ಕ್ರೀಡೆ

ಯಾವ ಬ್ಯಾಟ್ಸ್​ಮನ್​​ಗೆ ಬೌಲಿಂಗ್​ ಮಾಡಲು ನೀವು ಹೆದರುತ್ತೀರಿ? ಬುಮ್ರಾ ಕೊಟ್ಟ ಉತ್ತರ ವೈರಲ್​

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಅಂಕಣಕ್ಕೆ ಇಳಿದರೆ ಸಾಕು ಎದುರಾಳಿ ತಂಡದ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಉಂಟಾಗುತ್ತದೆ. ಏಕೆಂದರೆ, ಬುಮ್ರಾ ಅವರ ಬುಲೆಟ್​ ವೇಗದ ಎಸೆತಗಳಿಗೆ ಅಗ್ರ ಬ್ಯಾಟರ್‌ಗಳ ಬಳಿಯೂ ಉತ್ತರವಿಲ್ಲ. ಚೆಂಡನ್ನು ಸ್ವಿಂಗ್ ಮಾಡಿ ಬ್ಯಾಟರ್​ಗಳನ್ನೇ ಗೊಂದಲಕ್ಕೆ ದೂಡುತ್ತಾರೆ.

ಸ್ವಿಂಗ್​, ಕಟ್ಟರ್‌ಗಳು, ಯಾರ್ಕರ್‌ಗಳು ಹಾಗೂ ನಿಧಾನಗತಿಯ ಬೌನ್ಸರ್‌ ಸೇರಿದಂತೆ ಬುಮ್ರಾ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳಿವೆ. ಬುಮ್ರಾ ಅಂದರೆ, ಕನಸಿನಲ್ಲೂ ಬೆಚ್ಚಿಬೀಳುವ ಬ್ಯಾಟರ್​ಗಳ ಮಧ್ಯೆ ಬುಮ್ರಾ ಅವರು ಬೌಲಿಂಗ್​ ಮಾಡಲು ಯಾವ ಬ್ಯಾಟ್ಸ್​ಮನ್​ಗೆ ಹೆದರುತ್ತಾರೆ ಎಂಬ ಪ್ರಶ್ನೆ ಇತ್ತೀಚೆಗೆ ಅವರಿಗೆ ಎದುರಾಯಿತು. ಈ ವೇಳೆ ಬುಮ್ರಾ ಕೊಟ್ಟ ಉತ್ತರ ವೈರಲ್​ ಆಗಿದೆ.

ಬುಮ್ರಾ ಅವರು ಇತ್ತೀಚೆಗೆ ತಮಿಳುನಾಡಿನ ಸತ್ಯಭಾಮಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಬುಮ್ರಾಗೆ ಹಲವು ಪ್ರಶ್ನೆಗಳನ್ನು ಕೇಳಿದರು. ನಿಮ್ಮ ವೃತ್ತಿಜೀವನದಲ್ಲಿ ನೀವು ಬೌಲಿಂಗ್ ಮಾಡಿದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಯಾರು? ಎಂಬ ಪ್ರಶ್ನೆ ಎಲ್ಲರ ಗಮನ ಸೆಳೆಯಿತು. ಈ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ಬುಮ್ರಾ, ನಾನು ಯಾರಿಗೂ ಹೆದರುವುದಿಲ್ಲ ಎಂದರು.

ಈ ಪ್ರಶ್ನೆಗೆ ನಾನು ಉತ್ತಮ ಉತ್ತರವನ್ನು ನೀಡಲು ಬಯಸುತ್ತೇನೆ. ಸತ್ಯವೇನೆಂದರೆ, ಯಾವುದೇ ಬ್ಯಾಟರ್ ನನ್ನ ಮೇಲೆ ಪ್ರಾಬಲ್ಯ ಸಾಧಿಸದಂತೆ ನಾನು ನೋಡಿಕೊಳ್ಳತ್ತೇನೆ ಮತ್ತು ಅದಕ್ಕೆ ತಕ್ಕಂತೆ ನನ್ನ ಮನಸ್ಸನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ನಾನು ಪ್ರತಿ ಬ್ಯಾಟರ್​ ಅನ್ನು ಗೌರವಿಸುತ್ತೇನೆ. ಆದರೆ, ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡಿದರೆ ಈ ಜಗತ್ತಿನಲ್ಲಿ ಯಾರು ಕೂಡ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ನಾನೇ ಹೇಳಿಕೊಳ್ಳುತ್ತೇನೆ ಎಂದು ಬುಮ್ರಾ ಹೇಳಿದರು.

ಕ್ರೀಸ್‌ನಲ್ಲಿರುವ ಬ್ಯಾಟರ್ ಯಾರು ಎಂಬುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ನಾನು ಬೌಲಿಂಗ್‌ನತ್ತ ಮಾತ್ರ ಗಮನ ಹರಿಸುತ್ತೇನೆ. ಬೌಲಿಂಗ್ ಸಮಯದಲ್ಲಿ ಔಟ್ ಮಾಡಲು ಇರುವ ಅವಕಾಶಗಳನ್ನು ಕಂಡುಕೊಳ್ಳುವ ಕಡೆ ಗಮನಹರಿಸುತ್ತೇನೆ ಎಂದು ಬುಮ್ರಾ ಹೇಳಿದರು.

ಇದೇ ತಿಂಗಳು ಬಾಂಗ್ಲಾದೇಶದೊಂದಿಗೆ ಟೆಸ್ಟ್​ ಸರಣಿಯ ಆರಂಭವಾಗಲಿದ್ದು, ಅಲ್ಲಿಯವರೆಗೆ ಬುಮ್ರಾ ವಿಶ್ರಾಂತಿ ತೆಗೆದುಕೊಳ್ಳಲ್ಲಿದ್ದಾರೆ. ಇದರ ನಡುವೆ ಅವರು ಸತ್ಯಭಾಮಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಇನ್ನು ಸೆಪ್ಟೆಂಬರ್ 5ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಬುಮ್ರಾ ಆಡುತ್ತಿಲ್ಲ. ಹೆಚ್ಚು ವಿಶ್ರಾಂತಿ ನೀಡುವ ಉದ್ದೇಶದಿಂದ ಬಿಸಿಸಿಐ ಅವರನ್ನು ಆಯ್ಕೆ ಮಾಡಿಲ್ಲ. (ಏಜೆನ್ಸೀಸ್​)