

Samantha : ಕೇರಳದಲ್ಲಿ ನಡೆದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಘಟನೆ ಸಂಬಂಧ ಈಗಾಗಲೇ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದು, ಇದೀಗ ಟಾಲಿವುಡ್ ಸ್ಟಾರ್ ನಟಿ ಸಮಂತಾ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಮಂತಾ ಒತ್ತಾಯಿಸಿದ್ದಾರೆ. ಅಲ್ಲದೆ, ಈ ಘಟನೆಯ ಬಗ್ಗೆ ತಿಳಿದಾಗ ನನಗೆ ನಿಜಕ್ಕೂ ಆಘಾತವಾಯಿತು ಎಂದಿದ್ದಾರೆ.
ನಾವು 2025ನೇ ಇಸವಿಯಲ್ಲಿದ್ದರೂ ದ್ವೇಷ ಮತ್ತು ವಿಷದಿಂದ ತುಂಬಿದ ಕೆಲವು ಜನರಿಂದಾಗಿ ಒಬ್ಬ ಹುಡುಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ಘಟನೆಯು ಬೆದರಿಸುವಿಕೆ ಮತ್ತು ರ್ಯಾಗಿಂಗ್ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ನಮ್ಮಲ್ಲಿ ಕಠಿಣ ರ್ಯಾಗಿಂಗ್ ಕಾನೂನುಗಳಿದ್ದರೂ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಆಘಾತಕಾರಿಯಾಗಿದೆ.
ರ್ಯಾಗಿಂಗ್ನಿಂದ ಅನೇಕ ವಿದ್ಯಾರ್ಥಿಗಳು ಕಿರುಕುಳ ಅನುಭವಿಸುತ್ತಿದ್ದಾರೆ. ಆದರೆ, ಅದರ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ದೂರು ನೀಡಿದರೆ, ಮುಂದೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿದ್ದಾರೆ. ನಾವಿಂದು ಎಲ್ಲಿ ವಿಫಲರಾಗುತ್ತಿದ್ದೇವೆ? ಈ ಘಟನೆಯ ಬಗ್ಗೆ ನಾವು ನಮ್ಮ ಸಂತಾಪ ವ್ಯಕ್ತಪಡಿಸುವುದಲ್ಲದೆ, ಕಠಿಣ ಕ್ರಮ ಕೈಗೊಳ್ಳಬೇಕೆಂತಲೂ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಮಂತಾ ಹೇಳಿದರು.
ಅಧಿಕಾರಿಗಳು ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಬೇಕೆಂದು ನಾನು ಬಯಸುತ್ತೇನೆ. ಸತ್ಯ ಹೊರಬರಲಿ ಎಂದು ಆಶಿಸುತ್ತೇನೆ. ಆ ವಿದ್ಯಾರ್ಥಿಗೆ ನ್ಯಾಯ ಸಿಗಬೇಕು ಹಾಗೂ ಈ ಘಟನೆಯ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಂತಾ ಹೇಳಿದರು.
ನೀವು ಇತರರಿಂದ ಬೆದರಿಕೆ, ಕಿರುಕುಳ ಅಥವಾ ಅವಮಾನಕರ ಕ್ರಮಗಳನ್ನು ಎದುರಿಸಿದರೆ, ನೀವು ಅದರ ವಿರುದ್ಧ ಮಾತನಾಡಬೇಕು. ಅಂತಹ ತೊಂದರೆಗಳನ್ನು ಎದುರಿಸುತ್ತಿರುವ ಸಂತ್ರಸ್ತರನ್ನು ಎಲ್ಲರು ಬೆಂಬಲಿಸಲು ನಾನು ಬಯಸುತ್ತೇನೆ. ಸಂತ್ರಸ್ತರ ಬೆಂಬಲಕ್ಕೆ ನಿಂತಾಗಲೇ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಸಮಂತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಸಮಂತಾರ ಇನ್ಸ್ಟಾಗ್ರಾಂ ಸ್ಟೋರಿಯ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೇಡಂ, ಅಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯಾವ ರೀತಿಯ ಶಿಕ್ಷೆ ನೀಡಬೇಕೆಂದರೆ ಮತ್ತೆ ರ್ಯಾಗಿಂಗ್ ಮಾಡಲು ಹೆದರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಜನವರಿ 15ರಂದು ಕೇರಳದಲ್ಲಿ ನಡೆದ ಈ ಘಟನೆ ರಾಜ್ಯದಲ್ಲಿ ಬಿಸಿ ಚರ್ಚೆಗೆ ನಾಂದಿ ಹಾಡಿತು. ಸಹ ವಿದ್ಯಾರ್ಥಿಗಳ ಕಿರುಕುಳ ಮತ್ತು ಅವಮಾನಕರ ಕ್ರಮಗಳನ್ನು ಸಹಿಸಲಾಗದೆ 15 ವರ್ಷದ ವಿದ್ಯಾರ್ಥಿಯೊಬ್ಬ ತಮ್ಮ ಫ್ಲಾಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡನು. ವಿದ್ಯಾರ್ಥಿಯ ತಾಯಿ ಇತ್ತೀಚೆಗೆ ತನ್ನ ಮಗ ಎದುರಿಸಿದ ಮುಜುಗರದ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. (ಏಜೆನ್ಸೀಸ್)