Virat Kohli : ವಿಶ್ವ ಕ್ರಿಕೆಟ್ ಜಗತ್ತಿನ ದಾಖಲೆಗಳ ಸರದಾರ, ಚೇಸ್ ಮಾಸ್ಟರ್, ರನ್ ಮೆಷಿನ್ ಎಂದೇ ಖ್ಯಾತಿಯಾಗಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸೃಷ್ಟಿಸಿದರು.
ಒಟ್ಟು 386 ಇನ್ನಿಂಗ್ಸ್‌ಗಳಲ್ಲಿ 13 ಸಾವಿರ ರನ್ ಗಡಿ ದಾಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಸೀಸನ್ ಭಾಗವಾಗಿ, ಸೋಮವಾರ (ಏಪ್ರಿಲ್ 07) ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ಈ ಮೂಲಕ ಟಿ20 ಇತಿಹಾಸದಲ್ಲಿ 13 ಸಾವಿರ ರನ್ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.
ಇದಕ್ಕೂ ಮೊದಲು ಟಿ20 ಪಂದ್ಯಗಳಲ್ಲಿ 13,000 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ಗಳೆಂದರೆ ಕ್ರಿಸ್ ಗೇಲ್ (381 ಇನ್ನಿಂಗ್ಸ್‌ಗಳಲ್ಲಿ 14,562 ರನ್‌ಗಳು), ಅಲೆಕ್ಸ್ ಹೇಲ್ಸ್ (474 ಇನ್ನಿಂಗ್ಸ್‌ಗಳಲ್ಲಿ 13,610 ರನ್‌ಗಳು), ಶೋಯೆಬ್ ಮಲಿಕ್ (487 ಇನ್ನಿಂಗ್ಸ್‌ಗಳಲ್ಲಿ 13,557 ರನ್‌ಗಳು) ಮತ್ತು ಪೊಲಾರ್ಡ್ (594 ಇನ್ನಿಂಗ್ಸ್‌ಗಳಲ್ಲಿ 13,537 ರನ್‌ಗಳು).
ಕೊಹ್ಲಿ ಫಾರ್ಮ್ ಇದೇ ರೀತಿ ಮುಂದುವರಿದರೆ ಎಲ್ಲರ ದಾಖಲೆಗಳನ್ನು ಮುರಿದು ಟಿ20ಯಲ್ಲಿ ಕಿಂಗ್ ಆಗುವುದರಲ್ಲಿ ಸಂದೇಹವೇ ಇಲ್ಲ. ಸದ್ಯ ಕೊಹ್ಲಿ ಫಿಟ್ ಆಗಿದ್ದಾರೆ. ಹೀಗಾಗಿ ಇನ್ನಷ್ಟು ವರ್ಷಗಳ ಕಾಲ ಐಪಿಎಲ್ ಆಡಲಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಕೊಹ್ಲಿ ನಿವೃತ್ತಿ ಹೇಳಿರುವುದರಿಂದ ಐಪಿಎಲ್ ಫಾರ್ಮಾಟ್ಯ್ನಲ್ಲಿ ಮಾತ್ರ ಈ ದಾಖಲೆ ಮುರಿಯಲು ಅವಕಾಶವಿದೆ. ಮುರಿಯುತ್ತಾರೆ ಅನ್ನೋ ನಂಬಿಕೆ ಕೂಡ ಅಭಿಮಾನಿಗಳಲ್ಲಿ ಇದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಏ.07) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆರ್ಸಿಬಿಗೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ (4) ವಿಕೆಟ್ ಒಪ್ಪಿಸಿ ಆಘಾತ ನೀಡಿದರು. ಆದರೆ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (67), ದೇವದತ್ ಪಡಿಕ್ಕಲ್ (37), ರಜತ್ ಪಾಟಿದಾರ್ (64) ಹಾಗೂ ಜಿತೇಶ್ ಶರ್ಮ (40) ಸ್ಫೋಟಕ ಬ್ಯಾಟಿಂಗ್ ದಾಳಿ ನಡೆಸಿ, ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಸಿಗದೆ, ಕಡೆಗೂ ಸೋಲಿನ ಸುಳಿಯಲ್ಲಿ ಸಿಲುಕಿತು.
ಮುಂಬೈ ಪರ ಆರಂಭಿಕರಾದ ರೋಹಿತ್ ಶರ್ಮ ಎಂದಿನಂತೆ ಕಳಪೆ ಪ್ರದರ್ಶನ ಇಲ್ಲಿಯೂ ಮುಂದುವರಿಸಿದರು. ಆರಂಭದಲ್ಲೇ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಬೆನ್ನಲ್ಲೇ ಒಬ್ಬರಂತೆ ಮತ್ತೊಬ್ಬರು ಬ್ಯಾಟರ್ಗಳು ವಿಕೆಟ್ ಒಪ್ಪಿಸಿ, ಪೆವಿಲಿಯನ್ನತ್ತ ಸಾಗಿದರು. ಈ ಮಧ್ಯೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೇ ಕ್ಯಾಪ್ಟನ್ ಪ್ರದರ್ಶನ ತೋರಿದರು. ಹಾರ್ದಿಕ್ ಮತ್ತು ತಿಲಕ್ ವರ್ಮ ನೀಡಿದ ಉತ್ತಮ ಇನ್ನಿಂಗ್ಸ್ ಕಡೆಗೂ ಫಲಿಸಲಿಲ್ಲ. ಇವರಿಬ್ಬರ ಹೋರಾಟವು ಫಲಿಸಲಿಲ್ಲ ಎಂಬುದೇ ಎಂಐ ಫ್ರಾಂಚೈಸಿ ಅಭಿಮಾನಿಗಳ ಬೇಸರ. ಇನ್ನು ಈ ಪಂದ್ಯದಲ್ಲಿಯೂ ಗೆದ್ದು ಬೀಗಿದ ಆರ್ಸಿಬಿ, ಐಪಿಎಲ್ನಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿದೆ. (ಏಜೆನ್ಸೀಸ್)