ಕ್ರೀಡೆ

ಇಲ್ಲಿ ನಿಮ್ಮ ಇಷ್ಟಗಳು ನಡಿಯಲ್ಲ! ಪಾಕ್​ ಆಯ್ಕೆ ಸಮಿತಿ ವಿರುದ್ಧ ವಾಸಿಮ್​ ಆಕ್ರಮ್​ ಕೆಂಡಾಮಂಡಲ | Champions Trophy

Champions Trophy: ಆತಿಥೇಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಶುಭಾರಂಭ ಪಂದ್ಯದಲ್ಲೇ ಪಾಕಿಸ್ತಾನ ಅಶುಭ ಕಂಡಿತು. ಇದೇ ಈಗ ಪಾಕ್​ನ ಮಾಜಿ ಕ್ರಿಕೆಟಿಗರ ಟೀಕೆ, ವ್ಯಂಗ್ಯಗಳಿಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಅಖಾಡಕ್ಕಿಳಿದ ಪಾಕಿಸ್ತಾನ, 60 ರನ್​ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು.

ಮೊಹಮ್ಮದ್​ ರಿಜ್ವಾನ್​ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಅಖಾಡಕ್ಕಿಳಿದ ಪಾಕಿಸ್ತಾನ ತಂಡ, ಮೊದಲ ಪಂದ್ಯದಲ್ಲೇ ಇಂತಹ ಕಳಪೆ ಪ್ರದರ್ಶನ ತೋರಿದ್ದು, ಪಾಕ್ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಈ ಕುರಿತಂತೆ ಪಾಕ್​ನ ದಿಗ್ಗಜ ಆಟಗಾರ, ಹಿರಿಯ ಕ್ರಿಕೆಟಿಗ ವಾಸಿಮ್ ಅಕ್ರಂ ಮಾತನಾಡಿ, "2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ರಾಷ್ಟ್ರೀಯ ತಂಡಕ್ಕೆ ಪಕ್ಷಪಾತದ ಮೂಲಕ ಆಯ್ಕೆಯಾದವರು ಉನ್ನತ ಮಟ್ಟದಲ್ಲಿ ಆಡಲು ಸಾಧ್ಯವಿಲ್ಲ ಮತ್ತು ಇಲ್ಲಿ ಅವರು ಯಶಸ್ವಿಯಾಗುವುದಿಲ್ಲ" ಎಂದು ಒತ್ತಿ ಹೇಳಿದರು.

"ಪ್ರಾಮಾಣಿಕವಾಗಿ ಹೇಳುವುದಾದರೆ, ಇವರು ನಮ್ಮ ದೇಶದವರು, ನಮ್ಮ ತಂಡದ ಆಟಗಾರರು, ಅವರನ್ನು ಟೀಕಿಸಬಾರದು ಎಂದೆನಿಸುತ್ತದೆ. ಆದರೆ, ವಾಸ್ತವ ನೋಡಿ ಮಾತನಾಡುವುದಾದರೆ, ನಮ್ಮಲ್ಲಿರುವ ಉನ್ನತ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದು ಬಿಟ್ಟು, ಜನರು ಹೇಳುವಂತೆ ಒಲವಿನ ಆಯ್ಕೆ ಸರಿಯಲ್ಲ. ಈ ಮಟ್ಟದಲ್ಲಿ, ಅದು ಕೆಲಸ ಮಾಡೋದಿಲ್ಲ" ಎಂದು ಪಾಕಿಸ್ತಾನ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ 64 ರನ್​ ಬಾರಿಸಿದ ಬಾಬರ್ ಅಜಮ್​ ( 90 ಎಸೆತ) ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ. ಇದೊಂದು ಪಂದ್ಯದಲ್ಲಿ ಬಾಬರ್​ ಬ್ಯಾಟ್ ಮಾಡಿದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಸಿಡಿಮಿಡಿಗೊಂಡಿದ್ದಾರೆ. ಈ ರೀತಿ ಆಟವಾಡಿದ್ರೆ, ಭಾರತ ಅಲ್ಲ ಬಾಂಗ್ಲಾದೇಶ ವಿರುದ್ಧವೂ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಮಂದಗತಿಯ ಓವರ್ ಮಾಡಿದ್ದಕ್ಕಾಗಿ ಕ್ಯಾಪ್ಟನ್​ ರಿಜ್ವಾನ್​ ಮತ್ತು ತಂಡಕ್ಕೆ ಶೇ.5ರಷ್ಟು ದಂಡ ವಿಧಿಸಲಾಯಿತು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸದ ರಿಜ್ವಾನ್​ ನಿಯಮಕ್ಕೆ ತಲೆಬಾಗಿದರು,(ಏಜೆನ್ಸೀಸ್).