ಕ್ರೀಡೆ

ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಪೈಪೋಟಿ! 'ರನ್​ಮಷಿನ್​' ಮುಡಿಗೇರಲಿವೆ ಹಲವು ದಾಖಲೆಗಳು | Virat Kohli

Virat Kohli: ಐಪಿಎಲ್ 18ನೇ ಆವೃತ್ತಿಯು ಇದೀಗ ಕೊನೆಯ ಹಂತಕ್ಕೆ ತಲುಪಿದ್ದು, ಇಂದಿನ ಆರ್​ಸಿಬಿ ಮತ್ತು ಲಖನೌ ಸೂಪರ್ ಜೈಂಟ್ಸ್ ಪಂದ್ಯದ ಬಳಿಕ ಪ್ಲೇಆಫ್​ ಪಂದ್ಯಗಳು ಶರುವಾಗಲಿವೆ. ಲೀಗ್ ಹಂತದ ಕಡೆಯ ಪಂದ್ಯ ಇದಾಗಿದ್ದು, ಆರ್​ಸಿಬಿ ಗೆಲುವಿಗಾಗಿ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ.

'ರನ್​ ಮಷಿನ್'​ ದಾಖಲೆ

ಇಂದಿನ ಪಂದ್ಯದಲ್ಲಿ ಲಖನೌ ಎದುರು ಗೆದ್ದು ಈ ಸೀಸನ್​ನ ಪ್ಲೇಆಫ್​ ಕ್ವಾಲಿಫೈರ್​ 1ಕ್ಕೆ ಭರ್ಜರಿ ಎಂಟ್ರಿಕೊಡಲು ಸಜ್ಜಾಗಿರುವ ಆರ್​ಸಿಬಿ, 18 ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಉಳಿಯುವ ಗುರಿಯನ್ನು ಹೊಂದಿದೆ. ಇದು ನಿರೀಕ್ಷಿಸಿದಷ್ಟು ಸುಲಭವಿಲ್ಲ. ಕಾರಣ, ಎಲ್​ಎಸ್​ಜಿ ಕೂಡ ಲೀಗ್​ನ ಕೊನೆಯ ಪಂದ್ಯವನ್ನು ಆಡಲಿದ್ದು, ಗೆಲುವಿನ ಮೂಲಕ 18ನೇ ಆವೃತ್ತಿಗೆ ಗುಡ್​ಬೈ ಹೇಳುವ ಬಯಕೆಯಲ್ಲಿದೆ. ಹೀಗಿರುವಾಗ ಎರಡೂ ತಂಡಗಳಿಗೂ ಇದು ಗೆಲ್ಲಲೇ ಬೇಕಾದ ಪಂದ್ಯ ಎಂಬುದು ಗಮನಾರ್ಹ.

ಈ ಆವೃತ್ತಿಯ ಆರಂಭದ ಪಂದ್ಯದಿಂದಲೂ ತಂಡದ ಪರ ಉತ್ತಮ ಇನ್ನಿಂಗ್ಸ್​ ನೀಡಿರುವ ವಿರಾಟ್​ ಕೊಹ್ಲಿ, ಕಳೆದ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಐಪಿಎಲ್​ ಆಟಗಾರನಾಗಿ ಹೊರಹೊಮ್ಮಿದರು. ಅಂತೆಯೇ ಈ ಬಾರಿಯೂ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಹೆಚ್ಚುವರಿ ರನ್​ ಗಳಿಸಿರುವ ಕೊಹ್ಲಿ, 2025ರಲ್ಲಿಯೂ ಆರೆಂಜ್​ ಕ್ಯಾಪ್​ ಮುಡಿಗೇರಿಸಿಕೊಳ್ಳುವುದು ಖಚಿತ. ಈ ನಿರ್ಣಾಯಕ ಪಂದ್ಯದಲ್ಲಿ ವಿರಾಟ್​ ಹಲವಾರು ದಾಖಲೆಗಳನ್ನು ಮುರಿಯುವುದು ಮತ್ತೊಂದು ವಿಶೇಷ. ಅಸಲಿಗೆ ಇಂದಿನ ಪಂದ್ಯದಲ್ಲಿ 24 ರನ್ ಗಳಿಸಿದರೆ, ಆರ್‌ಸಿಬಿ ಪರ ಕೊಹ್ಲಿ 9,000 ರನ್‌ಗಳ ಮೈಲಿಗಲ್ಲನ್ನು ತಲುಪುತ್ತಾರೆ. ಇದು ಐತಿಹಾಸಿಕ ದಾಖಲೆಯಾಗಲಿದೆ.

2008ರಿಂದಲೂ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ವಿರಾಟ್​, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಆರ್‌ಸಿಬಿ ಪರ 270 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಕೇವಲ ಐಪಿಎಲ್​ನಲ್ಲೇ ಇಲ್ಲಿಯವರೆಗೆ 8,976 ರನ್ ಗಳಿಸಿರುವ ಕೊಹ್ಲಿ, 9,000ಕ್ಕೆ 24 ರನ್​ಗಳ ದೂರವಿದ್ದಾರೆ. ಇದರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳಲ್ಲಿ 424 ರನ್‌ ಗಳಿಸಿದರೆ, ಐಪಿಎಲ್‌ನಲ್ಲಿ 256 ಇನ್ನಿಂಗ್ಸ್‌ಗಳಲ್ಲಿ 8,552 ರನ್‌ಗಳನ್ನು ದಾಖಲಿಸಿದ್ದಾರೆ.

ಡೇವಿಡ್ ವಾರ್ನರ್ ದಾಖಲೆ ಬ್ರೇಕ್​

ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರಾಗಿ ಮುಂದುವರೆದಿದ್ದಾರೆ. ಇಬ್ಬರೂ ಐಪಿಎಲ್‌ನಲ್ಲಿ 62 ಬಾರಿ ಅರ್ಧಶತಕ ಗಳಿಸಿದ್ದಾರೆ. ಇಂದಿನ ಎಲ್​ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಏನಾದರೂ ಅರ್ಧಶತಕ ಸಿಡಿಸಿದರೆ, ಅವರು ವಾರ್ನರ್‌ ದಾಖಲೆ ಮುರಿಯಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರನಾಗಿ ಡೇವಿಡ್​ ದಾಖಲೆಯನ್ನು ಮುರಿದು ತಮ್ಮದೇ ದಾಖಲೆಯನ್ನು ಬರೆಯಲಿದ್ದಾರೆ. ಇವರಿಬ್ಬರ ನಂತರದಲ್ಲಿ ರೋಹಿತ್ ಶರ್ಮ ಹೆಸರಿದೆ. 46 ಅರ್ಧಶತಕಗಳೊಂದಿಗೆ ಈ ಪಟ್ಟಿಯಲ್ಲಿ ಹಿಟ್​ಮ್ಯಾನ್​ ಮೂರನೇ ಸ್ಥಾನದಲ್ಲಿದ್ದಾರೆ.

12 ಪಂದ್ಯ 548 ರನ್

ಈ ಸೀಸನ್​ನಲ್ಲಿ ಇಲ್ಲಿಯವರೆಗೆ ಆರ್​ಸಿಬಿ ಒಟ್ಟು 13 ಲೀಗ್ ಪಂದ್ಯಗಳನ್ನು ಆಡಿದೆ. ಅದರಲ್ಲಿ 8 ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳನ್ನು ಸೋತಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದಾಯಿತು. ಪ್ರಸ್ತುತ ಆರ್‌ಸಿಬಿ 17 ಅಂಕಗಳನ್ನು ಪಡೆದಿದ್ದು, +0.255 ರನ್​ರೇಟ್​ ಹೊಂದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಲಖನೌ ಎದುರು ಗೆದ್ದರೆ, ಆರ್‌ಸಿಬಿ ಅಗ್ರ 2ನೇ ಸ್ಥಾನಕ್ಕೆ ಜಿಗಿಯುತ್ತದೆ ಮತ್ತು ಕ್ವಾಲಿಫೈಯರ್-1ಗೆ ಪ್ರವೇಶ ಪಡೆಯುತ್ತದೆ. ಈ ಪಂದ್ಯದಲ್ಲಿ ಆರ್‌ಸಿಬಿ ಸೋತರೆ, ಗುಜರಾತ್ ಟೈಟನ್ಸ್ ಅಗ್ರ 2ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್-1 ಗೆ ಪ್ರವೇಶಿಸಲಿದೆ,(ಏಜೆನ್ಸೀಸ್).