ಕ್ರೀಡೆ

80 ಸಾವಿರ ರೂ. ಬೆಲೆಯ ಐಫೋನ್​ ಒಡೆದು ಗ್ಲೌಸ್​ ಕೊಟ್ಟ ಸಿಎಸ್​ಕೆ ಆಟಗಾರ; ವಿಡಿಯೋ ವೈರಲ್​

ಧರ್ಮಶಾಲಾ: 17ನೇ ಆವೃತ್ತಿಯ ಐಪಿಎಲ್​ ಪ್ರಾರಂಭಗೊಂಡು ಈಗಾಗಲೇ 50ಕ್ಕೂ ಹೆಚ್ಚು ಪಂದ್ಯಗಳು ಮುಕ್ತಾಯಗೊಂಡಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಟೂರ್ನಿ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು, ಇದೀಗ ಅದೇ ರೀತಿಯ ಘಟನೆಯೊಂದು ಮತ್ತೊಮ್ಮೆ ನಡೆದಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಭಾನುವಾರ (ಮೇ 05) ಧರ್ಮಶಾಲಾದಲ್ಲಿರುವ ಹಿಮಾಚಲಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಹಾಗೂ ಪಂಜಾಬ್​ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಆಟಗಾರ ಡೇರಿಲ್​ ಮಿಚೆಲ್​, ಮೈದಾನದಲ್ಲಿ ಬ್ಯಾಟಿಂಗ್​ ಅಭ್ಯಾಸ ಮಾಡುತ್ತಿರುವ ವೇಳೆ ಸ್ಟ್ಯಾಂಡ್​ನತ್ತ ಬ್ಯಾಟ್​ ಬೀಸುತ್ತಾರೆ. ಈ ವೇಳೆ ವೇಗವಾಗಿ ಬಂದ ಚೆಂಡು ಅಭಿಮಾನಿಯ ಮುಖಕ್ಕೆ ತಾಗಿ ಬಳಿಕ ವಿಡಿಯೋ ಮಾಡುತ್ತಿದ್ದವರ ಐಫೋನ್​ಗೆ ಬೀಳುತ್ತದೆ. ಕೂಡಲೇ ಮಿಚೆಲ್​ ಕ್ಷಮೆಯಾಚಿಸುತ್ತರಾದರೂ ಹಲವರು ಇವರ ನಡೆಗೆ ಕಿಡಿಕಾರಿದ್ದಾರೆ.

ಬಾಲ್​ ಬಿದ್ದ ರಭಸಕ್ಕೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಐಫೋನ್​ ಸಂಫೂರ್ಣವಾಗಿ ಹಾಳಾಗಿದ್ದು, ಇದಕ್ಕೆ ಪ್ರತಿಯಾಗಿ ಮಿಚೆಲ್​ ಚೆನ್ನೈ ಸೂಪರ್​ಕಿಂಗ್ಸ್​ ಜೆರ್ಸಿ ಹಾಗೂ ಬ್ಯಾಟಿಂಗ್​​ ಗ್ಲೌಸ್​ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಏಟು ಬಿದ್ದ ವ್ಯಕ್ತಿಯ ಆರೋಗ್ಯ ಮಾತ್ರ ವಿಚಾರಿಸಲು ಮುಂದಾಗುವುದಿಲ್ಲ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಐಫೋನ್​ ರಿಪೇರಿ ಮಾಡಿಸುವ ಬದಲು ಗ್ಲೌಸ್​ ಯಾಕೆ ಕೊಟ್ಟಿದ್ದೀರಾ. ಐಫೋನ್​ ಬೆಲೆಗೂ ಗ್ಲೌಸ್​ ಸರಿ ಹೊಂದುವುದಿಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.