ನವದೆಹಲಿ: ಟಿ20 ವಿಶ್ವಕಪ್-2024 ಆರಂಭವಾಗಲು ಇನ್ನು ಎರಡು ದಿನ ಬಾಕಿ ಇದೆ. ಈ ಮೆಗಾ ಟೂರ್ನಮೆಂಟ್ ಅನ್ನು ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜನೆ ಮಾಡಿದೆ. ಜೂನ್ 2 ರಂದು ವಿಶ್ವಕಪ್ ಆರಂಭವಾಗಲಿದ್ದರೆ, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಎದುರಿಸಲಿದೆ.
ಭಾರತ ತಂಡ ಈಗಾಗಲೇ ನ್ಯೂಯಾರ್ಕ್ ತಲುಪಿದ್ದು, ಮೆಗಾ ಪಂದ್ಯಾವಳಿಗಾಗಿ ಕಠಿಣ ತಾಲೀಮು ನಡೆಸುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ 17ನೇ ಸೀಸನ್ನಲ್ಲಿ ಅತ್ಯಧಿಕ ರನ್ ಗಳಿಸಿ, ಆರೇಂಜ್ ಕ್ಯಾಂಪ್ ಗೆಲ್ಲುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿರುವ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೇಲೆ ಭಾರಿ ನಿರೀಕ್ಷೆಗಳಿವೆ. ವಿಶ್ವಕಪ್‌ನಲ್ಲೂ ವಿರಾಟ್ ಅಬ್ಬರಿಸಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ 2024ರ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ವಿಶ್ವಕಪ್ ಘಟನೆಗಳನ್ನು ನೆನಪಿಸಿಕೊಂಡರು. 2011ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಪಂದ್ಯವು ನನ್ನ ಮೊದಲ ಪಂದ್ಯವಾಗಿತ್ತು ಮತ್ತು ಆ ದಿನ ನಾನು ತುಂಬಾ ಹೆದರುತ್ತಿದ್ದೆ ಎಂದು ಹೇಳಿದರು. ಢಾಕಾ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ವಿಶ್ವಕಪ್ ಪಂದ್ಯವನ್ನು ಆಡಿದ್ದೇನೆ. ಆ ಸಮಯದಲ್ಲಿ ತುಂಬಾ ಭಯವಾಯಿತು. ಏಕೆಂದರೆ, ದ್ವಿಪಕ್ಷೀಯ ಸರಣಿಯಲ್ಲಿ ಆಡುವುದು ವಿಭಿನ್ನ ಮತ್ತು ವಿಶ್ವಕಪ್‌ನಲ್ಲಿ ಆಡುವುದು ಬೇರೆ ಎಂದು ವಿರಾಟ್ ಹೇಳಿದರು. ಇನ್ನು ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 83 ಎಸೆತಗಳಲ್ಲಿ ಶತಕ ಗಳಿಸಿದರು.
2011ರ ಏಕದಿನ ವಿಶ್ವಕಪ್‌ನಲ್ಲಿ ತಂಡದಲ್ಲಿದ್ದ ಅತ್ಯಂತ ಕಿರಿಯ ಕ್ರಿಕೆಟಿಗನಾಗಿದ್ದೆ. ಸಚಿನ್, ಸೆಹ್ವಾಗ್, ಜಹೀರ್, ಹರ್ಭಜನ್, ಧೋನಿ ಮತ್ತು ಗಂಭೀರ್ ಅವರಂತಹ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು ಅದ್ಭುತವಾಗಿತ್ತು. ಪಂದ್ಯದ ಹಿಂದಿನ ದಿನವೂ ನಾನು ತುಂಬಾ ನರ್ವಸ್ ಆಗಿದ್ದೆ. ಆದರೆ, ಇವೆಲ್ಲ ಶುಭ ಸೂಚನೆಗಳು ಎಂದು ಭಾವಿಸಿದೆ. ಏಕೆಂದರೆ ಆ ಸಂದರ್ಭಗಳಲ್ಲಿ ಗುಣಮಟ್ಟದ ಪ್ರದರ್ಶನವು ತಂಡಕ್ಕೆ ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧನಾದೆ. ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಆತಂಕ ನನಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದರು.
ಅಂದಹಾಗೆ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್-2024 ಟೂರ್ನಿಯಲ್ಲಿ ಆರ್‌ಸಿಬಿಯನ್ನು ಚಾಂಪಿಯನ್ ಮಾಡಲು ಕೊಹ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. 15 ಪಂದ್ಯಗಳಲ್ಲಿ 154 ಸ್ಟ್ರೈಕ್ ರೇಟ್‌ನೊಂದಿಗೆ 741 ರನ್ ಗಳಿಸಿದರು. ಇದರಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ. ಕೊಹ್ಲಿ ಎಷ್ಟೇ ಪ್ರಯತ್ನಿಸಿದರೂ ಬೆಂಗಳೂರು ಪ್ಲೇಆಫ್‌ಗೆ ಮಾತ್ರ ಸೀಮಿತವಾಯಿತು. ಏಕೆಂದರೆ, ಕೊಹ್ಲಿಗೆ ಇನ್ನುಳಿದ ಆಟಗಾರರು ಸಾಥ್ ನೀಡಲಿಲ್ಲ. ಇದೀಗ ವಿರಾಟ್ ಕೊಹ್ಲಿ ಅವರ ಗಮನ ಟಿ20 ವಿಶ್ವಕಪ್ ಮೇಲಿದೆ. ಈ ಮೆಗಾ ಟೂರ್ನಮೆಂಟ್ನಲ್ಲಿ ರನ್ ಮಳೆ ಸುರಿಸುವ ಮೂಲಕ ಭಾರತವನ್ನು ವಿಜಯಿಯನ್ನಾಗಿ ಮಾಡಲು ಕೊಹ್ಲಿ ಹವಣಿಸುತ್ತಿದ್ದಾರೆ. (ಏಜೆನ್ಸೀಸ್)