೇಟ್ +0.414 ಆಗಿದೆ. ರಾಜಸ್ಥಾನ ರಾಯಲ್ಸ್​ ತಂಡವು ಲೀಗ್​ ಹಂತದಲ್ಲಿ  8 ಪಂದ್ಯಗಳಲ್ಲು ಜಯಗಳಿಸಿದ್ದು, 5 ಪಂದ್ಯಗಳಲ್ಲಿ ಸೋಲು ಮತ್ತು 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ತಂಡದ ನೆಟ್ ರನ್ ರೇಟ್ +0.273 ಇದ್ದು, ಸನ್​ರೈಸರ್ಸ್​ಗಿಂತ ರಾಜಸ್ಥಾನ ರಾಯಲ್ಸ್​ ಹಿಂದಿರುವುದು ಮುಳುವಾಗಲಿದೆ.

ಮೇ 24 ರಂದು ಚೆನ್ನೈನ ಹವಾಮಾನದ ಕುರಿತು ಹೇಳುವುದಾದರೆ, ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆ ಶೇ.2 ಮಾತ್ರ ಇದೆ. ಹೀಗಾಗಿ ಪಂದ್ಯದ ದಿನ ಮಳೆ ಬೀಳುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸನ್​ರೈಸರ್ಸ್​ಗೆ ವರದಾನವಾಗಲಿದೆ.