ನವದೆಹಲಿ: ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಮುರಿದ ಘಟನೆ ಅಂದರೆ 2023ರ ನವೆಂಬರ್ 19ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದ್ದು. ತವರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಮೋಘ ಆಟವಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಒಂದೇ ಒಂದು ಸೋಲು ಕಾಣದೆ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿತು. ಲೀಗ್ ಹಂತದಲ್ಲಿ ಮೊದಲ ಪಂದ್ಯದಲ್ಲಿ ಯಾವ ತಂಡವನ್ನು ಸೋಲಿಸಿ ವಿಶ್ವಕಪ್ ಬೇಟೆ ಆರಂಭಿಸಿತೋ ಅದೇ ತಂಡದೊಂದಿಗೆ ನವೆಂಬರ್ 19ರಂದು ನಡೆದ ಫೈನಲ್‌ನಲ್ಲಿ ಭಾರತ ಮುಗ್ಗರಿಸಿತು. ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯ ಸೋಲನ್ನು ಅನುಭವಿಸುವ ಮೂಲಕ ಅಸಂಖ್ಯಾತ ಭಾರತೀಯ ಕನಸನ್ನು ನುಚ್ಚು ನೂರು ಮಾಡಿತು. ಇದೀಗ ಫೈನಲ್‌ನಲ್ಲಿ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಅಂಶದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂಚಲನಾತ್ಮಕ ಕಾಮೆಂಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮಾಡುವಾಗ 11ನೇ ಓವರ್ ಮತ್ತು 40ನೇ ಓವರ್ ನಡುವೆ ನಿರ್ಭೀತವಾಗಿ ಬ್ಯಾಟ್ ಬೀಸದೇ ಇರುವುದು ಸೋಲಿಗೆ ಪ್ರಮುಖ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ನಿಧಾನಗತಿ ಬ್ಯಾಟಿಂಗ್ ಮಾಡಿದರು ಎಂದು ಸೆಹ್ವಾಗ್ ಪರೋಕ್ಷವಾಗಿ ಟೀಕಿಸಿದರು. 2007 ಮತ್ತು 2011ರ ನಡುವೆ ನಾವು ಪ್ರತಿ ಪಂದ್ಯವನ್ನು ನಾಕೌಟ್ ಪಂದ್ಯವಾಗಿ ಆಡಿದೆವು. ಹೀಗಾಗಿಯೇ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದೆವು ಎಂದು ಸೆಹ್ವಾಗ್ ನಂಬಿದ್ದಾರೆ.
2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರ ಶುಭಮನ್ ಗಿಲ್ 7 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ರೋಹಿತ್ ಇಡೀ ಟೂರ್ನಿಯಲ್ಲಿ ಆಡಿದಂತೆ ಫೈನಲ್ನಲ್ಲೂ ಆಕ್ರಮಣಕಾರಿಯಾಗಿ ಆಡಲು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್ 47 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ ಔಟಾದರು.
ಇದಾದ ಬಳಿಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಅನುಕ್ರಮದಲ್ಲಿ ಕೊಹ್ಲಿ ಮತ್ತು ರಾಹುಲ್ ಸ್ವಲ್ಪ ನಿಧಾನವಾಗಿ ಆಡಿದರು. ಕೊಹ್ಲಿ 63 ಎಸೆತಗಳಲ್ಲಿ 54 ರನ್ ಮತ್ತು ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರು. ಮಧ್ಯಮ ಓವರ್‌ಗಳಲ್ಲಿ ಅತ್ಯಂತ ನಿಧಾನವಾಗಿ ಬ್ಯಾಟ್ ಬೀಸಿದ ಕೊಹ್ಲಿ-ರಾಹುಲ್ ಜೋಡಿ ಇನ್ನಿಂಗ್ಸ್ಗೆ ವೇಗ ನೀಡುವ ಸಮಯಕ್ಕೆ ಸರಿಯಾಗಿ ಔಟಾದರು. ಇದಾದ ನಂತರ ಜಡೇಜಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ವಿಫಲರಾದರು. ಇದರಿಂದಾಗಿ ಟೀಂ ಇಂಡಿಯಾ ಕೇವಲ 240 ರನ್ ಗಳಿಸಿತು.
ಟೀಮ್ ಇಂಡಿಯಾದ ನೀಡಿದ ಈ ಗುರಿಯನ್ನು ಕೇವಲ 43 ಓವರ್‌ಗಳಲ್ಲಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಭಾರತದ ಆಸೆಯನ್ನು ಹುಸಿಗೊಳಿಸಿತು. (ಏಜೆನ್ಸೀಸ್)