ಭುವನೇಶ್ವರ್: ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಭರ್ಜರಿ ಜಯ ಸಾಧಿಸಿದ್ದು, ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸರಣಿಯ ಅಂತಿಮ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದ್ದು, ಆತಿಥೇಯರು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಗುರಿಯನ್ನು ಹೊಂದಿದ್ದಾರೆ.
ಸಾಮಾನ್ಯವಾಗಿ ನಾವು ನೋಡಿರುವಂತೆ ಪಂದ್ಯದ ವೇಳೆ ಅಥವಾ ನಂತರ ಕೆಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೆ ಒಂದು ಘಟನೆ ಭುವನೇಶ್ವರ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ (Virat Kohli) ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿರುವುದಕ್ಕೂ, ಕುಟುಂಬದೊಂದಿಗೆ ಇರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ವಿರಾಟ್ ತಮ್ಮ ಬಾಲ್ಯದ ಸ್ನೇಹಿತ ಶಾವೆಜ್ ಜೊತೆ ನಡೆದುಕೊಂಡ ರೀತಿಯೇ ಜೀವಂತ ಉದಾಹರಣೆಯಾಗಿತ್ತು. ಇದೀಗ ವಿರಾಟ್ ಬಿಗಿ ಭದ್ರತೆಯ ನಡುವೆಯು ಮಹಿಳೆಯೊಬ್ಬರ ಜೊತೆ ಮಾತುಕತೆ ನಡೆಸಿ ಅವರನ್ನು ತಬ್ಬಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮನ ಗೆಲ್ಲುತ್ತಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯ ಮುಗಿದ ಬಳಿಕ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ ಟೀಮ್ ಇಂಡಿಯಾ ಆಟಗಾರರು ಭುವನೇಶ್ವರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಯನ್ನು ಜೋರಾಗಿ ಕರೆದಿದ್ದು, ಅವರನ್ನು ನೋಡಿದ ಕೂಡಲೇ ವಿರಾಟ್ ಅವರತ್ತ ಧಾವಿಸಿ ತಬ್ಬಿಕೊಂಡು ಕೆಲಕ್ಷಣ ಮಾತನಾಡಿದ್ದಾರೆ. ಕೊಹ್ಲಿಯ ಮುಖಚಹರೆ ಹಾಗೂ ಮಾತನಾಡಿದ ರೀತಿ ನೋಡಿದರೆ ಮಹಿಳೆ ತುಂಬ ವರ್ಷದ ಪರಿಚಯ ಇರುವಂತೆ ಕಾಣುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಮಹಿಳೆ ಯಾರೆಂದು ಪ್ರಶ್ನಿಸಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸೋಮವಾರ (ಫೆಬ್ರವರಿ 10) ತಡರಾತ್ರಿ ಟೀಮ್ ಇಂಡಿಯಾ ಅಹಮದಾಬಾದ್‌ಗೆ ಬಂದಿಳಿದಿದೆ. ಭಾರತ ಈಗಾಗಲೇ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದಿದ್ದು, ಚಾಂಪಿಯನ್ಸ್ ಟ್ರೋಫಿಗಾಗಿ ದುಬೈಗೆ ಹಾರುವ ಮುನ್ನ ಟೀಮ್ ಇಂಡಿಯಾ ಸರಣಿ ಕ್ಲೀನ್ಸ್ವೀಪ್ನೊಂದಿಗೆ ಹೊರಡಲು ಸಜ್ಜಾಗಿದೆ. ವಿರಾಟ್ ಕೊಹ್ಲಿ (Virat Kohli) ತಮ್ಮ ಫಾರ್ಮ್‌ಗೆ ಮರಳಲು ಬುಧವಾರದ ಕೊನೆಯ ಪಂದ್ಯವು ನಿರ್ಣಾಯಕವಾಗಿದೆ.