ಕ್ರೀಡೆ

ರಾಜಸ್ಥಾನ ವಿರುದ್ಧ ಸೋತರೂ ಟೀಮ್​ ಇಂಡಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದ ಆರ್​ಸಿಬಿ

ಜೈಪುರ: ಇಲ್ಲಿನ ಸವಾಯ್​ ಮಾನ್​​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್​ ನಡುವಿನ 17ನೇ ಆವೃತ್ತಿಯ 19ನೇ ಐಪಿಎಲ್​​ ಪಂದ್ಯದಲ್ಲಿ ಆರ್​ಆರ್​ ವಿರುದ್ಧ ಆರ್​ಸಿಬಿ ಸೋತರೂ ವಿರಾಟ್​ ಕೊಹ್ಲಿ ಶತಕದ ನೆರವಿನಿಂದ ಹಲವು ದಾಖಲೆಗಳನ್ನು ಬರೆಯಲಾಗಿದೆ. ಇದೀಗ ವಿರಾಟ್​ ಕೊಹ್ಲಿ ಅಲ್ಲದೇ ಆರ್​ಸಿಬಿ ತಂಡ ಕೂಡ ಹೊಸ ದಾಖಲೆಯೊಂದನ್ನು ಬರೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೀಮ್ ಇಂಡಿಯಾದ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಮುರಿದಿದೆ. ಅಂದರೆ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ತಂಡವೆಂಬ ವಿಶ್ವ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ.

ಟೀಮ್​ ಇಂಡಿಯಾ ಇಲ್ಲಿಯವರೆಗೂ 217 ಟಿ-20 ಪಂದ್ಯಗಳನ್ನು ಆಡಿದ್ದು, ಭಾರತದ ಬ್ಯಾಟ್ಸ್​​ಮನ್​ಗಳು ಒಟ್ಟು 17 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ತಂಡವೆಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿತ್ತು.ಆದರೀಗ ಈ ವಿಶ್ವ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುರಿದಿದೆ. ಟಿ20 ಕ್ರಿಕೆಟ್​ನಲ್ಲಿ 246 ಪಂದ್ಯಗಳನ್ನಾಡಿರುವ ಆರ್​ಸಿಬಿ ಪರ 18 ಶತಕಗಳು ಮೂಡಿಬಂದಿವೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ತಂಡ ಎಂಬ ದಾಖಲೆಯನ್ನು ಆರ್​ಸಿಬಿ ಪಾಲಾಗಿದೆ.

ಆರ್​ಸಿಬಿ ಪರ ಸಿಡಿಸಲಾಗಿರುವ 18 ಶತಕಗಳಲ್ಲಿ ವಿರಾಟ್​ ಕೊಹ್ಲಿ (08), ಕ್ರಿಸ್ ಗೇಲ್ (05), ಎಬಿ ಡಿವಿಲಿಯರ್ಸ್ (02), ದೇವದತ್ ಪಡಿಕ್ಕಲ್ (01), ರಜತ್ ಪಾಟಿದಾರ್ (01), ಮನೀಶ್ ಪಾಂಡೆ (01) ಆರ್​ಸಿಬಿ ಪರ ಶತಕಗಳನ್ನು ಸಿಡಿಸಿದ್ದಾರೆ. ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ತಂಡಗಳ ಪಟ್ಟಿಯಲ್ಲಿ  ಆರ್​ಸಿಬಿ (18), ಪಂಜಾಬ್ ಕಿಂಗ್ಸ್ (14) ಹಾಗೂ ರಾಜಸ್ಥಾನ ರಾಯಲ್ಸ್​ (14) ನಂತರದ ಸ್ಥಾನದಲ್ಲಿವೆ.