ಹೈದರಾಬಾದ್: ಏಪ್ರಿಲ್ 25ರಂದು ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಎಚ್ ನಡುವಿನ ಐಪಿಎಲ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯೂ 35 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಪ್ಲೇ ಆಫ್ ಆಸೆಯನ್ನು ಸ್ವಲ್ಪಮಟ್ಟಿಗೆ ಜೀವಂತವಾಗಿರಿಸಿಕೊಂಡಿದೆ. ಇನ್ನು ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋವನ್ನು ನೋಡುವುದಾದರೆ ಆರ್ಸಿಬಿ ಅಭಿಮಾನಿಯೋರ್ವ ಸ್ಟೇಡಿಯಂನಲ್ಲಿನ ಸ್ಟ್ಯಾಂಡ್‌ವೊಂದರಲ್ಲಿ ಎಸ್ಆರ್ಎಚ್ ಫ್ಯಾನ್ಸ್ಗೆ ಸುಮ್ಮನಿರುವಂತೆ ಆಕ್ರಮಣಕಾರಿಯಾಗಿ ಸೂಚಿಸುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೆ ಆರ್ಸಿಬಿ ಅಭಿಮಾನಿಗಳ ಗುಂಪೊಂದು ತುಟಿಗಳ ಮೇಲೆ ಬೆರಳಿಟ್ಟು ಎಸ್ಆರ್ಎಚ್ ಅಭಿಮಾನಿಗಳ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.
ಇದಲ್ಲದೆ ಮೈದಾನದಲ್ಲಿ ವಿರಾಟ್ ಕೊಹ್ಲಿ ನಗುತ್ತಿರುವುದು ಹಾಗೂ ಆರ್ಸಿಬಿ ಬೌಲರ್ಗಳ ಆರ್ಭಟಕ್ಕೆ ಎಸ್ಆರ್ಎಚ್ ಸಿಇಒ ಕಾವ್ಯಾ ಮಾರನ್ ರಿಯಾಕ್ಷನ್ ಕೂಡ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉಭಯ ತಂಡಗಳ ಅಭಿಮಾನಿಗಳ ನಡುವೆ ಫ್ಯಾನ್ವಾರ್ ಜೋರಾಗಿ ನಡೆಯುತ್ತಿದೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 41ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ರಜತ್ ಪಾಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್), ವಿರಾಟ್ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ಗಳಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಆರ್ಸಿಬಿ ಬೌಲರ್ಗಳು ಎದುರಾಳಿ ತಂಡವನ್ನು 171 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.