ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ಹೇಮಾ ಸಮಿತಿ ವರದಿ ಬಗ್ಗೆ ಕೇಳಿದ್ದಕ್ಕೆ ಅಚ್ಚರಿ ಹೇಳಿಕೆ ನೀಡಿದ ರಜಿನಿಕಾಂತ್​!

Rajinikanth
Published on

ಚೆನ್ನೈ: ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ತೆರೆದಿಟ್ಟಿರುವ ಹೇಮಾ ಸಮಿತಿಯ ವರದಿಯ ಬಗ್ಗೆ ಸೂಪರ್​ ಸ್ಟಾರ್​ ರಜಿನಿಕಾಂತ್ ಅಚ್ಚರಿಯ ಹೇಳಿಕೆ ನೀಡಿದ್ದು, ಇಂಥದ್ದೊಂದು ವರದಿ ಇದೆ ಎಂಬುದೇ ನನಗೆ ತಿಳಿದಿಲ್ಲ ಎಂದಿದ್ದಾರೆ.

ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಜಿನಿಕಾಂತ್​, ಹೇಮಾ ಸಮಿತಿ ವರದಿಯ ಬಗ್ಗೆ ನನಗೇನು ಗೊತ್ತಿಲ್ಲ. ತಮಿಳು ಚಿತ್ರರಂಗದಲ್ಲೂ ಹೇಮಾ ಸಮಿತಿ ಮಾದರಿಯಲ್ಲಿ ಸಮಿತಿ ಇರಬೇಕೋ? ಇಲ್ಲವೋ? ಎಂಬುದು ಸಹ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ರಜಿನಿಕಾಂತ್​ ಅವರ ಈ ಹೇಳಿಕೆ ಸಿನಿರಂಗದಲ್ಲಿ ಅಚ್ಚರಿ ಮೂಡಿಸಿದೆ.

ಮಲಯಾಳಂನ ಖ್ಯಾತ ನಟ ಮುಮ್ಮಟ್ಟಿ ಕೂಡ ಹೇಮಾ ಸಮಿತಿ ವರದಿ ಬಗ್ಗೆ ಮಾತನಾಡಿದ್ದು, ಸಿನಿಮಾದಲ್ಲಿ ಯಾವುದೇ ಅಧಿಕಾರ ಕೇಂದ್ರ ಇಲ್ಲ ಎಂದಿದ್ದಾರೆ. ಸಮಾಜದಲ್ಲಿರುವ ಒಳಿತು ಮತ್ತು ಕೆಡುಕು ಸಿನಿಮಾದಲ್ಲಿಯೂ ಇದೆ. ಹೇಮಾ ಸಮಿತಿ ವರದಿಯಲ್ಲಿ ವಿವರಿಸಿರುವ ಶಿಫಾರಸುಗಳು ಮತ್ತು ಪರಿಹಾರಗಳನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ದೂರು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ಪೂರ್ಣ ಆವೃತ್ತಿ ನ್ಯಾಯಾಲಯದ ಮುಂದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲಿ ಎಂದು ಮಮ್ಮುಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನಟ ಮೋಹನ್​ ಲಾಲ್​ ಅವರು ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದು, ಎಲ್ಲ ಕಡೆ ಏನಾಗುತ್ತದೆಯೋ ಅದೇ ಸಿನಿಮಾದಲ್ಲಿಯೂ ನಡೆಯುತ್ತದೆ. ಆದರೆ, ನಾನದನ್ನು ಸಮರ್ಥಿಸುವುದಿಲ್ಲ. ಹೇಮಾ ಸಮಿತಿಯ ವರದಿ ತುಂಬಾ ಸ್ವಾಗತಾರ್ಹ. ನಾನು ಆ ಸಮಿತಿಯ ಮುಂದೆ ಎರಡು ಬಾರಿ ಮಾತನಾಡಿದ್ದೇನೆ. ನನ್ನ ಬಳಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ ಎಂದು ಹೇಳಿದರು.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net