ಕ್ರೀಡೆ

ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ ಸ್ಥಾನ ತುಂಬುವವರು ಯಾರು? ಈ ಆಟಗಾರರಿಬ್ಬರ ನಡುವೆ ತೀವ್ರ ಪೈಪೋಟಿ​

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಕಪ್​ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರೋಹಿತ್ ಪಡೆ ಭರ್ಜರಿ ಗೆಲುವು ದಾಖಲಿತು. ಇದಾದ ಬಳಿಕ ಪ್ರತಿಕೂಲ ಹವಾಮಾನ ಕಾರಣದಿಂದ ಟೀಮ್​ ಇಂಡಿಯಾ 4 ದಿನ ಕೆರೆಬಿಯನ್​ ನಾಡಲ್ಲೇ ಸಿಕ್ಕಿಕೊಳ್ಳಬೇಕಾಯಿತು. ಅಂತಿಮವಾಗಿ ಟೀಮ್​ ಇಂಡಿಯಾ ಗುರುವಾರ (ಜುಲೈ 04) ಸ್ವದೇಶಕ್ಕೆ ಮರಳಿತು. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೌಜನ್ಯದಿಂದ ಭೇಟಿಯಾದ ಟೀಮ್​ ಇಂಡಿಯಾ, ಆನಂತರ ಮುಂಬೈಗೆ ತೆರಳಿ ಅಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಟೀಮ್​ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸನ್ಮಾನ ಸಹ ಮಾಡಿತು. ಇದೆಲ್ಲವೂ ಐತಿಹಾಸಿಕ ಕ್ಷಣ.

ಆದರೆ, ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಫೈನಲ್ ಮುಗಿದ ತಕ್ಷಣ ತಮ್ಮ ಅಂತರಾಷ್ಟ್ರೀಯ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿರುವುದು ಎಲ್ಲರಿಗೂ ತಿಳಿದಿದೆ. ಇದು ಅಭಿಮಾನಿಗಳ ಪಾಲಿಗೆ ದುಃಖದ ಸಂಗತಿ. ಕೊಹ್ಲಿ ಇಲ್ಲದ ಕಾರಣ ಟಿ20ಯಲ್ಲಿ ಕೊಹ್ಲಿ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಚರ್ಚೆ ಇದೀಗ ಶುರುವಾಗಿದೆ.

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಆಡಿದರು. ಈ ಹಿಂದೆ ಕೊಹ್ಲಿ ಹೆಚ್ಚಿನ ಪಂದ್ಯಗಳನ್ನು ಒನ್ ಡೌನ್‌ನಲ್ಲಿ ಆಡಿದ್ದರು. ಅಲ್ಲದೆ, ಒನ್ ಡೌನ್‌ನಲ್ಲಿ ಕೊಹ್ಲಿ ಸೂಪರ್ ಸಕ್ಸಸ್ ಆದರು. ಒಂದು ದಶಕಗಳ ಕಾಲ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಒನ್-ಡೌನ್ ಸ್ಥಾನವನ್ನು ವಿರಾಟ್ ಕೊಹ್ಲಿಗೆ ಅರ್ಪಿಸಲಾಗಿತ್ತು. ಆದರೆ, ಕೊಹ್ಲಿಯ ಆ ಜಾಗದಲ್ಲಿ ಆಡುವವರು ಇನ್ನೂ ಟೀಮ್​ ಇಂಡಿಯಾಕ್ಕೆ ಬಂದಿಲ್ಲ. ಆ ಜಾಗದಲ್ಲಿ ಕೊಹ್ಲಿ ತೋರಿದ ಪ್ರಭಾವವೇ ಅಂಥದ್ದು. ಅದೇನೇ ಇರಲಿ ಇದೀಗ ಕೊಹ್ಲಿ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಟಿ20ಯಲ್ಲಿ ಒನ್ ಡೌನ್ ಆಟಗಾರ ಯಾರು ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆ ಸ್ಥಾನಕ್ಕಾಗಿ ಒಂದೆರಡು ಸ್ಟಾರ್ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ.

ವಿಶ್ವ ನಂ.1 ಟಿ20 ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಕೂಡ ವಿರಾಟ್ ಕೊಹ್ಲಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಕೊಹ್ಲಿ ಜೊತೆಗೆ ರೋಹಿತ್ ಶರ್ಮ ಮತ್ತು ಜಡೇಜಾ ನಿವೃತ್ತಿ ಘೋಷಿಸಿದ್ದರಿಂದ ಪ್ರಸ್ತುತ ತಂಡದಲ್ಲಿ ಮೂರು ಸ್ಥಾನಗಳು ಖಾಲಿಯಾಗಿವೆ. ಇದುವರೆಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಸೂರ್ಯ ಈಗ ಒನ್ ಡೌನ್​ನಲ್ಲಿ ಆಡಬಹುದು. ಒಂದು ವೇಳೆ ಸಂಜು ಸ್ಯಾಮ್ಸನ್ ಒನ್ ಡೌನ್ ನಲ್ಲಿ ಆಡಿದರೆ ಸೂರ್ಯ ಅದೇ ನಾಲ್ಕನೇ ಸ್ಥಾನಕ್ಕೆ ಸೀಮಿತವಾಗಬಹುದು. ಇವರಿಬ್ಬರ ಹೊರತಾಗಿ ಟಿ20 ವಿಶ್ವಕಪ್‌ನಲ್ಲಿ ಒನ್‌ ಡೌನ್‌ ಆಡಿದ ರಿಷಬ್‌ ಪಂತ್‌ಗೂ ಅವಕಾಶವಿದೆ. ಆದರೆ, ಪಂತ್‌ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾರು ಆ ಸ್ಥಾನವನ್ನು ತುಂಬಲಿದ್ದಾರೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. (ಏಜೆನ್ಸೀಸ್​)