

ಹೈದರಾಬಾದ್: ನಿನ್ನೆ (ಮೇ 08) ನಡೆದ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಮತ್ತು ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಪಂದ್ಯದ ವೇಳೆ ಆಘಾತಕಾರಿ ಘಟನೆಯೊಂದು ನಡೆಯಿತು. ಪಂದ್ಯದ ಬಳಿಕ ಎಲ್ಎಸ್ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಲಖನೌ ನಾಯಕ ಕೆ.ಎಲ್.ರಾಹುಲ್ ಜೊತೆ ಅಸಭ್ಯವಾಗಿ ವರ್ತಿಸಿ ವಿವಾದಕ್ಕೀಡಾಗಿದ್ದಾರೆ. ಪಂದ್ಯ ಮುಗಿದ ನಂತರ ಲಖನೌ ಮಾಲೀಕರು ಮೈದಾನದಲ್ಲೇ ರಾಹುಲ್ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ ಘಟನೆಗೆ ಕ್ರಿಕೆಟ್ ಅಭಿಮಾನಿಗಳು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರನೊಂದಿಗೆ ಈ ರೀತಿ ವರ್ತಿಸುವ ತಂಡದ ಮಾಲೀಕರ ನಡೆ ಸರಿಯಿಲ್ಲ ಎಂದು ಕಿಡಿಕಾರಿದ್ದಾರೆ. ತಂಡದಲ್ಲಿ ಏನೇ ಲೋಪಗಳಿದ್ದರೂ ಅದನ್ನು ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಬೇಕೆ ಹೊರತು, ಮೈದಾನದಲ್ಲಿ ನೂರಾರು ಕ್ಯಾಮರಾಗಳ ಮುಂದೆ ಚೀಪ್ ಆಗಿ ವರ್ತಿಸಬಾರದು ಎಂದು ಕ್ರೀಡಾಭಿಮಾನಿಗಳು ಸಂಜೀವ್ ಗೋಯೆಂಕಾ ಅವರಿಗೆ ಬುದ್ಧಿಮಾತು ಹೇಳುತ್ತಿದ್ದಾರೆ. ಕ್ಯಾಶ್ ರಿಚ್ ಲೀಗ್ ಐಪಿಎಲ್ನಿಂದ ಆಟಗಾರರು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೂಡ ವ್ಯಕ್ತವಾಗುತ್ತಿದೆ.
ಇದು ಕೆ.ಎಲ್. ರಾಹುಲ್ ವಿಚಾರದಲ್ಲಿ ಮಾತ್ರವಲ್ಲ ಟೀಂ ಇಂಡಿಯಾದ ಹಲವು ಆಟಗಾರರು ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕ್ರಿಕೆಟಿಗರು ಹಣಕ್ಕಾಗಿ ಮಾತ್ರ ಐಪಿಎಲ್ ಆಡುತ್ತಾರೆ ಎಂಬುದು ಗೊತ್ತಿದೆ. ಐಪಿಎಲ್‌ನೊಂದಿಗೆ ಹೊಸದನ್ನು ಸಾಬೀತುಪಡಿಸುವ ಅಗತ್ಯವಿಲ್ಲ, ಐಪಿಎಲ್ ಪ್ರದರ್ಶನವು ಅವರ ಪ್ರತಿಭೆಯ ಅಳತೆಗೋಲಲ್ಲ. ಐಪಿಎಲ್ ನಡೆಯುತ್ತಿರುವುದು ಕೇವಲ ಹಣಕ್ಕಾಗಿ ಮಾತ್ರ. ಆಟಗಾರರ ಮೇಲೆ ನೂರಾರು ಕೋಟಿ ಹೂಡಿಕೆ ಮಾಡಿರುವ ಸಂಜೀವ್ ಗೋಯೆಂಕಾ ಅವರಂತಹ ಉದ್ಯಮಿಗಳು ಇದನ್ನು ಕೇವಲ ವ್ಯವಹಾರವಾಗಿ ನೋಡುತ್ತಿದ್ದಾರೆ. ಇದರಲ್ಲಿ ಕ್ರಿಕೆಟ್ ಹೊರತಾಗಿ ಅವರ ಹಣ, ವೈಯಕ್ತಿಕ ಹೆಸರು, ಪ್ರತಿಷ್ಠೆಯನ್ನು ಮಾತ್ರ ನೋಡಲಾಗುತ್ತಿದೆ. ಪಂದ್ಯ ಗೆದ್ದರೆ ಕೀರ್ತಿ ಹೆಚ್ಚುತ್ತದೆ, ಸೋತರೆ ಮಾನ ಹೋದಂತೆ ವರ್ತಿಸುತ್ತಿದ್ದಾರೆ. ಹಾಗಾಗಿಯೇ ಇಂತಹ ಘಟನೆಗಳು ಐಪಿಎಲ್ನಲ್ಲಿ ಮರುಕಳಿಸುತ್ತಿವೆ.
ಇದೇ ಆಟಗಾರರು ಟೀಮ್ ಇಂಡಿಯಾ ಪರ ಆಡಿದಾಗಲೂ ಕೆಲವೊಮ್ಮೆ ಟೀಕೆಗಳು ಎದುರಾಗುತ್ತವೆ. ಅಭಿಮಾನಿಗಳು ಅವರನ್ನು ಅವಮಾನಿಸುತ್ತಾ ಅವರ ಚಿತ್ರಗಳನ್ನು ಸುಡುತ್ತಾರೆ. ಅದರಲ್ಲಿ ವೈಯಕ್ತಿಕ ಪ್ರತಿಷ್ಠೆ, ವೈಯಕ್ತಿಕ ದ್ವೇಷಕ್ಕಿಂತ ದೇಶ ಪ್ರೇಮವಿದೆ. ಆದರೆ, ಐಪಿಎಲ್ ಎಂಟರ್ಟೈನ್ಮೆಂಟ್ ಲೀಗ್, ಫ್ರಾಂಚೈಸಿ ಕ್ರಿಕೆಟ್ ಆಗಿದೆ. ಈ ರೀತಿಯ ಲೀಗ್ನಲ್ಲಿ ಆಟಗಾರರು ಕ್ರಿಕೆಟ್ ಗಂಧ ಗಾಳಿ ಗೊತ್ತಿಲ್ಲದ ಶ್ರೀಮಂತರ ಜೊತೆ ಮಾತನಾಡಬೇಕಿದೆ. ಕೇವಲ ಹಣದ ಜತೆ ಆಟವಾಡುತ್ತಿರುವುದರಿಂದಲೇ ಇದೆಲ್ಲ ಆಗುತ್ತಿದೆ ಎಂಬುದು ಕ್ರೀಡಾಭಿಮಾನಿಗಳ ಅಭಿಪ್ರಾಯವಾಗಿದೆ.
ಅದೇನೇ ಇರಲಿ ಟೀಮ್ ಇಂಡಿಯಾ ಪರ ಮಾತ್ರ ಆಡುತ್ತಾ ತಮ್ಮ ಸ್ಟಾರ್ ವ್ಯಾಲ್ಯೂನಿಂದ ಆಟಗಾರರು ಜಾಹಿರಾತು ಮುಂತಾದವುಗಳನ್ನು ಚೆನ್ನಾಗಿ ಗಳಿಸಬಹುದು. ಹೆಚ್ಚಿನ ಹಣಕ್ಕಾಗಿ ಐಪಿಎಲ್ ಆಡುವ ಮೂಲಕ ತಮ್ಮ ಮೌಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಭಾವಿಸುತ್ತಿದ್ದಾರೆ. (ಏಜೆನ್ಸೀಸ್)