ಕ್ರೀಡೆ

ಆ ಒಂದು ಕ್ಷಣ ನಮ್ಮಿಬ್ಬರಿಗೂ ತುಂಬಾ ವಿಶೇಷವಾದದ್ದು: ವಿರಾಟ್​ ಕೊಹ್ಲಿ ಮಾತು ಕೇಳಿ ರೋಹಿತ್​ ಭಾವುಕ

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ಗಳಾದ ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ ಗೆದ್ದ ಕೂಡಲೇ ಟಿ20 ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಇಬ್ಬರು ಆಟಗಾರರಿಗೆ ಬಹು ದಿನಗಳ ಕನಸಾಗಿದ್ದ ವಿಶ್ವಕಪ್​ ಇದೀಗ ನನಸಾಗಿದೆ. ಟೀಮ್​ ಇಂಡಿಯಾದಲ್ಲಿ ಭಾವುಕತೆ ಆವರಿಸಿದೆ. ಈ ಒಂದು ಕಪ್​ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ರೋಹಿತ್​ ಮತ್ತು ಕೊಹ್ಲಿ ನಡುವೆ ಎಲ್ಲವು ಸರಿಯಿಲ್ಲ ಎಂಬ ಗುಸು ಗುಸು ಕೆಲವು ವರ್ಷಗಳ ಹಿಂದೆ ಕೇಳಿಬಂದಿತ್ತು. ಆದರೆ, ಅದೆಲ್ಲ ಸುಳ್ಳು ಎಂಬುದನ್ನು ಇಬ್ಬರು ಇದೀಗ ಸಾಬೀತು ಮಾಡಿದ್ದಾರೆ. ವಿಶ್ವಕಪ್ ಗೆದ್ದ​ ಟೀಮ್​ ಇಂಡಿಯಾ ಆಟಗಾರರಿಗೆ ನಿನ್ನೆ (ಜುಲೈ 04) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬಿಸಿಸಿಐ ಸನ್ಮಾನ ಮಾಡಿತು. ಈ ವೇಳೆ ರೋಹಿತ್​ ಬಗ್ಗೆ ಕೊಹ್ಲಿ ಆಡಿದ ಮಾತುಗಳು ಅವರಿಬ್ಬರ ನಡುವಿನ ಬಾಂದವ್ಯ ಎಂಥದ್ದು ಎಂಬುದನ್ನು ಸಾಬೀತು ಮಾಡಿದೆ. ಹಾಗಾದರೆ ಕೊಹ್ಲಿ ಏನು ಹೇಳಿದರು ಎಂಬುದನ್ನು ನಾವೀಗ ತಿಳಿಯೋಣ.

ಮಾತು ಆರಂಭಿಸಿದ ಕೊಹ್ಲಿ ಮೊದಲು ಕ್ರೀಡಾಂಗಣದಲ್ಲಿ ನೆರೆದಿದ್ದ ಜನರಿಗೆ ಮತ್ತು ಬಸ್​ ಪರೇಡ್​ ವೇಳೆ ನೆರೆದಿದ್ದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಈ ಒಂದು ಕ್ಷಣವನ್ನು ನನ್ನ ಜೀವನದಲ್ಲೇ ನಾನು ಮರೆಯುವುದಿಲ್ಲ. ಕಳೆದ ನಾಲ್ಕು ದಿನಗಳು ಸಾಕಷ್ಟು ಏರಿಳಿತಗಳನ್ನು ಕಂಡೆವು. ನಾವು ವಿಶ್ವಕಪ್​ ಗೆದ್ದೆವು. ಎಷ್ಟು ಸಾಧ್ಯವೋ ಅಷ್ಟು ಬೇಗ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಿಂದ ಭಾರತಕ್ಕೆ ಮರಳಿ ನಮ್ಮ ಜನರೊಂದಿಗೆ ಸಂಭ್ರಮಿಸಲು ಇಚ್ಛಿಸಿದೆವು. ಆದರೆ, ನಾವು ಚಂಡಮಾರುತದಲ್ಲಿ ಸಿಲುಕಿದೆವು. ಇದೊಂದು ರೀತಿಯಲ್ಲಿ ಬೇಸರದ ಸಂಗತಿಯಾದರೂ ನಾಲ್ಕು ದಿನಗಳ ಬಳಿಕ ನಾನು ಭಾರತಕ್ಕೆ ಮರಳಿದೆವು. ನಂತರ ಏನು ನಡೆಯಿತೋ ಅದು ನಿಜವಾಗಿಯೂ ತುಂಬಾ ವಿಶೇಷ ಎಂದು ಕೊಹ್ಲಿ ಹೇಳಿದರು.

ಎಲ್ಲರಿಗೂ ಆದಂತೆ ಒಂದು ಹಂತದಲ್ಲಿ ನಮಗೂ ವಿಶ್ವಕಪ್​ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಇತ್ತು. ಆದರೆ, ಕೊನೆಯ ಐದು ಓವರ್​ನಲ್ಲಿ ಏನು ನಡೆಯಿತೋ ಅದು ನಿಜವಾಗಿಯೂ ತುಂಬಾ ವಿಶೇಷವಾದದ್ದು. ಕೊನೆಯಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ಜಸ್ಪ್ರೀತ್​ ಬುಮ್ರಾ ಅವರಿಗೆ ಒಂದು ದೊಡ್ಡ ಚಪ್ಪಾಳೆಯನ್ನು ತಟ್ಟಿ ಎಂದು ಕೊಹ್ಲಿ ಹೇಳಿದರು. ಈ ವೇಳೆ ಇಡೀ ಮೈದಾನದಲ್ಲಿದವರೆಲ್ಲ ಬುಮ್ರಾ ಬುಮ್ರಾ ಎಂಬ ಘೋಷಣೆಯೊಂದಿಗೆ ಚಪ್ಪಾಳೆಗಳನ್ನು ತಟ್ಟಿ ಅಭಿನಂದನೆಗಳನ್ನು ಸಲ್ಲಿಸಿದರು.

ಮಾತು ಮುಂದುವರಿಸಿದ ಕೊಹ್ಲಿ, ಬುಮ್ರಾ ಬಳಿಕ ಉಳಿದ ಬೌಲರ್​ಗಳು ಕೂಡ ಉತ್ತಮ ಬೌಲಿಂಗ್​ ಮಾಡುವ ಮೂಲಕ ವಿಜಯಲಕ್ಷ್ಮೀಯನ್ನು ಭಾರತದ ಕಡೆ ಎಳೆದುಕೊಂಡರು. ಬುಮ್ರಾರಂತಹ ಬೌಲರ್​ ಒಂದು ತಲೆಮಾರಿಗೆ ಮಾತ್ರ ಬರುತ್ತಾರೆ ಮತ್ತು ಅವರು ನಮ್ಮ ತಂಡದಲ್ಲಿ ಇರುವುದು ಅದೃಷ್ಟ ಎಂದರು.

ಇದೇ ಸಂದರ್ಭದಲ್ಲಿ ರೋಹಿತ್​ ಬಗ್ಗೆ ಮಾತನಾಡಿದ ವಿರಾಟ್​ ಕೊಹ್ಲಿ, ರೋಹಿತ್​ ಕೂಡ ತುಂಬಾ ವರ್ಷಗಳಿಂದ ಟೀಮ್​ ಇಂಡಿಯಾ ಪರ ಆಡಿದ್ದಾರೆ. ನಾವಿಬ್ಬರು ವಿಶ್ವಕಪ್​ಗಾಗಿ ಬಹಳ ವರ್ಷಗಳಿಂದ ಪ್ರಯತ್ನಿಸಿದ್ದೇವೆ. ನಾನು ನಾಯಕನಾಗಿದ್ದಾಗ ತಂಡದಲ್ಲಿ ರೋಹಿತ್​ ಹಿರಿಯ ಆಟಗಾರರಾಗಿದ್ದರು. ಇದೀಗ ಅವರ ನಾಯಕತ್ವದಲ್ಲಿ ನಾನು ಹಿರಿಯ ಆಟಗಾರನಾಗಿದ್ದೇನೆ. ಇಬ್ಬರ ಗುರಿ ಒಂದೇ ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಬೇಕು ಎಂಬುದಾಗಿತ್ತು. ಇಂದು ಅದು ನಿಜವಾಗಿದೆ ಎಂದು ಕೊಹ್ಲಿ ಹೇಳಿದರು.

ನಾವಿಬ್ಬರು ಹೆಗಲ ಮೇಲೆ ಕೈಹಾಕಿ ತೆಗೆಸಿರುವ ಫೋಟೋ ಇಂಟರ್ನೆಟ್​ನಲ್ಲಿ ಎಷ್ಟು ವೈರಲ್​ ಆಗಿದೆಯೋ ನನಗೆ ಗೊತ್ತಿಲ್ಲ. ಆದರೆ, ಕಳೆದ 15 ವರ್ಷಗಳಲ್ಲಿ ರೋಹಿತ್​ ಇಷ್ಟೊಂದು ಭಾವುಕರಾಗಿದ್ದನ್ನು ನೋಡಿದ್ದು ನಾನು ಇದೇ ಮೊದಲು. ನಾನು ಮೆಟ್ಟಿಲುಗಳನ್ನು ಇಳಿದು ಬರುವಾಗ ರೋಹಿತ್​ ಕಣ್ಣೀರಿಡುತ್ತಿದ್ದ ಮತ್ತು ನಾನು ಕೂಡ ಕಣ್ಣೀರಾಕುತ್ತಿದ್ದೆ. ಇಬ್ಬರು ಒಬ್ಬರನ್ನೊಬ್ಬರು ಅಪ್ಪಿಕೊಂಡೆವು. ಆ ಒಂದು ಕ್ಷಣ ನಮ್ಮಿಬ್ಬರಿಗೂ ತುಂಬಾ ವಿಶೇಷವಾದ್ದದ್ದು, ಆ ದಿನವನ್ನು ಎಂದಿಗೂ ಮರೆಯುವುದಿಲ್ಲ ಎಂದು ವಿವರಿಸಿದರು. ಟೀಂ ಇಂಡಿಯಾಗೆ ಕಪ್ ನೀಡಲು ರೋಹಿತ್ ಜೊತೆಗೂಡಿ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ, ಈಗ ಅದು ಈಡೇರಿದೆ ಎಂದರು. ವಾಂಖೆಡೆಗೆ ಟ್ರೋಫಿ ತಂದಿದ್ದು ವಿಶೇಷವಾದ ಅನುಭವ ಎಂದು ಕೊಹ್ಲಿ ಭಾಷಣ ಮುಗಿಸಿದರು.

ಟೀಮ್​ ಇಂಡಿಯಾಗೆ ಭವ್ಯ ಸ್ವಾಗತ ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ನಿನ್ನೆ (ಜುಲೈ 04) ತವರಿಗೆ ಮರಳಿದ ಟೀಮ್​ ಇಂಡಿಯಾಗೆ ಭವ್ಯ ಸ್ವಾಗತ ಸಿಕ್ಕಿತು. ತಾಯ್ನಾಡಿಗೆ ಬಂದ ಕೂಡಲೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಟೀಮ್​ ಇಂಡಿಯಾ, ನಂತರ ಮುಂಬೈಗೆ ಪ್ರಯಾಣ ಬೆಳೆಸಿತು. ರೋಹಿತ್​ ಶರ್ಮ ಪಡೆ ಮುಂಬೈ ಆಗಮಿಸಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮಹಾನಗರವನ್ನು ತಲುಪಿದರು. ವಿಮಾನ ನಿಲ್ದಾಣ, ವಾಂಖೆಡೆ ಸ್ಟೇಡಿಯಂ, ಬಸ್ ನಿಲ್ದಾಣ ಹಾಗೂ ಮೆಟ್ರೋ, ರೈಲು ನಿಲ್ದಾಣ ಎತ್ತ ನೋಡಿದರು ಜನವೋ ಜನ! ವಿಮಾನ ನಿಲ್ದಾಣದಲ್ಲಿ ರೋಹಿತ್ ಸೇನೆಯನ್ನು ಸ್ವಾಗತಿಸಿದ ಅಭಿಮಾನಿಗಳು ಆ ನಂತರವೂ ಅವರನ್ನು ಹಿಂಬಾಲಿಸಿದರು. ವಿಮಾನ ನಿಲ್ದಾಣದಿಂದ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು. ಭಾರತೀಯ ಆಟಗಾರರು ಬಸ್‌ನಿಂದಲೇ ಅಭಿಮಾನಿಗಳಿಗೆ ವಿಶ್ವಕಪ್​ ಪ್ರದರ್ಶಿಸಿದರು. ಪ್ರತಿ ಹೆಜ್ಜೆಗೂ ಅಭಿಮಾನಿಗಳು ಆಟಗಾರರನ್ನು ಹುರಿದುಂಬಿಸಿದರು. ಭಾರತ್ ಮಾತಾ ಕೀ ಜೈ ಘೋಷಣೆಗಳು ಮೊಳಗಿಸಿದರು. ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರನ್ನು ಸನ್ಮಾನಿಸಲಾಯಿತು. (ಏಜೆನ್ಸೀಸ್​)