ಬೆಂಗಳೂರು: ಪ್ರತಿ ಬಾರಿಯೂ ಏಕದಿನ ವಿಶ್ವಕಪ್ ಹೊಸತನಗಳಿಂದ ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯುತ್ತವೆ. ಪ್ರತಿ ಆವೃತ್ತಿಯೂ ಸ್ವರೂಪ, ನಿಯಮಾವಳಿಗಳಿಂದ ಭಿನ್ನತೆ ಹೊಂದಿರುತ್ತವೆ. ಬಣ್ಣದ ಜೆರ್ಸಿ, ರನೌಟ್ಗೆ ತೃತೀಯ ಅಂಪೈರ್, ಮಳೆ ಬಂದಾಗ ಬಳಸುವ ಡಕ್ವರ್ತ್-ಲೂಯಿಸ್ ರೂಲ್ಸ್, ಅಂಪೈರ್ ತೀರ್ಪು ಪರಿಶೀಲಿಸುವ ಡಿಆರ್ಎಸ್ ನಿಯಮಗಳು ವಿಶ್ವಕಪ್ನಿಂದಲೇ ಚಿರಪರಿಚಿತಗೊಂಡವು. ಈ ಸಲದ ವಿಶ್ವಕಪ್ನಲ್ಲೂ 2019ಕ್ಕಿಂತ ಭಿನ್ನವಾದ ಕೆಲ ನಿಯಮ, ಬೆಳವಣಿಗಳು ಕಾಣಸಿಗಲಿವೆ. ಅವುಗಳ ಸಂಪ್ತ ವಿವರ ಇಲ್ಲಿದೆ...
ಸೂಪರ್ ಓವರ್ ಟೈ ಆದರೆ ಸೂಪರ್ ಓವರ್
2019ರ ಫೈನಲ್ ಪಂದ್ಯದಲ್ಲಿ ವಿಜೇತರನ್ನು ನಿರ್ಧರಿಸಿದ ವಿವಾದಾತ್ಮಕ ನಿಯಮವನ್ನು ಈ ಬಾರಿ ಕೈಬಿಡಲಾಗಿದೆ. ಸೂಪರ್ ಓವರ್ ಕೂಡ ಟೈ ಆದ ಬಳಿಕ ಪಂದ್ಯದಲ್ಲಿ ಗರಿಷ್ಠ ಬೌಂಡರಿ-ಸಿಕ್ಸರ್ ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್, ಗೆಲುವಿಗೆ ಅರ್ಹವಾಗಿದ್ದ ನ್ಯೂಜಿಲೆಂಡ್ ತಂಡವನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದರಿಂದ, ಸೂಪರ್ ಓವರ್ ಟೈ ಆದರೆ, ಸ್ಪಷ್ಟ ಫಲಿತಾಂಶ ಬರುವವರೆಗೂ ಸೂಪರ್ ಓವರ್ ಮುಂದುವರಿಸುವ ಹೊಸ ನಿಯಮ ತರಲಾಗಿದೆ.
ಮಂಕಡಿಂಗ್ ಅಲ್ಲ ರನೌಟ್
ನಾನ್-ಸ್ಟ್ರೆ$ಕರ್ನಲ್ಲಿ ಎಸೆತಕ್ಕೆ ಮೊದಲೇ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟಾಗ ಬೌಲರ್ ಬೇಲ್ಸ್ ಉರುಳಿಸಿದರೆ ಅದನ್ನು ಮಂಕಡಿಂಗ್ ಎನ್ನಲಾಗುತ್ತಿತ್ತು. ಭಾರತದ ವಿನೂ ಮಂಕಡ್ 1948ರಲ್ಲಿ ಮೊದಲ ಬಾರಿ ಈ ರೀತಿ ಔಟ್ ಮಾಡಿದ್ದರಿಂದ ಅದಕ್ಕೆ ಅವರ ಹೆಸರೇ ಅಂಟಿಕೊಂಡಿತ್ತು. 2022ರ ಅಕ್ಟೋಬರ್ 1ರಿಂದ ಐಸಿಸಿ, ಮಂಕಡಿಂಗ್ ರೀತಿಯ ಔಟ್ ಅನ್ನೂ ರನೌಟ್ ಎಂದು ಪರಿಗಣಿಸುತ್ತಿದ್ದು, ಇತ್ತೀಚೆಗೆ ಈ ರೀತಿ ಔಟ್ ಪ್ರಯತ್ನಗಳೂ ಹೆಚ್ಚಾಗಿವೆ. ಹೀಗಾಗಿ ವಿಶ್ವಕಪ್ನಲ್ಲೂ ಇಂಥ ಮಂಕಡ್ ರನೌಟ್ ಕಾಣಸಿಕ್ಕರೆ ಅಚ್ಚರಿ ಇಲ್ಲ.
ಕ್ರಿಕೆಟ್ ಜನಕರೇ ಹಾಲಿ ಚಾಂಪಿಯನ್
ಮೂರು ಬಾರಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಇಂಗ್ಲೆಂಡ್, ಕ್ರಿಕೆಟ್ ಜನಕರೇ ವಿಶ್ವಕಪ್ ಗೆದ್ದಿಲ್ಲ ಎಂಬ ಅಪಹಾಸ್ಯಗಳನ್ನು ಎದುರಿಸಿತ್ತು. ಆದರೆ ಕಳೆದ ಬಾರಿ ತವರಿನಲ್ಲೇ ವಿಶ್ವಕಪ್ ಗೆದ್ದಿರುವ ಇಂಗ್ಲೆಂಡ್ ಈ ಬಾರಿ ಮೊದಲ ಸಲ ಹಾಲಿ ಚಾಂಪಿಯನ್ ತಂಡವಾಗಿ ಅಭಿಯಾನ ಆರಂಭಿಸುವ ಅವಕಾಶ ಪಡೆದಿದೆ.
ಬ್ಯಾಟ್ಸ್ಮನ್ ಈಗ ಬ್ಯಾಟರ್
ಲಿಂಗ ಸಮಾನತೆಯ ದೃಷ್ಟಿಯಿಂದ ಎಂಸಿಸಿ, 2021ರ ಸೆಪ್ಟೆಂಬರ್ನಲ್ಲಿ ಬ್ಯಾಟ್ಸ್ಮನ್ ಬದಲಿಗೆ ಬ್ಯಾಟರ್ ಎಂಬ ಪದವನ್ನು ಕ್ರಿಕೆಟ್ ಪರಿಭಾಷೆಗೆ ಸೇರಿಸಿತ್ತು. 2021ರ ಟಿ20 ವಿಶ್ವಕಪ್ನಿಂದ ಐಸಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಇದನ್ನು ಜಾರಿಗೆ ತಂದಿದ್ದು, ಏಕದಿನ ವಿಶ್ವಕಪ್ನಲ್ಲಿ ಈ ಬಾರಿ ಮೊದಲ ಸಲ ಬ್ಯಾಟರ್ ಪದ ಬಳಕೆಯಾಗಲಿದೆ.
ಚೆಂಡಿಗೆ ಎಂಜಲು ಹಚ್ಚುವಂತಿಲ್ಲ
ಚೆಂಡನ್ನು ಪಾಲಿಶ್ ಮಾಡಲು ಈಗ ಆಟಗಾರರು ಎಂಜಲು ಹಚ್ಚುವಂತಿಲ್ಲ. 2020ರಲ್ಲಿ ಕರೊನಾ ಹಾವಳಿ ಶುರುವಾದಾಗ ಈ ನಿಯಮವನ್ನು ತಾತ್ಕಾಲಿಕವಾಗಿ ಐಸಿಸಿ ಜಾರಿಗೆ ತಂದಿತ್ತು. ಕೋವಿಡ್-19 ಸೋಂಕಿನ ಭೀತಿ ಕಡಿಮೆಯಾದರೂ 2022ರಿಂದ ಐಸಿಸಿ, ಚೆಂಡಿಗೆ ಎಂಜಲು ಹಚ್ಚುವುದನ್ನು ಶಾಶ್ವತವಾಗಿ ನಿಷೇಧಿಸಿದೆ.
ಓವರ್ರೇಟ್ ಪೆನಾಲ್ಟಿ
ಈ ಹಿಂದಿನ ವಿಶ್ವಕಪ್ಗಳಲ್ಲಿ ನಿಧಾನಗತಿ ಓವರ್ಗಾಗಿ ಚೇಸಿಂಗ್ ತಂಡಕ್ಕೆ ಓವರ್ ಕಡಿತಗೊಳಿಸಲಾಗುತ್ತಿತ್ತು ಅಥವಾ ದಂಡ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಬಾರಿ ನಿಧಾನಗತಿ ಓವರ್ಗೆ ತಕ್ಷಣವೇ ಶಿಕ್ಷೆ ನೀಡಲಾಗುತ್ತದೆ. ಅಂದರೆ ಬೌಲಿಂಗ್ ಮಾಡುತ್ತಿರುವ ತಂಡ ನಿಗದಿತ ಸಮಯಕ್ಕಿಂತ ಹಿಂದುಳಿದಾಗ ಮೈದಾನದ 30 ಯಾರ್ಡ್ ಸರ್ಕಲ್ ಹೊರಗೆ ನಾಲ್ವರು ಫೀಲ್ಡರ್ಗಳನ್ನಷ್ಟೇ ನಿಲ್ಲಿಸಲು ಅವಕಾಶ ನೀಡಲಾಗುತ್ತದೆ. ಉದಾಹರಣೆಗೆ, ನಿಗದಿತ ಸಮಯದ ವೇಳೆ 48 ಓವರ್ ಅಷ್ಟೇ ಮುಗಿದಿದ್ದರೆ, ಕೊನೇ 2 ಓವರ್ ವೃತ್ತದ ಹೊರಗೆ 4 ಫೀಲ್ಡರ್ ಅಷ್ಟೇ ನಿಲ್ಲಬಹುದು. 2023ರ ಆರಂಭದಿಂದಲೇ ಇದು ಜಾರಿಯಲ್ಲಿದೆ.
ವೆಸ್ಟ್ ಇಂಡೀಸ್ ಬದಲಿಗೆ ನೆದರ್ಲೆಂಡ್
ಏಕದಿನ ವಿಶ್ವಕಪ್ನ ಮೊದಲ 2 ಆವೃತ್ತಿಗಳ ಚಾಂಪಿಯನ್ ಮತ್ತು ಒಂದು ಕಾಲದ ಬಲಿಷ್ಠ ತಂಡವೆನಿಸಿದ್ದ ವೆಸ್ಟ್ ಇಂಡೀಸ್ ಈ ಬಾರಿ ಟೂರ್ನಿಗೆ ಅರ್ಹತೆಯನ್ನೇ ಪಡೆದಿಲ್ಲ. ಕೆರಿಬಿಯನ್ ತಂಡವಿಲ್ಲದ ಮೊದಲ ಏಕದಿನ ವಿಶ್ವಕಪ್ ಇದಾಗಿದೆ. ಅಲ್ಲದೆ ಚಾಂಪಿಯನ್ ತಂಡವೊಂದು ವಿಶ್ವಕಪ್ ಅರ್ಹತೆ ಪಡೆಯಲು ವಿಫಲವಾಗಿದ್ದು ಇದೇ ಮೊದಲು. ವಿಂಡೀಸ್ ಬದಲು ಟೆಸ್ಟ್ ಮಾನ್ಯತೆ ಹೊಂದಿರದ ನೆದರ್ಲೆಂಡ್ ತಂಡ ಅರ್ಹತೆ ಸಂಪಾದಿಸಿದೆ. ಈ ಬಾರಿ ಟೂರ್ನಿಯಲ್ಲಿ ಆಡುವ ಏಕೈಕ ಐಸಿಸಿ ಅಸೋಸಿಯೇಟ್ ದೇಶವೂ ಇದಾಗಿದೆ.
ಹೊಸ ವೈರಿಗಳು
ವಿಶ್ವಕಪ್ ಎಂದರೆ ಹಿಂದೆಲ್ಲ ಇಂಗ್ಲೆಂಡ್-ಆಸ್ಟ್ರೆಲಿಯಾ, ಭಾರತ-ಪಾಕಿಸ್ತಾನ, ನ್ಯೂಜಿಲೆಂಡ್-ಆಸ್ಟ್ರೆಲಿಯಾಗಳ ವೈರತ್ವವೇ ಸುದ್ದಿಯಾಗುತ್ತಿತ್ತು. ಆದರೆ ಕ್ರಿಕೆಟ್ನಲ್ಲಿ ಪೈಪೋಟಿ ಹೆಚ್ಚಾದಂತೆ ಶತ್ರುತ್ವವೂ ಹೆಚ್ಚಾಗಿದೆ. ಈ ಬಾರಿ ಶ್ರೀಲಂಕಾ-ಬಾಂಗ್ಲಾದೇಶ, ಪಾಕಿಸ್ತಾನ-ಅಫ್ಘಾನಿಸ್ತಾನ ತಂಡಗಳ ಮುಖಾಮುಖಿಯೂ ಕುತೂಹಲ ಹೆಚ್ಚಿಸಿವೆ.