ಕ್ರೀಡೆ

ನಿವೃತ್ತಿ ನಂತ್ರ ಧೋನಿ ಪ್ಲ್ಯಾನ್​ ಏನು? ಕುಟುಂಬಕ್ಕಿಂತ ಮಾಹಿಯ ಮೊದಲ ಆದ್ಯತೆ ಕೇಳಿ ಸಲಾಂ​ ಎಂದ ನೆಟ್ಟಿಗರು

ನವದೆಹಲಿ: ಮುಂಬರುವ ಐಪಿಎಲ್​ ಸೀಸನ್​ನಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹಾಲಿ ನಾಯಕ ಎಂ.ಎಸ್​. ಧೋನಿ ಅವರ ಆಟದ ವೈಖರಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕ್ರಿಕೆಟ್​ ಜಗತ್ತಿನ ಅತ್ಯುತ್ತಮ ನಾಯಕ ಎನಿಸಿಕೊಂಡಿರುವ ಧೋನಿ, ಟೀಮ್​ ಇಂಡಿಯಾಗೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದಲ್ಲದೆ, ಐಪಿಎಲ್​ನಲ್ಲೂ ತಮ್ಮ ನಾಯಕತ್ವ ಕೌಶಲದಿಂದ 2010, 2011, 2018, 2021 ಮತ್ತು 2023ರಲ್ಲಿ ಒಟ್ಟು ಐದು ಬಾರಿ ಟ್ರೋಫಿ ಜಯಿಸಿದ್ದಾರೆ.

ಧೋನಿ ಈ ಬಾರಿ ಐಪಿಎಲ್​ ಆಡ್ತಾರಾ ಎಂಬ ಅನುಮಾನಗಳು ಕೂಡ ಕಾಡಿದ್ದವು. ಆದರೆ, ಈ ಬಾರಿಯೂ ಸಿಎಸ್​ಕೆ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಇದರ ನಡುವೆ ಧೋನಿ ಅವರ ನಿವೃತ್ತಿಯ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಸ್ವತಃ ಧೋನಿ ಅವರು ಮಾತನಾಡಿರುವ ಹಳೆಯ ವಿಡಿಯೋ ಒಂದು ಇದೀಗ ಮತ್ತೆ ವೈರಲ್​ ಆಗುತ್ತಿದೆ.

ನಾನು ನಿವೃತ್ತಿ ಹೊಂದುಲು ಇದು ಉತ್ತಮ ಸಮಯವಾಗಿದೆ. ಆದರೆ ಇಷ್ಟು ವರ್ಷ ನಾನು ಎಲ್ಲೇ ಇದ್ದರೂ ಮತ್ತು ಹೋದರು ನನಗೆ ತೋರಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಪ್ರತಿಯಾಗಿ ತುಂಬಾ ಧನ್ಯವಾದಗಳು ಎಂದು ಹೇಳುವುದು ತುಂಬಾ ಸುಲಭ. ಆದರೆ, ನನಗೆ ಕಠಿಣವಾದ ಸಂಗತಿ ಏನೆಂದರೆ, ಇನ್ನೂ ಒಂಬತ್ತು ತಿಂಗಳು ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಹಿಂತಿರುಗಿ ಐಪಿಎಲ್‌ನ ಕನಿಷ್ಠ ಇನ್ನೊಂದು ಸೀಸನ್​ ಆಡುವುದು. ಆದರೆ, ಎಲ್ಲವೂ ನಮ್ಮ ದೇಹವನ್ನು ಅವಲಂಬಿಸಿರುತ್ತದೆ. ನನಗೆ ನಿರ್ಧರಿಸಲು ಇನ್ನೂ 6 ರಿಂದ 7 ತಿಂಗಳುಗಳಿವೆ. ಆದರೆ, ನಾನು ಐಪಿಎಲ್​ ಆಡುವುದು ನನ್ನ ಕಡೆಯಿಂದ ನಾನು ನೀಡುವ ಉಡುಗೊರೆಯಾಗಿದೆ. ಆದರೆ, ಇದು ನನಗೆ ಸುಲಭವಲ್ಲ. ಆದರೆ, ಜನರು ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿದ ರೀತಿ, ನಾನು ಅವರಿಗಾಗಿ ಮಾಡಬೇಕಾದ ಕೆಲಸವಿದು ಎಂದು ಭಾವಿಸುತ್ತೇನೆ ಎಂದು ಕಳೆದ ಸೀಸನ್​ ಅಂತಿಮ ಕ್ಷಣದಲ್ಲಿ ಅಭಿಮಾನಿಯೊಬ್ಬ ಧೋನಿ ಬಳಿ ನಿವೃತ್ತಿಯ ಯೋಜನೆ ಬಗ್ಗೆ ಕೇಳಿದ ಪ್ರಶ್ನಗೆ ಧೋನಿ ಉತ್ತರಿಸಿದ ಪರಿ ಇದಾಗಿದೆ.

17ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದ್ದು, ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದೇ ವಿಡಿಯೋದಲ್ಲಿ ಕ್ರಿಕೆಟ್​ ನಂತರದ ಮುಂದಿನ ಪ್ಲ್ಯಾನ್​ ಏನು ಎಂದು ಧೋನಿ ಅವರನ್ನು ಪ್ರಶ್ನಿಸಲಾಗಿದೆ. ಎಂದಿನಂತೆಯೇ ಧೋನಿ ಆಸಕ್ತಿಕರ ಉತ್ತರ ನೀಡಿದ್ದಾರೆ. ಮುಂದಿನ ಜೀವನದ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ. ಸದ್ಯ ನಾನು ಕ್ರಿಕೆಟ್​ ಆಡುತ್ತಿದ್ದೇನೆ. ಐಪಿಎಲ್​ನಲ್ಲಿ ನಾನು ಈಗಲೂ ಆಡುತ್ತಿದ್ದೇನೆ. ಕ್ರಿಕೆಟ್ ನಂತರ ನಾನು ಏನು ಮಾಡುತ್ತೇನೆ ಎಂದು ನೋಡಲು ನನಗೆ ತುಂಬಾ ಆಸಕ್ತಿದಾಯಕವಾಗಿದೆ. ನಾನು ಖಚಿತವಾಗಿ ಭಾವಿಸುವುದೇನೆಂದರೆ, ನಿವೃತ್ತಿಯ ನಂತರ ಸೈನ್ಯದೊಂದಿಗೆ ಸ್ವಲ್ಪ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತೇನೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಸೈನ್ಯದೊಂದಿಗೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು. ಧೋನಿಯ ಈ ಮಾತು ಕೇಳಿ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ.

2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ​ ಅವರ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಅವರ 7ನೇ ನಂಬರಿನ ಜರ್ಸಿಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಬಿಸಿಸಿಐ, ಧೋನಿ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಿದೆ. ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ಕ್ರೀಡಾ ಜಗತ್ತಿನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್​ ಲೋಕದ ಅಪ್ರತಿಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಮತ್ತು 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯಂತಹ ಎಲ್ಲ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ತಂಡದ ಪರ 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಮತ್ತು 73 ಅರ್ಧ ಶತಕಗಳೊಂದಿಗೆ 50.57 ರನ್ ಸರಾಸರಿಯಲ್ಲಿ ಒಟ್ಟು 10,773 ರನ್​ ಕಲೆಹಾಕಿದ್ದಾರೆ. ಟಿ20 ಪಂದ್ಯಗಳ ವಿಚಾರಕ್ಕೆ ಬಂದರೆ, ಒಟ್ಟು 98 ಪಂದ್ಯಗಳನ್ನು ಆಡಿರುವ ಧೋನಿ, 37.60 ಸರಾಸರಿಯೊಂದಿಗೆ 126.13 ಸ್ಟ್ರೈಕ್​ರೇಟ್​ನಲ್ಲಿ 1617 ರನ್ ಗಳಿಸಿದ್ದಾರೆ. ಟೆಸ್ಟ್​ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೋನಿ, 97 ಪಂದ್ಯಗಳಲ್ಲಿ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ 4876 ರನ್​ ಕಲೆಹಾಕಿದ್ದಾರೆ.

ವಿಕೆಟ್​ಕೀಪರ್​ ಆಗಿ ತಮ್ಮ ವೃತ್ತಿಬದುಕಿನಲ್ಲಿ​ ಧೋನಿ ಅವರು ಅತ್ಯದ್ಭುತ ಕೌಶಲಗಳನ್ನು ತೋರಿದ್ದಾರೆ. ತಮ್ಮ ಚಾಕಚಕ್ಯತೆಯಿಂದ ಅನೇಕ ಪಂದ್ಯಗಳಲ್ಲಿ ಸ್ಪಂಪೌಟ್​ ಹಾಗೂ ರನೌಟ್​ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್​ ಕೀಪರ್​ಗಳ ಸಾಲಿನಲ್ಲಿ ಧೋನಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಒಟ್ಟು 294 ಬಾರಿ ವಿಕೆಟ್​ಗಳನ್ನು ತೆಗೆದಿದ್ದಾರೆ. (ಏಜೆನ್ಸೀಸ್​)