ಕ್ರೀಡೆ

ಎದುರಾಳಿ ತಂಡದವರು ನನ್ನನ್ನು ಅಪಹರಿಸಿ ಕೈ ಕತ್ತರಿಸುವುದಾಗಿ ಬೆದರಿಸಿದ್ದರು! ಕಹಿ ಘಟನೆ ಬಿಚ್ಚಿಟ್ಟ ಆರ್​. ಅಶ್ವಿನ್​

ನವದೆಹಲಿ: ಟೀಮ್​ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯಾವುದೇ ವಿಷಯದ ಬಗ್ಗೆ ನೇರವಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಾರೆ. ಯಾರಿಗೂ ಹೆದರದೆ ತನಗೆ ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಆದ್ದರಿಂದಲೇ ಅವರ ಬೌಲಿಂಗ್ ಮತ್ತು ಬ್ಯಾಟಿಂಗ್ ಜತೆಗೆ ಅವರ ನಡೆ, ನುಡಿಗೂ ಹಲವರು ಫಿದಾ ಆಗಿದ್ದಾರೆ. ಇಂತಹ ಅಶ್ವಿನ್ ಈ ಹಿಂದೆ ಬಾಲಕನಾಗಿದ್ದಾಗ ಅನುಭವಿಸಿದ ಕಹಿ ಘಟನೆಯನ್ನು ಇತ್ತೀಚೆಗೆ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ. ಆಗ ನನಗೆ ಸುಮಾರು 14 ಅಥವಾ 15 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ನಾನು ಟೆನಿಸ್ ಬಾಲ್​ನಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಆದರೆ, ಟೆನಿಸ್ ಬಾಲ್‌ಗಳಲ್ಲಿ ಕ್ರಿಕೆಟ್ ಆಡುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ಅಲ್ಲದೆ ರಸ್ತೆಯಲ್ಲೂ ಕ್ರಿಕೆಟ್​ ಆಡುವಂತಿರಲಿಲ್ಲ.

ನನ್ನ ತಂದೆ ಮಾತಿಗೂ ಕ್ಯಾರೆ ಎನ್ನದೆ ನನ್ನ ಸ್ನೇಹಿತರೊಂದಿಗೆ ಟೆನಿಸ್ ಬಾಲ್‌ ಕ್ರಿಕೆಟ್ ಆಡುತ್ತಿದ್ದೆ. ಒಂದು ದಿನ ನಮ್ಮ ತಂಡ ಫೈನಲ್‌ಗೆ ತಲುಪಿತು. ಆಗ ಎದುರಾಳಿ ತಂಡದ ಆಟಗಾರರು ನಮ್ಮ ತಂಡವನ್ನು ಸೋಲಿಸಬೇಕು ಎಂಬ ಕಾರಣಕ್ಕೆ ಆಡಲು ಬರದಂತೆ ಬೆದರಿಕೆ ಹಾಕಿದ್ದರು. ಅಲ್ಲದೆ, ನಾನು ಫೈನಲ್‌ನಲ್ಲಿ ಆಡಿದರೆ ನನ್ನ ಕೈಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದರು. ಆ ದಿನ ನನಗೆ ಇನ್ನೂ ನೆನಪಿದೆ.

ಅಂದು ಬೆಳಗ್ಗೆ ಇಬ್ಬರು ಬೈಕ್​ನಲ್ಲಿ ನಮ್ಮ ಮನೆಗೆ ಬಂದಿದ್ದರು. ಕ್ರಿಕೆಟ್​ ಆಡಲೆಂದು ನನ್ನನ್ನು ಕರೆದೊಯ್ದರು. ಅವರ ಜೊತೆ ನಾನೂ ಕೂಡ ಹೋಗಿದ್ದೆ. ಇದ್ದಕ್ಕಿದ್ದಂತೆ ಅಂಗಡಿಯೊಂದರಲ್ಲಿ ಗಾಡಿ ನಿಲ್ಲಿಸಿ ಇಡ್ಲಿ-ವಡ ಎಲ್ಲವನ್ನು ಕೊಂಡುಕೊಂಡರು. ನಾನೂ ಅದನೆಲ್ಲ ತಿಂದು ಪಂದ್ಯಕ್ಕೆ ಸಮಯವಾಗಿದೆ ಎಂದು ಹೇಳಿದೆ. ಆದರೆ, ನೀನು ಆಟವಾಡಲು ಹೋಗಬೇಡ ಎಂದು ನನ್ನನ್ನು ಬೆದರಿಸಿ ಅಲ್ಲೇ ಇರುವಂತೆ ಮಾಡಿದರು. ಆಮೇಲೆ ನಾನು ಮನೆಗೆ ಹೋದೆ. ಮೊದಮೊದಲು ನಾನು ಇದಕ್ಕೆ ಹೆದರಿ ಅಪ್ಪನಿಗೆ ಹೇಳಲಿಲ್ಲ. ಆದರೆ, ಅವರು ಪದೇ ಪದೇ ಕೇಳಿದರು, ಕೊನೆಗೆ ನಾನು ಸತ್ಯವನ್ನು ಹೇಳಿದೆ. ಇದು ಎಂದಿಗೂ ಮರೆಯಲಾಗದ ಘಟನೆ ಎಂದು ಅಶ್ವಿನ್ ಹೇಳಿದರು. (ಏಜೆನ್ಸೀಸ್​)