

ನವದೆಹಲಿ: ಎಲ್ಲರ ಕಣ್ಣುಗಳು ಐಪಿಎಲ್ 2025ರ ಮೇಲಿದೆ. ಐಪಿಎಲ್ ಮೆಗಾ ಹರಾಜು ಮತ್ತು ಟೂರ್ನಿ ಆರಂಭಕ್ಕೆ ಇನ್ನೂ ಸಮಯವಿದ್ದರೂ ಫ್ರಾಂಚೈಸಿಗಳು ಈಗಾಗಲೇ ತಮ್ಮ ತಂತ್ರಗಾರಿಕೆಯನ್ನು ಚುರುಕುಗೊಳಿಸುತ್ತಿವೆ. ಯಾರನ್ನು ಉಳಿಸಿಕೊಳ್ಳಬೇಕು? ತಂಡದಿಂದ ಯಾರನ್ನು ತೆಗೆದುಹಾಕಬೇಕು? ಎಂಬ ವಿಷಯಗಳ ಬಗ್ಗೆ ಕಸರತ್ತು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾಡಿರುವ ಕಾಮೆಂಟ್ಗಳು ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಆರ್ಸಿಬಿ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುವುದಿಲ್ಲ. ಏಕೆಂದರೆ ಪ್ರಸ್ತುತ ಅವರ ವಯಸ್ಸು 40. ಫ್ರಾಂಚೈಸಿಗಳು ಆಟಗಾರರನ್ನು ಮುಂದಿನ ಮೂರು ವರ್ಷಗಳ ಕಾಲ ಇರಿಸಿಕೊಳ್ಳುವ ಉದ್ದೇಶದಿಂದ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುತ್ತವೆ. ಹೀಗಾಗಿ ಆರ್ಸಿಬಿ ಡುಪ್ಲೆಸಿಸ್ನನ್ನು ಕೈಬಿಡುವ ಸಾಧ್ಯತೆಗಳಿವೆ. ಅವರನ್ನು ಕೈಬಿಡುವುದು ಕೂಡ ಉತ್ತಮ ಎಂದರು.
ಇದಿಷ್ಟೇ ಅಲ್ಲದೆ, ಸ್ಪೋಟಕ ಆಟಗಾರ ಮ್ಯಾಕ್ಸ್ವೆಲ್ ಅವರನ್ನು ಕೈಬಿಡುವುದು ಉತ್ತಮ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಮ್ಯಾಕ್ಸ್ವೆಲ್ ಬದಲಿಗೆ ಯುವ ಆಲ್ ರೌಂಡರ್ ವಿಲ್ ಜಾಕ್ಸ್ ಅವರನ್ನು ಉಳಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಆರ್ಸಿಬಿ ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ಮೊಹಮ್ಮದ್ ಸಿರಾಜ್ ಮತ್ತು ರಜತ್ ಪಾಟಿದಾರ್ ಅವರನ್ನು ಉಳಿಸಿಕೊಳ್ಳಲಿದೆ. ಸಿರಾಜ್ ಟೀಮ್ ಇಂಡಿಯಾದ ಬೌಲರ್ ಆಗಿರುವುದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುವುದು. ಆದರೆ, ಉಳಿಸಿಕೊಳ್ಳುವುದು ಬಿಸಿಸಿಐ ಬಿಡುಗಡೆ ಮಾಡುವ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಳೆದ 17 ಸೀಸನ್ಗಳಲ್ಲಿ ಪ್ರಶಸ್ತಿ ಫೇವರಿಟ್ ಆಗಿ ಕಣಕ್ಕೆ ಇಳಿಯುತ್ತಿರುವ ಆರ್ಸಿಬಿ ಪ್ರತಿ ಬಾರಿಯೂ ತೀವ್ರ ನಿರಾಸೆಯನ್ನು ಎದುರಿಸುತ್ತಿದೆ. ತಂಡದಲ್ಲಿ ಹಲವು ಸ್ಟಾರ್ ಆಟಗಾರರಿದ್ದರೂ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದಿನ ಋತುವಿನಲ್ಲಾದರೂ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಮ್ಯಾನೇಜ್ಮೆಂಟ್ ಹೊಂದಿದೆ ಮತ್ತು ಅದಕ್ಕಾಗಿ ಈ ಮೆಗಾ ಹರಾಜಿನಲ್ಲಿ ಮೊದಲು ತಂಡವನ್ನು ಬಲಪಡಿಸಬೇಕು. ಅದಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರೊಂದಿಗೆ ತಂಡದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿರೀಕ್ಷೆ ಇದೆ. ಹೀಗಾಗಿ ಆಕಾಶ್ ಚೋಪ್ರಾ ಹೇಳಿದಂತೆ ಡುಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಅನ್ನು ಉಳಿಸಿಕೊಳ್ಳದಿರುವುದು ಉತ್ತಮವೇ? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಗಳ ರೂಪದಲ್ಲಿ ಹಂಚಿಕೊಳ್ಳಿ.