ಕ್ರೀಡೆ

ರಣಜಿಯಲ್ಲಿ ತನ್ನ ವಿಕೆಟ್​ ಕಿತ್ತ ಬೌಲರ್​ಗೆ ಕೊಹ್ಲಿ ಹೇಳಿದ್ದೇನು ಗೊತ್ತಾ? ಮತ್ತೊಮ್ಮೆ ಫ್ಯಾನ್ಸ್​ ಮನಸ್ಸು ಗೆದ್ದ ವಿರಾಟ್​! Virat Kohli

Virat Kohli : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 12 ವರ್ಷಗಳ ನಂತರ ರಣಜಿ ಅಖಾಡಕ್ಕೆ ಇಳಿದಿದ್ದು ಗೊತ್ತೇ ಇದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ದೆಹಲಿ ಪರ ಆಡಿದರು. ಅವರನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಆದರೆ, ಕಿಂಗ್ ಕೊಹ್ಲಿ ಮಾತ್ರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಏಕೆಂದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಗಳಿಸಿ ಔಟಾದರು.

ರೈಲ್ವೇಸ್ ತಂಡದ ಬೌಲರ್ ಹಿಮಾಂಶು ಸಾಂಗ್ವಾನ್ ಅವರು ತಮ್ಮ ಅದ್ಭುತ ಎಸೆತದೊಂದಿಗೆ ವಿರಾಟ್​ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ವೇಳೆ ಇಡೀ ಕ್ರೀಡಾಂಗಣ ಮೌನವಾಯಿತು. ವಿಶ್ವದ ನಂಬರ್​ ಒನ್​ ಕ್ರಿಕೆಟಿಗ ಕೊಹ್ಲಿಯನ್ನು ಔಟ್​​ ಮಾಡಿದ ಖುಷಿಯಲ್ಲಿ ಸಾಂಗ್ವಾನ್​ ಕೂಡ ಸಂಭ್ರಮಿಸಿದರು. ಇತ್ತ ಕೊಹ್ಲಿ ಔಟಾದ ಕೂಡಲೇ ಅಭಿಮಾನಿಗಳು ಕ್ರೀಡಾಂಗಣವನ್ನು ತೊರೆದರು. ಈ ಪಂದ್ಯದ ನಂತರ ಕಿಂಗ್ ಕೊಹ್ಲಿ, ಸಾಂಗ್ವಾನ್​ ಅವರನ್ನು ಹೊಗಳಿದ್ದಾರೆ ಎಂದು ತಿಳಿದುಬಂದಿದೆ.

ದೈನಿಕ್ ಜಾಗರಣ್ ವರದಿಯ ಪ್ರಕಾರ, ಸಾಂಗ್ವಾನ್ ಅವರು ಕೊಹ್ಲಿ ಬಳಿಗೆ ಹೋಗಿ ಅವರು ವಿಕೆಟ್ ಪಡೆದ ಚೆಂಡಿಗೆ ಸಹಿ ಹಾಕುವಂತೆ ಕೇಳಿಕೊಂಡರು. ಈ ವೇಳೆ ಕೊಹ್ಲಿ ಅವರನ್ನು ಹೊಗಳಿದ್ದಾರೆ. ಎಂತಹ ಚೆಂಡು ಇದು... ನೀವು ಅದ್ಭುತವಾಗಿ ಚೆಂಡು ಎಸೆದಿದ್ದೀರಿ ಎಂದು ಸಾಂಗ್ವಾನ್​ ಅವರನ್ನು ಹೊಗಳಿದ್ದಾರೆಂದು ದೈನಿಕ್​ ಜಾಗರಣ್​ ಪತ್ರಿಕೆ ತನ್ನ ಲೇಖನದಲ್ಲಿ ತಿಳಿಸಿದೆ.

ಪಂದ್ಯದ ಮೂರನೇ ದಿನದಂದು, ಮೂವರು ಅಭಿಮಾನಿಗಳು ಭದ್ರತಾ ವ್ಯವಸ್ಥೆಯನ್ನು ಭೇದಿಸಿ ವಿರಾಟ್‌ಗಾಗಿ ಮೈದಾನಕ್ಕೆ ಓಡಿಬಂದು ಸ್ವಲ್ಪ ಗೊಂದಲ ಸೃಷ್ಟಿಸಿದರು. ಇದೇ ಪಂದ್ಯದ ಮೊದಲ ದಿನದಂದು, ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕೊಹ್ಲಿ ಬಳಿಗೆ ಬಂದ ಅಭಿಮಾನಿಯೊಬ್ಬರು ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದರು. ಶನಿವಾರ, ಮೂವರು ಅಭಿಮಾನಿಗಳು ಭದ್ರತಾ ಸಿಬ್ಬಂದಿಯನ್ನು ದಾಟಿ ಮೈದಾನಕ್ಕೆ ನುಗ್ಗಿದರು. ಪರಿಣಾಮವಾಗಿ, ಭದ್ರತಾ ಸಿಬ್ಬಂದಿ ಅವರನ್ನು ಬಲವಂತವಾಗಿ ಹೊರಗೆ ಕರೆದೊಯ್ದರು.

ಇಂತಹ ಘಟನೆಗಳನ್ನು ನಾನು ಇದುವರೆಗೆ ನೋಡಿಲ್ಲ. ಇದು ಕೊಹ್ಲಿಯ ಕ್ರೇಜ್​ಗೆ ಸಾಕ್ಷಿಯಾಗಿದೆ. ಇನ್ನು ಮೈದಾನಕ್ಕೆ ಬರುವ ಯಾರನ್ನೂ ಹೊಡೆಯಬೇಡಿ ಎಂದು ಕೊಹ್ಲಿ ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ ಎಂದು ದೆಹಲಿ ಸ್ಪಿನ್ನರ್ ಶಿವಂ ಶರ್ಮಾ ಹೇಳಿದರು. ಪಂದ್ಯದ ನಂತರ, ಕೊಹ್ಲಿ ತಮ್ಮ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ ಮತ್ತು ಮೈದಾನದ ಸಿಬ್ಬಂದಿಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು.

ಅಂದಹಾಗೆ ಈ ಪಂದ್ಯದಲ್ಲಿ ದೆಹಲಿ ತಂಡ ದೊಡ್ಡ ಗೆಲುವು ದಾಖಲಿಸಿದ್ದು, ವಿರಾಟ್ ಕೊಹ್ಲಿಗೆ ಅವರ ತಂಡದ ಸದಸ್ಯರು ಗೆಲುವಿನ ಉಡುಗೊರೆಯನ್ನು ನೀಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿಗೆ ಬ್ಯಾಟಿಂಗ್ ಮಾಡುವ ಅವಕಾಶವೂ ಸಿಗದೆ ದೆಹಲಿ ತಂಡ ದೊಡ್ಡ ಗೆಲುವು ಸಾಧಿಸಿತು. ಎಲೈಟ್ ಗ್ರೂಪ್ 'ಡಿ' ಭಾಗವಾಗಿ ಮೂರು ದಿನಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ, ದೆಹಲಿ ತಂಡವು ರೈಲ್ವೇಸ್ ತಂಡವನ್ನು ಇನ್ನಿಂಗ್ಸ್ ಮತ್ತು 19 ರನ್‌ಗಳಿಂದ ಸೋಲಿಸಿತು. ಶನಿವಾರ 334/7 ಸ್ಕೋರ್‌ನೊಂದಿಗೆ ತನ್ನ ಮೊದಲ ಇನ್ನಿಂಗ್ಸ್ ಮುಂದುವರಿಸಿದ ದೆಹಲಿ ತಂಡ ಅಂತಿಮವಾಗಿ 106.4 ಓವರ್‌ಗಳಲ್ಲಿ 374 ರನ್‌ಗಳಿಗೆ ಆಲೌಟ್ ಆಯಿತು.

ಸುಮಿತ್ ಮಾಥುರ್ (206 ಎಸೆತಗಳಲ್ಲಿ 86 ರನ್​, 8 ಬೌಂಡರಿಗಳು) ಉತ್ತಮ ಪ್ರದರ್ಶನ ನೀಡಿದರು. ರೈಲ್ವೇಸ್ ಬೌಲರ್‌ಗಳಲ್ಲಿ ಹಿಮಾಂಶು ಸಂಗ್ವಾನ್ 4 ವಿಕೆಟ್ ಮತ್ತು ಕುನಾಲ್ ಮೂರು ವಿಕೆಟ್ ಪಡೆದರು. ಆ ನಂತರ, ಎರಡನೇ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡವು 30.5 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸೈಫ್ (31) ಅಗ್ರ ಸ್ಕೋರರ್ ಎನಿಸಿಕೊಂಡರು. ದೆಹಲಿ ಬೌಲರ್‌ಗಳಲ್ಲಿ ಶಿವಂ ಶರ್ಮಾ 5 ವಿಕೆಟ್‌ಗಳೊಂದಿಗೆ ಪ್ರಭಾವ ಬೀರಿದರು. ಇದಕ್ಕೂ ಮೊದಲು, ರೈಲ್ವೇಸ್ ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್ ಗಳಿಸಿತು. ಸರ್ವತೋಮುಖ ಪ್ರದರ್ಶನ ನೀಡಿದ ಸುಮಿತ್ ಮಾಥುರ್ ಅವರಿಗೆ 'ಪಂದ್ಯದ ಆಟಗಾರ' ಪ್ರಶಸ್ತಿ ನೀಡಲಾಯಿತು. (ಏಜೆನ್ಸೀಸ್​)