ಕ್ರೀಡೆ

ಏಕದಿನ ಪಂದ್ಯಗಳಲ್ಲಿ ವೇಗದ 12,000 ರನ್ - ಸಚಿನ್ ದಾಖಲೆ ಮುರಿದ ಕೊಹ್ಲಿ

ಕ್ಯಾನ್​ಬೆರಾ: ಆತಿಥೇಯ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಕೊನೆಯ ಏಕದಿನ ಪಂದ್ಯ ಇಂದು ನಡೆಯುತ್ತಿದೆ. ಸತತ ಎರಡು ಸೋಲುಗಳ ಬಳಿಕ ವೈಟ್​ವಾಷ್​ ತಪ್ಪಿಸುವ ಸಲುವಾಗಿ ಹೋರಾಟ ನಡೆಸುತ್ತಿರುವ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದರು. ಸಚಿನ್ ತೆಂಡೂಲ್ಕರ್ ಅವರು ಏಕದಿನ ಪಂದ್ಯಗಳಲ್ಲಿ ವೇಗದ 12,000 ರನ್ ಮೈಲಿಗಲ್ಲನ್ನು ಕೊಹ್ಲಿ ಇಂದು ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಈ ರೀತಿ 12,000 ರನ್ ಗಡಿ ದಾಟಿದ ಆರನೇ ಕ್ರಿಕೆಟಿಗ ಎಂಬ ಕೀರ್ತಿಗೂ ಅವರು ಈಗ ಭಾಜನರು. ಸಚಿನ್ ತೆಂಡೂಲ್ಕರ್ ಅವರು ಈ ದಾಖಲೆ ಬರೆದ ಮೊದಲಿಗರು. ಈ ಪಂದ್ಯ ಆರಂಭಕ್ಕೆ ಮುನ್ನ ಕೊಹ್ಲಿ ಅವರು 12,000 ರನ್ ಗಡಿ ದಾಟಲು 23 ರನ್ ಗಳಿಸಬೇಕಾಗಿತ್ತು. ಸದ್ಯ ವಿರಾಟ್ ಕೊಹ್ಲಿ 33 ರನ್​ಗಳೊಂದಿಗೆ ಮತ್ತು ಶ್ರೇಯಸ್ ಅಯ್ಯರ್ 2 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಕುಮಾರ ಸಂಗಕ್ಕಾರ (ಶ್ರೀಲಂಕಾ), ರಿಕ್ಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಸನತ್ ಜಯಸೂರ್ಯ (ಶ್ರೀಲಂಕಾ), ಮಹೇಲಾ ಜಯವರ್ಧನೆ (ಶ್ರೀಲಂಕಾ) ಇದಕ್ಕೂ ಮುನ್ನ 12,000 ರನ್​ ಗಡಿ ದಾಟಿ ದಾಖಲೆ ಬರೆದವರು. ಸಚಿನ್ ತೆಂಡೂಲ್ಕರ್ 300 ಇನ್ನಿಂಗ್ಸ್ ಆಡಿ ಈ ದಾಖಲೆ ಬರೆದರೆ, ಕೊಹ್ಲಿ 242 ಇನ್ನಿಂಗ್ಸ್​ ನಲ್ಲೇ ಈ ದಾಖಲೆ ನಿರ್ಮಿಸಿ ಗಮನಸೆಳೆದಿದ್ದಾರೆ. (ಏಜೆನ್ಸೀಸ್)