ಕ್ರೀಡೆ

ಶತಕಗಳ ಸರದಾರ ವಿರಾಟ್​ಗೆ ಗಂಗೂಲಿ ಮೆಚ್ಚುಗೆ!; ಮಾಜಿ ನಾಯಕ ಹೇಳಿದ್ದಿಷ್ಟು

ಮುಂಬೈ: ಏಕದಿನ ವಿಶ್ವಕಪ್​ನ ಒಂದೇ ಇನ್ನಿಂಗ್ಸ್​ನಲ್ಲಿ ಸಚಿನ್ ತೆಂಡುಲ್ಕರ್ ಅವರ ಎರಡು ದಾಖಲೆಗಳನ್ನು ಮುರಿಯುವ ಜತೆಗೆ ಹೆಗ್ಗಳಿಕೆಯೊಂದಕ್ಕೂ ಪಾತ್ರರಾದ ರನ್​ ಮಷಿನ್​ ವಿರಾಟ್ ಕೊಹ್ಲಿಗೆ ಇದೀಗ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿತು. ಭರ್ಜರಿ ಓಪನಿಂಗ್​ ನೀಡಿದ ರೋಹಿತ್​-ಶುಭಮನ್​ ಗಿಲ್​ ಉತ್ತಮ ರನ್​ ತಂದುಕೊಟ್ಟು, ತಮ್ಮ ತಂಡಕ್ಕೆ ಅದನ್ನು ಮುಂದುವರಿಸಲು ಬಿಟ್ಟರು. ಈ ವೇಳೆ ವಿರಾಟ್​ ಕೊಹ್ಲಿ ಜತೆಗೂಡಿದ ಶ್ರೇಯಸ್​ ಐಯ್ಯರ್​ ಸ್ಪೋಟಕ ಬ್ಯಾಟಿಂಗ್​ ಮಾಡುವ ಮೂಲಕ 397 ಬೃಹತ್​ ಗುರಿಯನ್ನು ನ್ಯೂಜಿಲೆಂಡ್​ಗೆ ನೀಡಿತು.

ಇಂದಿನ ಪಂದ್ಯದಲ್ಲಿ ವಿರಾಟ್​ ತಮ್ಮ 50ನೇ ಶತಕ ಬಾರಿಸಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್​ ಅಭಿಮಾನಿಗಳಲ್ಲಿ ಹೆಚ್ಚಾಗಿಯೇ ಇತ್ತು. ಅದರಂತೆಯೇ ಕೊಹ್ಲಿ ಶತಕ ಸಿಡಿಸುವ ಮುಖೇನ ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸಾಧಿಸಿದರು.

ಈ ಕುರಿತು ಅಭಿನಂದನೆ ತಿಳಿಸಿದ ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ, "ಇದು ಅತ್ಯುತ್ತಮವಾಗಿದೆ. ವಿರಾಟ್ ಕೊಹ್ಲಿ ಅವರ 50ನೇ ಏಕದಿನ ಶತಕ ನಿಜಕ್ಕೂ ಅದ್ಭುತವಾಗಿದೆ" ಎಂದು ಹೇಳಿದರು. ಈ ಮೂಲಕ ವಿರಾಟ್​ ಸಾಧನೆಗೆ ಗಂಗೂಲಿ ವಿಶೇಷ ಅಭಿನಂದನೆ ತಿಳಿಸಿದರು,(ಏಜೆನ್ಸೀಸ್).