ಕ್ರೀಡೆ

ವಿರಾಟ್​​ ಕೊಹ್ಲಿ ಭಾರತ ಬಿಟ್ಟು ಹೋಗುವುದೇಕೆ? ಸ್ಫೋಟಕ ಕಾರಣ ತಿಳಿಸಿದ ಗ್ಲೆನ್​ ಮ್ಯಾಕ್ಸ್​ವೆಲ್! Virat Kohli

Virat Kohli : ವಿರಾಟ್​ ಕೊಹ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್​ನಲ್ಲೇ ಅತ್ಯಂತ ಜನಪ್ರಿಯ ಆಟಗಾರ. ಸದ್ಯ ಕ್ರಿಕೆಟ್​ನಲ್ಲಿ ಫಾರ್ಮ್​ ಕಳೆದುಕೊಂಡು ಪರದಾಡುತ್ತಿದ್ದರೂ ಕೊಹ್ಲಿ ಮೇಲಿನ ಅಭಿಮಾನ ಮಾತ್ರ ಯಾರಿಗೂ ಕಡಿಮೆಯಾಗಿಲ್ಲ. ಕ್ರಿಕೆಟ್​ ಹೊರತಾಗಿ ಇತ್ತೀಚೆಗೆ ಕೊಹ್ಲಿ ಬಗ್ಗೆ ಒಂದು ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಅದೇನೆಂದರೆ, ಕೊಹ್ಲಿ ಅವರು ಶೀಘ್ರದಲ್ಲೇ ಭಾರತವನ್ನು ತೊರೆಯಲಿದ್ದು, ಇಂಗ್ಲೆಂಡ್​ನ ಲಂಡನ್​ನಲ್ಲಿ ಕುಟುಂಬ ಸಮೇತ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ಕೊಹ್ಲಿಯಾಗಲಿ ಅಥವಾ ಅವರ ಪತ್ನಿ ಅನುಷ್ಕಾ ಶರ್ಮಾವಾಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆ ನೀಡಿಲ್ಲ. ಆದರೆ, ಅವರ ಆಪ್ತ ವಲಯ ಮಾತ್ರ ಈ ಬಗ್ಗೆ ಮಾತನಾಡುತ್ತಿವೆ. ಇತ್ತೀಚೆಗಷ್ಟೇ ಕೊಹ್ಲಿ ಅವರ ಕ್ರಿಕೆಟ್​ ಕೋಚ್​ ರಾಜ್‌ಕುಮಾರ್ ಶರ್ಮಾ ಕೂಡ ಈ ಬಗ್ಗೆ ಮಾತನಾಡಿದ್ದರು. ಹೌದು, ವಿರಾಟ್ ಕೊಹ್ಲಿ ಅವರು ಸಂಪೂರ್ಣವಾಗಿ ಲಂಡನ್‌ಗೆ ಸ್ಥಳಾಂತರಗೊಳ್ಳಲು ಯೋಜಿಸಿದ್ದಾರೆ. ಶೀಘ್ರದಲ್ಲೇ ಅವರು ಶಾಶ್ವತವಾಗಿ ಭಾರತವನ್ನು ತೊರೆಯಲಿದ್ದಾರೆ ಎಂದಿದ್ದರು. ಆದರೆ, ಕಾರಣ ಏನು ಎಂಬುದನ್ನು ತಿಳಿಸಿರಲಿಲ್ಲ.

ಇನ್ನು ಭಾರತದಲ್ಲಿ ತನ್ನ ಮಕ್ಕಳು ಎಂದಿಗೂ ಖಾಸಗಿ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿರುವುದರಿಂದ ಕೊಹ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವರದಿಗಳು ಸಹ ಹೊರಬಿದ್ದವು. ಆದರೆ, ಇದೀಗ ಆಸ್ಟ್ರೇಲಿಯಾದ ಸ್ಟಾರ್​ ಕ್ರಿಕೆಟಿಗ ಹಾಗೂ ಆರ್​ಸಿಬಿ ತಂಡದ ಮಾಜಿ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ LiSTNR ಸ್ಪೋರ್ಟ್‌ ಪಾಡ್‌ಕ್ಯಾಸ್ಟ್‌ನಲ್ಲಿ ಅಸಲಿ ಕಾರಣವನ್ನು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಒಟ್ಟಿಗೆ ಆಡುತ್ತಿದ್ದಾಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತರಬೇತಿ ಮುಗಿಸಿ ಹೋಟೆಲ್​ಗೆ ಕೊಹ್ಲಿ ಜತೆ ಹೋಗುವಾಗ ನಡೆದ ಘಟನೆಯನ್ನು ಆಸ್ಟ್ರೇಲಿಯಾದ ಸೂಪರ್‌ಸ್ಟಾರ್ ಮ್ಯಾಕ್ಸಿ ವಿವರಿಸಿದ್ದಾರೆ. ಸ್ಟೇಡಿಯಂ ತಲುಪಿ ಬಹಳ ಹೊತ್ತು ಇಬ್ಬರು ಒಟ್ಟಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಿದೆವು. ಬಳಿಕ ಕೊಹ್ಲಿ ಹೋಟೆಲ್​ಗೆ ಹಿಂತಿರುಗಬೇಕಾಯಿತು. ನಾವಿಬ್ಬರು ಕಾರಿನಲ್ಲಿ ಹಿಂತಿರುಗಿದೆವು. ನಮ್ಮ ಕಾರಿನ ಮುಂದಿನ ಸೀಟಿನಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಇದ್ದ. ಭದ್ರತೆಯ ಭಾಗವಾಗಿ ನಮ್ಮ ಕಾರಿನ ಹಿಂದೆ ಪೊಲೀಸರು ತುಂಬಿದ್ದ ಮತ್ತೊಂದು ಕಾರು ಕೂಡ ಹಿಂಬಾಲಿಸುತ್ತಿತ್ತು.

ಕಾರು ಸ್ಟೇಡಿಯಂನಿಂದ ಹೊರಗೆ ಬರುತ್ತಿದ್ದಂತೆ ವಿರಾಟ್ ಕೊಹ್ಲಿ ಒಳಗಿರುವುದನ್ನು ಅರಿತ ಜನರು ಕಾರಿನತ್ತ ಓಡಿ ಬಂದರು. ಕಾರು ಮತ್ತು ಕಾರಿನ ಕಿಟಕಿ ಗಾಜನ್ನು ಬಡಿಯಲು ಪ್ರಾರಂಭಿಸಿದರು ಮತ್ತು ತೆರೆಯಲು ಪ್ರಯತ್ನಿಸಿದರು. ಕೊಹ್ಲಿ ತಮ್ಮತ್ತ ನೋಡಲಿ ಎಂದು ಆ ರೀತಿ ಮಾಡುತ್ತಿದ್ದರು. ಆ ಪರಿಸ್ಥಿತಿಯಲ್ಲಿ ನನಗೂ ತುಂಬಾ ಭಯವಾಯಿತು. ಇಂತಹ ಪರಿಸ್ಥಿತಿಯಲ್ಲಿ ನೀವು ಪ್ರತಿದಿನ ಇಲ್ಲಿ ಹೇಗೆ ವಾಸಿಸುತ್ತೀರಿ ಎಂದು ವಿರಾಟ್​ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನಾನು ಪ್ರತಿನಿತ್ಯ ಎದುರಿಸುತ್ತಿರುವುದು ಇದನ್ನೇ ಎಂದು ಉತ್ತರಿಸಿದರು ಎಂದು ಮ್ಯಾಕ್ಸಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಖಾಸಗಿತನ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೊಹ್ಲಿ ಭಾರತವನ್ನು ತೊರೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮ್ಯಾಕ್ಸಿ ಹೇಳಿದ್ದಾರೆ. (ಏಜೆನ್ಸೀಸ್​)